ಕಮ್ಯುನಿಷ್ಟರ ನೆಲದಲ್ಲಿ ಕಾನೂನು ಪಾಲಿಸಿದ್ದಕ್ಕೆ ಎಡರಂಗ ಸರ್ಕಾರವನ್ನೇ ಎದುರುಹಾಕಿಕೊಂಡ ಅಧಿಕಾರಿ, ಇದು ಶಿಲುಬೆ ರಾಜಕೀಯ!

ಡಿಜಿಟಲ್ ಕನ್ನಡ ಟೀಮ್:

ಮುನ್ನಾರ್ ಅರಣ್ಯ ಪ್ರದೇಶದಲ್ಲಿ ಒತ್ತುವರಿ ಜಾಗದಲ್ಲಿ ಹುಗಿದಿದ್ದ ಶಿಲುಬೆ ತೆರವುಗೊಳಿಸಿದ ಜಿಲ್ಲಾಡಳಿತದ ಕಾನೂನಾತ್ಮಕ ಕ್ರಮಕ್ಕೆ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಿಡಿಕಿಡಿಯಾಗಿ ತುಷ್ಟೀಕರಣಕ್ಕೆ ನಿಂತ ವಿದ್ಯಮಾನದ ಬಗ್ಗೆ ನೀವು ಓದಿದ್ದಿರಷ್ಟೆ.

ಕೇರಳದ ಸಿಪಿಎಂ ಸರ್ಕಾರವು ಈ ತೆರವು ಕಾರ್ಯಾಚರಣೆಗೆ ಕಾರಣರಾದ ನಿರ್ಭೀತ ಅಧಿಕಾರಿ, ದೇವಿಕುಳಂನ ಸಬ್ ಕಲೆಕ್ಟರ್ ಶ್ರೀರಾಂ ವೆಂಕಟರಾಮನ್ ವಿರುದ್ಧ ಸಮರವನ್ನೇ ಸಾರಿದಂತಿದೆ.

‘ಈ ಅಧಿಕಾರಿಯನ್ನು ಒಳಾಂಪುರಕ್ಕೆ ಕಳುಹಿಸಬೇಕು’ ಅಂತ ಕೇರಳದ ಇಂಧನ ಸಚಿವ ಎಂ ಎಂ ಮಣಿ ಹಾರಾಡಿದ್ದಾಗಿದೆ. ನಮ್ಮಲ್ಲಿ ಯಾರನ್ನಾದರೂ ನಿಮ್ಹಾನ್ಸ್ ಗೆ ಕಳುಹಿಸಬೇಕು ಅಂತ ಕೂಗಾಡಿದರೆ ಏನರ್ಥ ಬರುತ್ತದೋ ಹಾಗೆ. ಏಕೆಂದರೆ ಒಳಾಂಪುರ ಮಾನಸಿಕ ಚಿಕಿತ್ಸೆಯ ಕೇಂದ್ರ. ಅಕ್ರಮ ಒತ್ತುವರಿ ಜಾಗದ ಶಿಲುಬೆಯನ್ನು ಕಾನೂನಿನ ಪ್ರಕಾರ ತೆರವುಗೊಳಿಸಿದ ಶ್ರೀರಾಂ ಅವರು ಮಾನಸಿಕ ಅಸ್ವಸ್ಥ ಕೇಂದ್ರಕ್ಕೆ ದಾಖಲಾಗಲಿ ಎಂಬ ನಿಂದನೆ ಕೇರಳ ಸಚಿವರದ್ದು. ಎಂಎಂ ಮಣಿ ಅವರ ಕ್ರೈಸ್ತ ತುಷ್ಟೀಕರಣ, ಧಾರ್ಮಿಕ ಭಾವನೆ ಕೆರಳಿಸುವ ಯತ್ನ ಇಲ್ಲಿಗೇ ನಿಲ್ಲುವುದಿಲ್ಲ. ಕಾನೂನು ಉಲ್ಲಂಘಿಸಿ ತಲೆ ಎತ್ತಿದ್ದ ಶಿಲುಬೆ ತೆಗೆದುಹಾಕಿರುವುದನ್ನು ಅವರು ಬಾಬ್ರಿ ಮಸೀದಿ ಧ್ವಂಸಕ್ಕೆ ಹೋಲಿಸಿದ್ದಾರೆ. ಅಧಿಕಾರಿ ಶ್ರೀರಾಂ ಆರೆಸ್ಸೆಸ್ಸಿನ ಏಜೆಂಟ್ ಎಂಬ ಪ್ರಮಾಣಪತ್ರವನ್ನೂ ದಯಪಾಲಿಸಿದ್ದಾರೆ ಸಚಿವರು.

