ಸಿರಿಧಾನ್ಯಗಳ ಮೂಲಕ ಬರಕ್ಕೆ ಉತ್ತರ ಕಂಡುಕೊಳ್ಳುವ ಕರ್ನಾಟಕದ ಪ್ರಯತ್ನ-  ಮಿಲ್ಲೆಟ್ ಮಗ, ಮಿಲ್ಲೆಟ್ ಮಗಳು

ಡಿಜಿಟಲ್ ಕನ್ನಡ ಟೀಮ್:

ಬರ ಎಂಬುದು ಪ್ರತಿವರ್ಷದ ವಾಸ್ತವವಾಗುತ್ತಿದೆ. ಕುಡಿಯುವ ನೀರಿಗೇ ತತ್ವಾರ ಶುರುವಾದಾಗ ಇನ್ನು ಕೃಷಿಯ ಬಗ್ಗೆ ಯೋಚಿಸುವುದೆಂತು?

ಈ ಪರಿಸ್ಥಿತಿಗೆ ಸಿರಿಧಾನ್ಯಗಳ ಪ್ರೋತ್ಸಾಹದ ಮೂಲಕ ತಕ್ಕಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದೇ? ಸಧ್ಯಕ್ಕೆ ಇದು ಕರ್ನಾಟಕದ ಕೃಷಿ ಸಚಿವಾಲಯ ಪ್ರಯತ್ನನಿರತವಾಗಿರುವ ದಿಕ್ಕು. ಕೃಷಿ ಸಚಿವ ಕೃಷ್ಣಭೈರೇಗೌಡ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಇದೇ ಏಪ್ರಿಲ್ 28 ರಿಂದ 30 ರವರೆಗೆ ನಗರದ  ಅರಮನೆ ಮೈದಾನದಲ್ಲಿ ನಡೆಯಲಿದೆ ಸಿರಿಧಾನ್ಯಗಳ ರಾಷ್ಟ್ರೀಯ ವ್ಯಾಪಾರ ಮೇಳ.

ಸೋಮವಾರದ ಪ್ರಚಾರಗೋಷ್ಟಿಯಲ್ಲಿ ಎರಡು ಆಕರ್ಷಕ ಬ್ರಾಂಡ್ ಘೋಷಗಳನ್ನೂ ಕೊಡಲಾಗಿದೆ. ಅದೆಂದರೆ- ಮಿಲ್ಲೆಟ್ ಮಗ ಮತ್ತು ಮಿಲ್ಲೆಟ್ ಮಗಳು.

ಭೂಮಿಯ ಸತ್ವ ವರ್ಧನೆ ಪೂರಕವಾಗಿ ಕೃಷಿ ಮಾಡುವವ, ತಿನ್ನುವ ಅನ್ನಜಲ್ಲಿ ಯಾವ ಸತ್ವ ಇರಬೇಕೆಂದು ನಿರ್ಧರಿಸುವಾಕೆ… ಈ ಪರಿಕಲ್ಪನೆಗಳಲ್ಲಿ ಮಿಲ್ಲೆಟ್ ಮಗ ಮತ್ತು ಮಿಲ್ಲೆಟ್ ಮಗಳ ಪರಿಕಲ್ಪನೆ ಮೂಡಿ ಬಂದಿದೆ.

ರಾಗಿ, ಜೋಳ, ಅರ್ಕ, ಊದಲು, ಸಾಮೆ, ನವಣೆ, ಸಜ್ಜೆ, ಕೊರಗ ಇವೆಲ್ಲವನ್ನು ಬೆಳೆಯುವುದಕ್ಕೆ ಬೇಕಾಗುವ ನೀರಿನ ಪ್ರಮಾಣ ಅತಿ ಕಡಿಮೆ. ಆದರೆ ಒಂದು ಹಂತದಲ್ಲಿ ಬತ್ತ, ಕಬ್ಬು, ಗೋದಿ ಬೆಳೆಯುವ ವ್ಯಾವಹಾರಿಕ ಮಾರ್ಗಕ್ಕೆ ಬಿದ್ದಮೇಲೆ ಸಿರಿಧಾನ್ಯಗಳು ನೇಪಥ್ಯಕ್ಕೆ ಸರಿದವು. ಆದರೆ ಇದರ ಪರಿಣಾಮ ವ್ಯಾವಹಾರಿಕ ಬೆಳೆಗಳು ಭೂಮಿಯ ನೀರಿನ ಪಸೆಯನ್ನೇ ಇಲ್ಲವಾಗಿಸುತ್ತ ಸಾಗಿದವು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ಮತ್ತೆ ಸಿರಿಧಾನ್ಯಗಳತ್ತ ಹೊರಳಬೇಕಿದೆ ಎಂಬುದು ಇತ್ತೀಚೆಗೆ ಪ್ರಖರವಾಗುತ್ತಿರುವ ಚಿಂತನೆ. ಇದನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿ ಆಸಕ್ತಿ ತೋರಿಸುತ್ತಿದೆ. ಇಷ್ಟಾಗಿಯೂ ಮಾರುಕಟ್ಟೆಯಲ್ಲಿ ಬತ್ತಕ್ಕಿರುವ ಬೆಲೆಯನ್ನು ಇವೆಲ್ಲ ಸದ್ಯಕ್ಕೆ ದೊರಕಿಸಿಕೊಳ್ಳುತ್ತಿಲ್ಲ. ಆದರೆ ಜನರಿಂದ ಸಿರಿಧಾನ್ಯಗಳ ಬೇಡಿಕೆ ಹೆಚ್ಚಾಗುವಂತೆ ನೋಡಿಕೊಂಡರೆ ಆಗ ಬೆಲೆ ಬರಲಿದೆ ಎಂಬುದು ಒಂದು ಆಶಯ.

