ಅಮಾನತುಗೊಂಡ ಪೊಲೀಸ್ ಮುಖ್ಯಸ್ಥನ ಬೆನ್ನಿಗೆ ನಿಂತ ಸುಪ್ರೀಂ ಕೋರ್ಟ್, ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ತೀವ್ರ ಮುಖಭಂಗ

ಡಿಜಿಟಲ್ ಕನ್ನಡ ಟೀಮ್:

ಅಧಿಕಾರಕ್ಕೆ ಬಂದು ಇನ್ನು ವರ್ಷ ತುಂಬುವುದರ ಒಳಗಾಗಿ ಈಗಾಗಲೇ ಸಾಕಷ್ಟು ಮುಖಭಂಗ ಅನುಭವಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಈಗ ಮತ್ತೊಂದು ಹಿನ್ನಡೆಯಾಗಿದೆ. ಅದೇನೆಂದರೆ, ತಾವು ಅಧಿಕಾರಕ್ಕೆ ಬರುತ್ತಿದ್ದಂತೆ ಕೇರಳದ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಟಿ.ಪಿ ಸೆನ್ ಕುಮಾರ್ ಅವರನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಆ ಸ್ಥಾನದಿಂದ ಕೆಳಗಿಳಿಸಿದ್ದರು. ಈ ನಿರ್ಧಾರವನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಮತ್ತೆ ಸೆನ್ ಕುಮಾರ್ ಅವರನ್ನು ಆ  ಹುದ್ದೆಗೆ ಮರು ನೇಮಕ ಮಾಡಬೇಕು ಎಂಬ ಆದೇಶ ಹೊರಡಿಸಿದೆ. ಇದು ಸಹಜವಾಗಿಯೇ ಪಿಣರಾಯಿ ವಿಜಯನ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಪಿಣರಾಯಿ ವಿಜಯನ್ ಅವರ ನೇತೃತ್ವದ ಲೆಫ್ಟ್ ಡೆಮಕ್ರಾಟಿಕ್ ಫ್ರಂಟ್ ಅಧಿಕಾರಕ್ಕೆ ಬಂದಿತ್ತು. ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದಿನ ಯುಡಿಎಫ್ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೊಲ್ಲಂ ಪ್ರದೇಶದಲ್ಲಿ 114 ಮಂದಿಯನ್ನು ಬಲಿ ಪಡೆದಿದ್ದ ಪಟಾಕಿ ಸ್ಫೋಟ ಪ್ರಕರಣ ಹಾಗೂ ಜಿಶಾ ಕೊಲೆ ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ನಡೆದಿಲ್ಲ ಎಂಬ ಕಾರಣ ಕೊಟ್ಟು ಸೆನ್ ಕುಮಾರ್ ಅವರನ್ನು ಪೊಲೀಸ್ ಮುಖ್ಯಸ್ಥ ಹುದ್ದೆಯಿಂದ ಕಿತ್ತುಹಾಕಿತ್ತು.

ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ ಸೆನ್ ಕುಮಾರ್ ಕಾನೂನಿನ ಹೋರಾಟಕ್ಕೆ ಮುಂದಾದರು. ಆರಂಭದಲ್ಲಿ ಹೈಕೋರ್ಟ್ ನಲ್ಲಿ ಸರ್ಕಾರದ ಪರವಾದ ತೀರ್ಪು ಹೊರಬಂದಿತ್ತು. ನಂತರ ಕೇಂದ್ರ ಆಡಳಿತ ನ್ಯಾಯಾಧಿಕರಣ (ಸಿಎಟಿ) ಮೆಟ್ಟಿಲೇರಿದ ಸೆನ್ ಕುಮಾರ್ ಅವರಿಗೆ ಮತ್ತೆ ನಿರಾಸೆ ಎದುರಾಯಿತು. ಆ ಮೂಲಕ ಪಿಣರಾಯಿ ವಿಜಯನ್ ಮೇಲುಗೈ ಸಾಧಿಸಿದ್ದರು. ಆದರೆ ಸೆನ್ ಕುಮಾರ್ ತಮಗಾದ ಅನ್ಯಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಸರ್ಕಾರದ ಈ ನಿರ್ಧಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅಂಶವನ್ನು ಗಮನಿಸಿತು. ಈ ವೇಳೆ ಈ ಎರಡು ಪ್ರಕರಣಗಳ ತನಿಖೆಯಲ್ಲಿ ಸೆನ್ ಕುಮಾರ್ ಎಡವಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ನಿರ್ಧಾರದ ಹಿಂದೆ ರಾಜಕೀಯ ಉದ್ದೇಶವಿರುವ ಸೂಚನೆಗಳು ನ್ಯಾಯಾಲಯದ ಗಮನಕ್ಕೆ ಬಂದಿತು. ಹೀಗಾಗಿ ಸುಪ್ರೀಂ ಕೋರ್ಟ್ ಇವರ ಅಮಾನತಿನ ಆದೇಶವನ್ನು ರದ್ದುಗೊಳಿಸಿ ತಕ್ಷಣವೇ ಇವರಿಗೆ ಮತ್ತೆ ಪೊಲೀಸ್ ಮುಖ್ಯಸ್ಥ ಹುದ್ದೆ ನೀಡಬೇಕು ಎಂಬ ಆದೇಶ ನೀಡಿತು. ಸುಪ್ರೀಂ ಕೋರ್ಟ್ ಈ ಆದೇಶದ ನೀಡುವಾಗ ವ್ಯಕ್ತಪಡಿಸಿದ ಅಭಿಪ್ರಾಯ ಹೀಗಿದೆ… ‘ಪ್ರಕರಣದ ವಿಚಾರಣೆಯ ನಂತರ ಸರ್ಕಾರವು ಒಬ್ಬ ಪೊಲೀಸ್ ಅಧಿಕಾರಿಯನ್ನು ಹುದ್ದೆಯಿಂದ ಕೆಳಗಿಸಿಸುವ ಪ್ರಕ್ರಿಯೆಯಲ್ಲಿ ನಡೆದುಕೊಂಡಿರುವ ರೀತಿ ಸರಿಯಾಗಿಲ್ಲ ಎಂಬ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ಸರ್ಕಾರದ ನಿರ್ಧಾರವನ್ನು ಪಕ್ಕಕ್ಕಿರಿಸಿ, ಮತ್ತೆ ಸೆನ್ ಕುಮಾರ್ ಅವರು ಈ ಹುದ್ದೆ ಅಲಂಕರಿಸಬೇಕು ಎಂದು ಕೋರ್ಟ್ ಆದೇಶ ನೀಡುತ್ತಿದೆ.’