ಇಷ್ಟಕ್ಕೂ 30ರ ಹರೆಯದ ಉತ್ಸಾಹಿ ಅಧಿಕಾರಿ ಶ್ರೀರಾಂ ವೆಂಕಟರಾಮನ್ ಮಾಡಿದ್ದೇನು? ಅವರೇನು ಕೇವಲ ಶಿಲುಬೆ ಹುಡುಕಿಕೊಂಡು ಹೋಗಲಿಲ್ಲ. ಪರಿಸರದ ದೃಷ್ಟಿಯಿಂದ ಮಹತ್ವದ್ದಾಗಿರುವ ಮುನ್ನಾರಿನಲ್ಲಿ ಅಕ್ರಮ ನಿರ್ಮಾಣಗಳನ್ನೆಲ್ಲ ಖಾಲಿ ಮಾಡಿಸುತ್ತಿದ್ದಾರವರು. ಅರಣ್ಯ ಜಾಗದಲ್ಲಿ ತಲೆ ಎತ್ತಿದ್ದ ರೆಸಾರ್ಟು, ಹೊಟೇಲುಗಳನ್ನೂ ಅವರು ಖಾಲಿ ಮಾಡಿಸಿದ್ದಾರೆ. ಈ ಹಂತದಲ್ಲಿ ಸ್ಥಳೀಯ ಆಡಳಿತಗಾರರು, ರಾಜಕಾರಣಿಗಳು ಇವರ್ಯಾರಿಂದ ಬಂದ ಒತ್ತಡಕ್ಕೂ ಸೊಪ್ಪು ಹಾಕಲಿಲ್ಲ.

ಇದೇ ಸ್ವಚ್ಛ ಅಭಿಯಾನದ ಭಾಗವಾಗಿಯೇ ಪಪ್ಪಾತಿಚೊಲದ ಶಿಲುಬೆಯನ್ನೂ ತೆಗೆಸಿ ಹಾಕಿದರು. ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರವೇ ಅಲ್ಲಿ ಶಿಲುಬೆ ನೆಟ್ಟಿದ್ದು ಅಕ್ರಮ ಎಂಬುದು ಸ್ಪಷ್ಟವಾಗಿದೆ. ಹೀಗೆ ಸರ್ಕಾರಿ ಸ್ವತ್ತಿನಲ್ಲಿ ಶಿಲುಬೆ ನೆಟ್ಟಿದ್ದು ‘ಸ್ಪಿರಿಟ್ ಆಫ್ ಜೀಸಸ್’ ಎಂಬ ಸಂಘಟನೆ. ಈ ಸಂಬಂಧ ಅದರ ಮುಖ್ಯಸ್ಥ ಟಾಮ್ ಸ್ಕರಿಯಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಗುಡ್ಡದಲ್ಲಿ ಪವಾಡಗಳು ಜರುಗಿವೆ, ನಾವಲ್ಲಿ ಆತ್ಮಗಳನ್ನೆಲ್ಲ ಹಿಂದಕ್ಕೆ ಕರೆಯಿಸಿ ಅವರ ಪಾಪ ತೊಳೆಸಿ ಕಳುಹಿಸುತ್ತೇವೆ ಎಂದೆಲ್ಲ ದಶಕಗಳಿಂದ ಪ್ರಚಾರ ಮಾಡಿಕೊಂಡು ಬಂದಿದೆ ಈ ಸಂಘಟನೆ. ಇದಕ್ಕೂ ತನಗೂ ಸಂಬಂಧವಿಲ್ಲ ಎಂದಿರುವ ಕ್ಯಾಥೊಲಿಕ್ ಚರ್ಚ್, ಈ ಸಂಘಟನೆಯಿಂದ ದೂರ ಇರುವಂತೆ ಜನರನ್ನು ಎಚ್ಚರಿಸಿದೆ ಸಹ.

ಇಷ್ಟಾಗಿಯೂ, ಕೇರಳದ ಮುಖ್ಯಮಂತ್ರಿ ಪಿಣರಾಯಿ ಮತ್ತು ಅವರ ಸಚಿವರಿಗೆಲ್ಲ ಅಕ್ರಮ ಶಿಲುಬೆ ತೆಗೆಸಿದ ಕ್ರಮ ಹಾಗೂ ಅದಕ್ಕೆ ಅನುಸರಿಸಿದ ಮಾರ್ಗಗಳು ಸರಿ ಕಾಣುತ್ತಿಲ್ಲವಂತೆ! ಅಂದರೆ ಸಿಪಿಎಂ ಸರ್ಕಾರಕ್ಕೆ ಕಾನೂನು ಪಾಲನೆಯೇ ಸರಿ ಕಾಣದಿರುವ ವಿಷಯ ಅಂತಾಯಿತು. ಪ್ರಕರಣವನ್ನು ಇನ್ನಷ್ಟು ಜಟಿಲಗೊಳಿಸುವುದಕ್ಕೆ ಅದು ವಿವಿಧ ಗುಂಪುಗಳ ಸಭೆ ಬೇರೆ ಕರೆದಿದೆ.

ಕಾನೂನು ಪಾಲನೆ ಮಾಡುತ್ತಿರುವ ಅಧಿಕಾರಿಯೊಬ್ಬನನ್ನು ಆರೆಸ್ಸೆಸ್ಸು ಮತ್ತೊಂದು ಅಂತೆಲ್ಲ ಬ್ರಾಂಡ್ ಮಾಡಿ, ಕಾನೂನುಬಾಹಿರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಮೂಲಕ ಕೇರಳದ ಸಿಪಿಎಂ ಸರ್ಕಾರ ಅದ್ಯಾವ ಮಾಫಿಯಾವನ್ನು ರಕ್ಷಿಸುವುದಕ್ಕೆ ಹೊರಟಿದೆ?

1 COMMENT

Leave a Reply