88ನೇ ಹುಟ್ಟುಹಬ್ಬದ ಪ್ರಯುಕ್ತ ನಟ ಸಾರ್ವಭೌಮನಿಗೆ ಗೂಗಲ್ ನಿಂದ ಸಿಕ್ತು ವಿಶೇಷ ಗೌರವ

ಡಿಜಿಟಲ್ ಕನ್ನಡ ಟೀಮ್:

ಇಂದು ಕನ್ನಡ ಸಿನಿರಸಿಕರ ಆರಾಧ್ಯ ದೈವ ನಟಸಾರ್ವಭೌಮ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಎಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರು ರಾಜ್ ಕುಮಾರ್ ಅವರ ಹುಟ್ಟುಹಬ್ಬದಂದು ಅವರನ್ನು ಹಾಗೂ ಸಿನಿಮಾಗಳ ಮೂಲಕ ಕನ್ನಡಕ್ಕೆ ಅವರು ನೀಡಿರುವ ಅಪಾರ ಕೊಡುಗೆಯನ್ನು ಸ್ಮರಿಸುತ್ತಿದ್ದಾರೆ. ಇದಕ್ಕೆ ಪ್ರತಿಷ್ಠಿತ ಗೂಗಲ್ ಸಹ ಹೊರತಾಗಿಲ್ಲ.

ವಿಶ್ವದ ಪ್ರಮುಖ ಮಾಹಿತಿ ಹುಡುಕಾಟ ತಾಣ ಗೂಗಲ್ ಇಂದು ಡಾ.ರಾಜ್ ಕುಮಾರ್ ಅವರಿಗೆ ತನ್ನ ಡೂಡಲ್ ಅನ್ನು ಸಮರ್ಪಿಸಿದೆ. ಆ ಮೂಲಕ ಕನ್ನಡದ ಕಣ್ಮಣಿಗೆ ಗೌರವ ಸಲ್ಲಿಸಿದೆ. ಡಾ.ರಾಜ್ ಕುಮಾರ್ ಅವರ ಈ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ, ಕರ್ನಾಟಕದ ಈ ಮಹಾನ್ ಚೇತನರ ಮಾಹಿತಿ ಭಂಡಾರವೇ ನಿಮ್ಮ ಮುಂದೆ ತೆರೆದುಕೊಳ್ಳಲಿವೆ. ಅಂದಹಾಗೆ ಇದೇ ಮೊದಲ ಬಾರಿಗೆ ನಾಯಕ ನಟನಿಗೆ ಗೂಗಲ್ ಈ ಒಂದು ಗೌರವವನ್ನು ನೀಡುತ್ತಿರುವುದು ವಿಶೇಷ.

ಅಣ್ಣಾವ್ರಾ 88ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಸಾಧನೆಯ ಕೆಲವು ತುಣುಕುಗಳನ್ನು ನೋಡುವುದಾದರೆ ಅವುಗಳು ಹೀಗಿವೆ…

  • 1929 ಏಪ್ರಿಲ್ 24 ರಂದು ಹುಟ್ಟಿದ ಸಿಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್, ನಂತರ ರಾಜ್ ಕುಮಾರ್ ಆದರು. ತಮ್ಮ 8ನೇ ವಯಸ್ಸಿನಲ್ಲೇ ಗುಬ್ಬಿ ವೀರಣ್ಣ ಕಂಪನಿ ಸೇರುವ ಮೂಲಕ ರಂಗಭೂಮಿ ಪ್ರವೇಶಿಸಿದರು.
  • 1953 ರಲ್ಲಿ ಬೇಡರ ಕಣ್ಣಪ್ಪ ಚಿತ್ರದ ಮೂಲಕ ನಾಯಕ ನಟರಾಗಿ ಸಿನಿಮಾ ರಂಗ ಪ್ರವೇಶಿಸಿದರು.
  • ನಾಯಕನಟನಾಗಿಯೇ 206 ಚಿತ್ರಗಳಲ್ಲಿ ಅಭಿನಯಿಸಿರುವ ರಾಜ್ ಕುಮಾರ್, ತಾವು ನಿರ್ವಹಿಸಿದ ಪಾತ್ರವೇ ಇಲ್ಲ. 1963ರಲ್ಲಿ ಸಂತ ತುಕಾರಾಮ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಾಯಕ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ.
  • 1993ರಲ್ಲಿ ಜೀವನ ಚೈತ್ರ ಚಿತ್ರದ ನಾದಮಯ ಹಾಡಿಗೆ ಅತ್ಯುತ್ತಮ ಹಿನ್ನಲೆ ಗಾಯಕ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಆ ಮೂಲಕ ಅಭಿನಯ ಹಾಗೂ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ದೇಶದ ಮೊದಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಈವರೆಗೂ ಅತ್ಯುತ್ತಮ ನಟನಾಗಿ 10 ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದು, ಭಾರತೀಯ ಚಿತ್ರರಂಗದಲ್ಲಿ ಇದು ಎರಡನೇ ಅತಿ ಹೆಚ್ಚು ಪ್ರಸಸ್ತಿ ಪಡೆದ ಸಾಧನೆಯಾಗಿದೆ.
  • ಕನ್ನಡ ಚಿತ್ರರಂಗಕ್ಕೆ ಇವರು ನೀಡಿರುವ ಸೇವೆಗೆ ಭಾರತ ಸರ್ಕಾರದಿಂದ 1983ರಲ್ಲಿ ಪದ್ಮ ಭೂಷಣ, 1995 ರಲ್ಲಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ, 2002ರಲ್ಲಿ ಎನ್ ಟಿಆರ್ ಜೀವಮಾನ ಸಾಧನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
  • ಕರ್ನಾಟಕ ರಾಜ್ಯ ಸರ್ಕಾರದ ಸಿನಿಮಾ ಪ್ರಶಸ್ತಿ ಪೈಕಿ ರಾಜ್ ಕುಮಾರ್ ಅವರು 9 ಬಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. 1967 ರಲ್ಲಿ ಸರ್ಕಾರದಿಂದ ನಟ ಸಾರ್ವಭೌಮ ಬಿರುದು, 1976ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ. 1985ರಲ್ಲಿ ಆಗಿನ ಕೆಂಟುಕಿಯ ಗವರ್ನರ್ ಅವರಿದೆ ಕೆಂಟುಕಿ ಕೊಲೊನೆಲ್ ಪ್ರಶಸ್ತಿ ಪಡೆದಿದ್ದು, 1993ರಲ್ಲಿ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Leave a Reply