ಹಸುಗಳಿಗೂ ಬರಲಿದೆ ಆಧಾರ್ ಮಾದರಿಯ ವಿಶೇಷ ಗುರುತಿನ ಸಂಖ್ಯೆ! ಗೋವು ಸಂರಕ್ಷಣೆ, ಹಾಲು ಉತ್ಪನ್ನ ಹೆಚ್ಚಳಕ್ಕೆ ಕೇಂದ್ರದ ಹೊಸ ಹೆಜ್ಜೆ

ಡಿಜಿಟಲ್ ಕನ್ನಡ ಟೀಮ್:

ಗೋ ರಕ್ಷಕರ ದಾಳಿಯ ಕುರಿತಾಗಿ ಸಾಕಷ್ಟು ವಿವಾದ ಎದುರಾಗುತ್ತಿರುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಗೋವುಗಳ ರಕ್ಷಣೆಗೆ ವಿಶೇಷ ಹೆಜ್ಜೆಯನ್ನಿಟ್ಟಿದೆ. ಅದೇನೆಂದರೆ, ಹಸುಗಳಿಗೂ ಆಧಾರ್ ಮಾದರಿಯ ವಿಶೇಷ ಗುರುತಿನ ಸಂಖ್ಯೆ ನೀಡುವುದು.

ಸದ್ಯ ಈ ವಿಚಾರವಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದೆ. ದೇಶದ ಪ್ರತಿಯೊಂದು ಹಸುವಿಗೂ ವಿಶೇಷ ಗುರುತಿನ ಸಂಖ್ಯೆ ನೀಡುವ ಮೂಲಕ ಅವುಗಳ ಮೇಲೆ ನಿಗಾ ವಹಿಸಬೇಕು. ಪ್ರತಿಯೊಂದು ಹಸು ಹಾಗೂ ಆ ಹಸುವಿನ ಸಂತತಿಗಳಿಗೆ ಈ ಸಂಖ್ಯೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆ.

ಗೋವುಗಳ ರಕ್ಷಣೆಗೆ ಸಂಬಂಧಿಸಿದಂತೆ ನೇಮಕ ಮಾಡಲಾಗಿದ್ದ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ನೇತೃತ್ವದ ಸಮಿತಿಯು ಅಧ್ಯಯನ ನಡೆಸಿ ಕೆಲವು ಶಿಫಾರಸ್ಸುಗಳನ್ನು ನೀಡಿದ್ದು, ಈ ಶಿಫಾರಸ್ಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ವರದಿ ನೀಡಿದೆ.

ಗೋವುಗಳಿಗೆ ವಿಶೇಷ ಗುರುತಿನ ಸಂಖ್ಯೆ ನೀಡುವುದರ ಜತೆಗೆ, ಪ್ರತಿ ಹಸುವಿಗೆ ಹಾಲು ಕರೆಯುವಿಕೆಯ ವಯಸ್ಸಿನ ಮಿತಿ ನಿಗದಿ ಪಡಿಸಿ ನಂತರ ಅಂತಹ ಹಸುಗಳಿಗೆ ವಿಶೇಷವಾಗಿ ಆರೈಕೆ ಮಾಡುವ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದರಿಂದ ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು ಎಂದು ಮಾಹಿತಿ ನೀಡಲಾಗಿದೆ. ಇನ್ನು ಭಾರತ ಮತ್ತು ಬಾಂಗ್ಲಾದೇಶ ಗಡಿ ಭಾಗದಲ್ಲಿ ನಡೆಯುವ ಗೋವುಗಳ ಕಳ್ಳಸಾಗಾಣಿಯ ವಿಷಯವನ್ನೂ ಈ ವರದಿಯಲ್ಲಿ ಪ್ರಸ್ತಾಪಿಸಿದೆ. ಎಲ್ಲ ರಾಜ್ಯಗಳ ಪ್ರತಿ ಜಿಲ್ಲೆಗಳಲ್ಲೂ ಕನಿಷ್ಠ 500 ಗೋವುಗಳಿಗೆ ಆಶ್ರಯ ಸಾಮರ್ಥ್ಯದ ಕೇಂದ್ರ ಸ್ಥಾಪಿಸಿ, ಅಲ್ಲಿ ನಿರಾಶ್ರಿತ ಗೋವುಗಳಿಗೆ ಆಶ್ರಯ ನೀಡುವ ವ್ಯವಸ್ಥೆ ಮಾಡಲಾಗುವುದು. ಇದರಿಂದ ದೇಶದಲ್ಲಿ ಗೋವುಗಳ ಕಳ್ಳಸಾಗಾಣಿಕೆಯನ್ನು ನಿಯಂತ್ರಿಸಬಹುದು.

