ಏಕಕಾಲದಲ್ಲಿ ಲೋಕಸಭೆ- ವಿಧಾನಸಭೆ ಚುನಾವಣೆ, ಹಣಕಾಸು ವರ್ಷದಲ್ಲಿ ಬದಲಾವಣೆ… ಇವು ದೇಶದ ಆರ್ಥಿಕತೆಯ ವೇಗಕ್ಕೆ ಮೋದಿ ಅವರ ನೂತನ ಸೂತ್ರ!

ಡಿಜಿಟಲ್ ಕನ್ನಡ ಟೀಮ್:

ಚುನಾವಣೆಗಳು ದೇಶದ ಆರ್ಥಿಕತೆಗೆ ಹೊರೆಯಾಗಬಾರದು ಎಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ವಾದವನ್ನು ಮಂಡಿಸಿದ್ದಾರೆ. ಇದರ ಜತೆಗೆ ಸರ್ಕಾರದ ಯೋಜನೆಗಳು ನಿರೀಕ್ಷಿತ ಫಲಿತಾಂಶ ಪಡೆಯಲು ಹಣಕಾಸು ವರ್ಷದ ಅವಧಿ ಬದಲಾವಣೆಯ ಬಗ್ಗೆಯೂ ಮೋದಿ ಗಮನಹರಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದ ನೀತಿ ಆಯೋಗದ ಮೂರನೇ ಸಭೆಯಲ್ಲಿ ಸುದೀರ್ಘವಾಗಿ ಭಾಷಣ ಮಾಡಿದ ಮೋದಿ, ಈ ಎರಡು ಪ್ರಮುಖ ವಿಚಾರವನ್ನು ಪ್ರಸ್ತಾಪಿಸಿದರು. ಈ ಎರಡು ಅಂಶಗಳನ್ನು ಪ್ರಸ್ತಾಪ ಮಾಡುತ್ತಾ ಮೋದಿ ಅವರು ಹೇಳಿದ ಮಾತುಗಳ ಸಾರಾಂಶ ಹೀಗಿದೆ…

‘ದೇಶದಲ್ಲಿ ಸರಿಯಾದ ರೀತಿಯಲ್ಲಿ ಸಮಯ ನಿರ್ವಹಣೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳು ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿನ ವೈವಿಧ್ಯತೆಯ ನಡುವೆಯೂ ನಮ್ಮ ಯೋಜನೆಗಳು ಪರಿಣಾಮಕಾರಿಯಾಗಿ ಯಶಸ್ಸು ಸಾಧಿಸಬೇಕಾದರೆ, ಕೆಲವು ಬದಲಾವಣೆಗಳ ಅಗತ್ಯವಿದೆ. ಹೀಗಾಗಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಒಂದೇ ಕಾಲದದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯಬೇಕಿದೆ. ದೇಶದ ಬಹುನಿರೀಕ್ಷಿತ ಮಸೂದೆಯಾಗಿರುವ ಜಿಎಸ್ಟಿಯನ್ನು ತಡ ಮಾಡದೇ ಜುಲೈ1ರಿಂದ ಜಾರಿಗೆ ತರಲಾಗುವುದು. ನಮ್ಮ ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಆದಾಯ ಪ್ರಮುಖವಾಗಿದ್ದು, ಇದಕ್ಕೆ ಅನುಗುಣವಾಗಿ ನಾವು ವಾರ್ಷಿಕ ಬಜೆಟ್ ಮಂಡನೆ ಮಾಡಬೇಕಿದೆ. ಹೀಗಾಗಿ ನಮ್ಮ ಹಣಕಾಸು ವರ್ಷದ ಅವಧಿಯನ್ನು ಜನವರಿಯಿಂದ ಡಿಸೆಂಬರ್ ವರೆಗೆ ಮಾಡಬೇಕು ಎಂಬ ಸಲಹೆಗಳು ಬರುತ್ತಿವೆ. ಸದ್ಯ ಭಾರತದಲ್ಲಿರುವ ಏಪ್ರಿಲ್ ನಿಂದ ಮಾರ್ಚ್ ವರೆಗಿನ ಹಣಕಾಸು ವರ್ಷದ ಅವಧಿ ಬದಲಾವಣೆಗೆ ಎಲ್ಲಾ ರಾಜ್ಯಗಳು ಚರ್ಚೆ ನಡೆಸಬೇಕಿದೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಾದೇಶಿಕ ಅಸಮಾನತೆ ವಿಷಯವನ್ನು ಪ್ರಸ್ತಾಪಿಸಿದ್ದು, ಈ ವಿಚಾರವನ್ನು ದೇಶ ಹಾಗೂ ಆಯಾ ರಾಜ್ಯಗಳ ಹಿತಾಸಕ್ತಿ ಆದ್ಯತೆ ಮೇರೆಗೆ ಚರ್ಚೆ ನಡೆಸಬೇಕಿದೆ. ನೀತಿ ಆಯೋಗವು 15 ವರ್ಷಗಳ ದೂರದೃಷ್ಠಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದು, 7 ವರ್ಷಗಳ ಕಾಲ ಮಧ್ಯಮ ಹಂತದ ಕಾಲಘಟ್ಟವಾಗಿದ್ದು, ನಂತರದ 3 ವರ್ಷಗಳು ಯೋಜನೆಗಳ ಅನುಷ್ಠಾನ ಕಾಲಘಟ್ಟವಾಗಲಿದೆ. ನಮ್ಮ ನವ ಭಾರತದ ಗುರಿ ಸಾಧನೆ ಎಲ್ಲ ರಾಜ್ಯಗಳ ಪರಿಶ್ರಮ ಹಾಗೂ ಸಹಕಾರದಿಂದ ಮಾತ್ರ ಸಾಧ್ಯವಾಗಲಿದೆ. ದೇಶದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ದೇಶದ ಅಭಿವೃದ್ಧಿಗೆ ತೊಂದರೆಯಾಗಿದೆ. ಹೀಗಾಗಿ ರಸ್ತೆ, ಬಂದರು, ಇಂಧನ ಹಾಗೂ ರೈಲ್ವೇ ಸಂಪರ್ಕ ಅಭಿವೃದ್ಧಿಯಾಗಬೇಕು. ಆಗ ದೇಶದ ಆರ್ಥಿಕತೆಯ ವೇಗ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ.’

Leave a Reply