ಇದಕ್ಕಾಗಿ, ಸಿರಿಧಾನ್ಯಗಳಲ್ಲಿರುವ ಪ್ರೊಟೀನ್ ಹಾಗೂ ನಾರಿನ ಅಂಶಗಳ ಆರೋಗ್ಯ ಅಂಶವನ್ನು ಪ್ರಚುರಪಡಿಸಲಾಗುತ್ತಿದೆ. ವ್ಯಾಪಕವಾಗಿ ಕಾಡುತ್ತಿರುವ ಸಕ್ಕರೆ ಕಾಯಿಲೆ ಸೇರಿದಂತೆ ಹಲವು ರೋಗಗಳಿಗೆ ಹೇಗೆ ಸಿರಿಧಾನ್ಯಗಳು ರಾಮಬಾಣವಾಗಬಲ್ಲವು ಎಂಬುದರ ಅರಿವು ಮೂಡಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಹಂಚಿಕೊಂಡಿರುವ ಮಾಹಿತಿಗಳು ಹೀಗಿವೆ-

ಕಳೆದ ನಾಲ್ಕು ವರ್ಷಗಳಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಉತ್ಪನ್ನ ಹೆಚ್ಚಾಗಿದ್ದು ಬೆಂಗಳೂರು ಮಹಾನಗರ ಒಂದರಲ್ಲಿಯೇ ವಾರ್ಷಿಕವಾಗಿ ಇನ್ನೂರೈವತ್ತರಿಂದ ಮುನ್ನೂರು ಕೋಟಿ ರೂಗಳಷ್ಟು ವಹಿವಾಟು ನಡೆಯುತ್ತಿದೆ. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ.

ಬರಗಾಲದಿಂದ ಕರ್ನಾಟಕ ತತ್ತರಿಸಿರುವ ಹಿನ್ನೆಲೆಯಲ್ಲಿ ಉತ್ತಮ ಸಿರಿಧಾನ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ. ಚಿಲ್ಲರೆ ವ್ಯಾಪಾರಿಗಳು,ದೊಡ್ಡ ಮಾರುಕಟ್ಟೆ ಕ್ಷೇತ್ರದವರು ಸಂಸ್ಕರಣೆಗಾರರು,ರಫ್ತುದಾರರಿಗೆ ಅನುಕೂಲ ಕಲ್ಪಿಸಿಕೊಡುವುದೇ ಈ ಮೇಳದ ಉದ್ದೇಶ. ಪ್ರಸಕ್ತ ರಾಜ್ಯದಲ್ಲಿ 2.01 ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯವನ್ನು ಬೆಳೆಯಲಾಗುತ್ತಿದೆ. ಇದರ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಗೆ ತರುವುದು ಏಪ್ರಿಲ್ 28 ರಿಂದ ಮೂರು ದಿನಗಳ ಕಾಲ ನಡೆಯುವ ಮೇಳದ ಉದ್ದೇಶವಾಗಿದೆ ಎಂದವರು ವಿವರಿಸಿದ್ದಾರೆ.

ಮೇಳದಲ್ಲಿ ಗ್ರಾಹಕರಿಗೆ ಅಗತ್ಯವಾದ ಉತ್ಪನ್ನಗಳ ಮಾರಾಟ, ಪ್ರಾತ್ಯಕ್ಷಿಕೆ ಮತ್ತು ರೈತ ಸಮುದಾಯಕ್ಕೆ ಅಗತ್ಯವಾದ ಸಲಹೆ, ಸೂಚನೆಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ವಾಣಿಜ್ಯ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಮೇಳದಲ್ಲಿ ಹಲವಾರು ಬಹುರಾಷ್ಟ್ರೀಯ ಕಂಪನಿಗಳು ಪಾಲ್ಗೊಳ್ಳಲಿವೆ ಎಂದು ಸಚಿವರು ವಿವರ ನೀಡಿದ್ದಾರೆ.

Leave a Reply