ಈ ಪ್ರಕರಣದ ವಿಚಾರಣೆ ವೇಳೆ ಸೆನ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ ದಾವೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ನೇರ ದಾಳಿ ಮಾಡಿದ್ದರು. ಅವರು ನ್ಯಾಯಾಲಯದ ಮುಂದೆ ಮಂಡಿಸಿದ ವಾದ ಹೀಗಿತ್ತು… ‘ನನ್ನ ಕಕ್ಷಿದಾರರ ಕಾರ್ಯವೈಖರಿ 10 ರಲ್ಲಿ 9 ಅಂಕ ನೀಡುವಂತಹದು. ಈ ಎರಡು ಪ್ರಕರಣಗಳಿಗೂ ನನ್ನ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಈ ಎರಡು ಪ್ರಕರಣಗಳಿಗೆ ಸೆನ್ ಕುಮಾರ್ ಅವರು ಜವಾಬ್ದಾರಿ ಹೊರಲೇಬೇಕಾಗಿರುವುದು ನಿಜವೇ ಆಗಿದ್ದರೆ, ಈ ಸರ್ಕಾರ ಬಂದ ಮೇಲೆ ಈವರೆಗೂ 96 ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದೆ. ಈ ವರ್ಗಾವಣೆಗಳಿಗೆ ಕಾರಣಗಳೇನು? ಕಳೆದ ಒಂದು ವರ್ಷದ ಆಡಳಿತದಲ್ಲಿ ರಾಜ್ಯದಲ್ಲಿ 9 ರಾಜಕೀಯ ಪ್ರೇರಿತ ಹತ್ಯೆಗಳಾಗಿವೆ. ಗೃಹ ಸಚಿವ ಜವಾಬ್ದಾರಿಯನ್ನು ಹೊತ್ತಿರುವ ಮುಖ್ಯಮಂತ್ರಿಗಳು ಈ ಹತ್ಯೆಗಳ ಜವಾಬ್ದಾರಿಯನ್ನು ಹೊತ್ತು ತಮ್ಮ ಸ್ಥಾನದಿಂದ ಕೆಳಗಿಳಿಯುವರೇ? ಅದು ಸಾಧ್ಯವಾಗದಿದ್ದ ಮೇಲೆ ಈ ಎರಡು ಪ್ರಕರಣಗಳಲ್ಲಿ ನನ್ನ ಕಕ್ಷಿದಾರನನ್ನು ಹೊಣೆಗಾರರರನ್ನಾಗಿ ಮಾಡಿದ್ದು ಏಕೆ?’

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಈ ತೀರ್ಪು ದೊಡ್ಡ ಹಿನ್ನಡೆಯಾಗಿದೆ. ಕಾರಣ, ತನ್ನ ವಿರುದ್ಧ ಕಾನೂನು ಸಮರದಲ್ಲಿ ಗೆದ್ದ ವ್ಯಕ್ತಿಯನ್ನೇ ಈಗ ತನ್ನ ಪೊಲೀಸ್ ಪಡೆಯ ಮುಖ್ಯಸ್ಥನಾಗಿ ನೇಮಕ ಮಾಡುವುದು ಮುಜುಗರದ ಸಂಗತಿ. ಇದುವರೆಗೂ ಕೇರಳದ ಯಾವುದೇ ಮುಖ್ಯಮಂತ್ರಿಯು ತಾನು ಅಧಿಕಾರದಿಂದ ಕೆಳಗಿಳಿಸಿದ ಪೊಲೀಸ್ ಮುಖ್ಯಸ್ಥನನ್ನು ಮತ್ತೆ ಆ ಹುದ್ದೆಗೆ ತಂದು ಕೂರಿಸಿರುವ ಉದಾಹರಣೆಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ತನ್ನ ವಿರುದ್ಧ ಕಾನೂನಿನ ಸಮರದಲ್ಲಿ ಹೋರಾಡಿ ಗೆದ್ದ ಪೊಲೀಸ್ ಅಧಿಕಾರಿಯನ್ನು ಮತ್ತೆ ಈ ಸ್ಥಾನ ಅಲಂಕರಿಸುವಂತೆ ಮಾಡುವುದು ಪಿಣರಾಯಿಗೆ ನಿಜಕ್ಕೂ ತಲೆತಗ್ಗಿಸುವ ವಿಷಯ. ಅಷ್ಟೇ ಅಲ್ಲದೆ, ‘ಈ ಪ್ರಕರಣದಿಂದ ಪಿಣರಾಯಿ ವಿಜಯನ್ ಅವರ ಸರ್ಕಾರ ನೈತಿಕತೆಯನ್ನು ಕಳೆದುಕೊಂಡಿದ್ದು, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು’ ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿವೆ.

Leave a Reply