ಕಳೇನ ಅಗ್ರಹಾರ ಕೆರೆ ದತ್ತು ಪಡೆದ್ರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಡಿಜಿಟಲ್ ಕನ್ನಡ ಟೀಮ್:

ಬೆಂಗಳೂರಿನ ಕೆರೆಗಳು ದುಸ್ಥಿತಿಯ ಹಂತ ತುಲುಪುತ್ತಿರುವ ಸಂದರ್ಭದಲ್ಲೇ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತರಾಮನ್ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಳೇನ ಅಗ್ರಹಾರ ಕೆರೆಯನ್ನು ದತ್ತು ಪಡೆದು, ಅದರ ರಕ್ಷಣೆಗೆ ಮುಂದಾಗಿದ್ದಾರೆ. ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಪ್ರಯತ್ನ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಒಂದು ಕಾಲದಲ್ಲಿ ವೈವಿಧ್ಯಮಯ ಪಕ್ಷಿಗಳ ತಾಣವಾಗಿದ್ದ, ತನ್ನ ಒಡಲಲ್ಲಿ ಸಾಕಷ್ಟು ಮೀನುಗಳಿಗೆ ಆಶ್ರಯ ನೀಡಿದ್ದ 7.5 ಎಕರೆ ವಿಸ್ತೀರ್ಣದ ಈ ಕೆರೆ ಇಂದು ದುಸ್ಥಿತಿಗೆ ತಲುಪಿದೆ. ಅಕ್ರಮ ಒತ್ತುವರಿ, ಕೊಳಚೆ ನೀರು ಸೇರ್ಪಡೆಯಿಂದಾಗಿ ಇದು ಕೆರೆಯಾಗಿ ಉಳಿಯದೇ ಕೆಸರು ಗುಂಡಿಯಂತಾಗಿದೆ.

ಈ ಕೆರೆಯನ್ನು ಉಳಿಸಿಕೊಳ್ಳಲು ಇಲ್ಲಿನ ಸುತ್ತಮುತ್ತಲ ಬಡಾವಣೆ ಜನರು ತಮ್ಮ ಕೈಯಲ್ಲಾದ ಪ್ರಯತ್ನ ಮಾಡಿದ್ದರು. 2007 ರಿಂದಲೂ ಈ ಪ್ರದೇಶದ ಜನರು ₹ 3 ಲಕ್ಷ ದೇಣಿಗೆ ಸಂಗ್ರಹಿಸಿ ಅದರಿಂದ ಬಂದ ಹಣದಿಂದ ಕೆರೆಯನ್ನು ಕಾಪಾಡಿಕೊಳ್ಳಲು ಹಲವು ಪ್ರಯತ್ನ ಮಾಡಿದ್ದರು. ಆದರೆ ಕೊಳಚೆ ನೀರನ್ನು ನೇರವಾಗಿ ಕೆರೆಗೆ ಬಿಡುತ್ತಿದ್ದ ಹಿನ್ನೆಲೆಯಲ್ಲಿ ಈ ಕೆರೆಯನ್ನು ಕಾಪಾಡಿಕೊಳ್ಳುವುದು ಇಲ್ಲಿನ ನಾಗರೀಕರಿಗೆ ದೊಡ್ಡ ಸವಾಲಾಗಿ ಪರಿಣಾಮಿಸಿತ್ತು. ಈಗ ಸಚಿವರು ಈ ಕೆರೆಯನ್ನು ದತ್ತು ಪಡೆದು ರಕ್ಷಣೆಗೆ ಮುಂದಾಗಿರುವುದು ಇಲ್ಲಿನ ನಾಗರೀಕರಲ್ಲಿ ನೆಮ್ಮದಿ ತಂದಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಈ ಕೆರೆ ಮತ್ತೆ ಜೀವ ಪಡೆಯುವ ನಿರೀಕ್ಷೆ ಹೆಚ್ಚಿದೆ.

ಶನಿವಾರ ಈ ಕೆರೆಯನ್ನು ದತ್ತು ಪಡೆದ ನಿರ್ಮಲಾ ಸೀತಾರಾಮನ್ ಅವರು, ಸದ್ಯದಲ್ಲೇ ಕೊಳಚೆ ನೀರಿನ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಾಗಿ ಭರವಸೆ ಕೊಟ್ಟಿದ್ದಾರೆ. ‘ಈ ಕೆರೆಗೆ ಬರುತ್ತಿರುವ ಕೊಳಚೆ ನೀರಿನ ಮಾರ್ಗವನ್ನು ಬೇರೆಡೆಗೆ ತಿರುಗಿಸಿ ಹರಿಯುವಂತೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಕೆರೆಯಲ್ಲಿನ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ಪರೀಕ್ಷೆ ಮಾಡಿ, ಅದನ್ನು ಇಲ್ಲಿ ಡಿಜಿಟಲ್ ಬೋರ್ಡ್ ಹಾಕಿ ಅದರಲ್ಲಿ ಪ್ರಕಟಿಸಲಾಗುವುದು’ ಎಂದು ತಿಳಿಸಿದ್ದಾರೆ. ಸಚಿವರ ಈ ಭರವಸೆಯಿಂದ ಕೆರೆ ಮತ್ತೆ ತನ್ನ ಹಿಂದಿನ ಸೌಂದರ್ಯಕ್ಕೆ ಮರಳುವ ಭರವಸೆ ಬಂದಿದೆ.

Leave a Reply