ಕಾವೇರಿ ಹೋರಾಟದಲ್ಲಿ ರಾಜ್ಯ ಸರ್ಕಾರ ಕಾಣಹೊರಟಿರುವ ಹೊಸ ಪರಿಹಾರ ಯಾವುದು?

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನಗಳ ಕಾಲ ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಕಾನೂನಿನ ಹೋರಾಟದಲ್ಲಿ ಹಿನ್ನಡೆ ಅನುಭವಿಸುತ್ತಿದ್ದ ರಾಜ್ಯ ಸರ್ಕಾರ ಈಗ ಹೊಸ ಪರಿಹಾರವನ್ನು ಕಂಡುಕೊಂಡಿದೆ. ಅದೇನೆಂದರೆ, ಇಷ್ಟು ದಿನಗಳ ಕಾಲ ಕಾವೇರಿ ನದಿ ಪಾತ್ರದ ಪ್ರದೇಶವನ್ನು ಮಲೆನಾಡಿನ ವರ್ಗಿಕರಣಕ್ಕೆ ಸೇರಿಸಲಾಗಿದ್ದು, ಇಡೀ ಮಲೆನಾಡಿನ ಮಳೆ ಪ್ರಮಾಣದ ವರದಿ ಆಧಾರದ ಮೇಲೆ ಜಲಾಶಯಗಳಲ್ಲಿ ನೀರು ಇಲ್ಲದಿದ್ದರೂ ನ್ಯಾಯಾಲಯ ಹೆಚ್ಚು ನೀರು ಹರಿಸುವಂತೆ ರಾಜ್ಯಕ್ಕೆ ಸೂಚಿಸುತ್ತಿತ್ತು. ಹೀಗಾಗಿ ಈ ಪ್ರದೇಶವನ್ನು ಮಲೆನಾಡಿನ ವರ್ಗೀಕರಣದಿಂದ ಪ್ರತ್ಯೇಕ ಮಾಡುವ ಮೂಲಕ ಕಾವೇರಿ ಹೋರಾಟದಲ್ಲಿ ರಾಜ್ಯದ ಪರ ಅಲ್ಪಸ್ವಲ್ಪ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕರ್ನಾಟಕದಲ್ಲಿ ಉತ್ತರ, ದಕ್ಷಿಣ ಹಾಗೂ ಮಲೆನಾಡು ಮಳೆಯಾಧಾರಿತ ಪ್ರದೇಶ ಎಂದು ಕೇಂದ್ರ ಹವಾಮಾನ ಇಲಾಖೆ ವಿಂಗಡನೆ ಮಾಡಿದೆ. ಈ ವಿಭಾಗಗಳ ಪೈಕಿ ಕಾವೇರಿ ನದಿ ಪಾತ್ರವನ್ನು ಮಳೆ ಆಧಾರಿತ ಪ್ರದೇಶ ಎಂದು ಗುರುತಿಸಲಾಗಿತ್ತು. ಇದರಿಂದಾಗಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುವಾಗ ಆಗುಂಬೆ ಸೇರಿದಂತೆ ಇತರೆ ಮಲೆನಾಡಿನ ಪ್ರದೇಶದ ಮಳೆಯ ಪ್ರಮಾಣವನ್ನು ಲೆಕ್ಕ ಹಾಕಿ ನದಿ ನೀರು ಹಂಚಿಕೆ ಮಾಡಲಾಗುತ್ತಿತ್ತು. ಜಲಾಶಯಗಳಲ್ಲಿ ನೀರು ಶೇಖರಣೆಯಾಗದಿದ್ದರೂ ನ್ಯಾಯಾಲಯಕ್ಕೆ ದೊಡ್ಡ ಪ್ರಮಾಣದಲ್ಲಿ ಮಳೆಯಾಗುತ್ತಿದೆ ಎಂಬ ವರದಿ ರವಾನೆಯಾಗುತ್ತಿತ್ತು.

ಈ ಅಂಶದ ಬಗ್ಗೆ ನಮ್ಮ ರಾಜ್ಯ ಸರ್ಕಾರಕ್ಕೆ ಈಗ ಮನವರಿಕೆಯಾಗಿದ್ದು, ಮಲೆನಾಡಿನಲ್ಲಿ ಬಿದ್ದ ಶೇ.70 ರಷ್ಟು ಮಳೆಯ ನೀರು ಕಾವೇರಿ ನದಿಗೆ ಹರಿದು ಬರುವುದಿಲ್ಲ. ಈ ಜಲಾನಯನ ಪ್ರದೇಶಗಳಾದ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳು ದಕ್ಷಿಣ ಒಳನಾಡು ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ಕಾವೇರಿ ಪಾತ್ರದ ಪ್ರದೇಶಗಳನ್ನು ದಕ್ಷಿಣ ಒಳನಾಡು ಎಂದು ವರ್ಗೀಕರಿಸಿ, ಇಲ್ಲಿ ಬೀಳುವ ಮಳೆ ಆಧಾರದ ಮೇಲೆ ನೀರು ಹಂಚಿಕೆ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಡುವುದು ರಾಜ್ಯ ಸರ್ಕಾರದ ಮುಂದಿರುವ ಸದ್ಯದ ಪರಿಹಾರವಾಗಿದೆ.

Leave a Reply