ಗೋವುಗಳಿಗೆ ವಿಶೇಷ ಗುರುತಿನ ಸಂಖ್ಯೆ ನೀಡುವ ಜವಾಬ್ದಾರಿಯನ್ನು ಪ್ರಾಣಿ ಸಂರಕ್ಷಣಾ ಇಲಾಖೆಗೆ ವಹಿಸಲಾಗಿದ್ದು, ಪ್ರತಿ ಹಸುವಿನ ಕಿವಿಗೆ 12 ಅಂಕಿಗಳ ವಿಶೇಷ ಸಂಖ್ಯೆ ಇರುವ ಪಾಲಿರೆತನ್ ಪಟ್ಟಿಯನ್ನು ಅಳವಡಿಸಲಾಗುವುದು. ಈ ಕಾರ್ಯ ಪೂರ್ಣಗೊಳಿಸಲು ಒಂದು ಲಕ್ಷ ಮಂದಿ ತಾಂತ್ರಿಕ ಸಿಬ್ಬಂದಿ ಸಿದ್ಧಗೊಳಿಸಲಾಗಿದೆ.

ಈ ಕಾರ್ಯವನ್ನು ಶೀಘ್ರದಲ್ಲೇ ಆರಂಭಿಸಿ ಈ ವರ್ಷ ಸುಮಾರು 88 ಮಿಲಿಯನ್ ಹಸುಗಳು ಹಾಗೂ ಎಮ್ಮೆಗಳಿಗೆ ಈ ಸಂಖ್ಯೆ ಅಳವಡಿಸುವ ಗುರಿ ಹೊಂದಲಾಗಿದೆ. ಹೀಗೆ ವಿಶೇಷ ಗುರುತಿನ ಸಂಖ್ಯೆಯುಳ್ಳ ಪ್ರತಿ ಪಟ್ಟಿಯ ಅಳವಡಿಕೆಗೆ ₹ 8 ವೆಚ್ಚ ತಗಲುವ ಅಂದಾಜಿದೆ. ಒಂದು ಬಾರಿ ಹಸುವಿಗೆ ಈ ಸಂಖ್ಯೆಯ ಪಟ್ಟಿ ಅಳವಡಿಸಿದ ನಂತರ ತಾಂತ್ರಿಕ ಸಿಬ್ಬಂದಿ ಆ ಸಂಖ್ಯೆ, ಆ ಹಸುವಿನ ತಳಿ, ಮಾಲೀಕರ ಮಾಹಿತಿ, ಅದರ ಆರೋಗ್ಯ ಸ್ಥಿತಿ, ಅವುಗಳಿಗೆ ಹಾಕಲಾಗಿರುವ ಲಸಿಕೆ, ಅವುಗಳ ಗರ್ಭಧಾರಣೆ ಹೀಗೆ ಇತರೆ ಮಾಹಿತಿಗಳನ್ನು ಆನ್ ಲೈನ್ ಮೂಲಕ ಅಪ್ಡೇಟ್ ಮಾಡಲಾಗುವುದು. ಇದರಿಂದ ಪ್ರತಿ ಹಸು ಹಾಗು ಅದರ ಆರೋಗ್ಯ ಸ್ಥಿತಿಯ ಮೇಲೆ ಗಮನಹರಿಸಬಹುದು.

ಹಸುಗಳಿಗೆ ಆರೋಗ್ಯ ಸಮಸ್ಯೆ ಇದ್ದರೆ ಇದರಿಂದ ಸೂಕ್ತ ಚಿಕಿತ್ಸೆ ನೀಡಬಹುದು. ಪ್ರಮುಖವಾಗಿ ಹಾಲು ಉತ್ಪನ್ನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣಬಹುದು. ಕೇಂದ್ರ ಸರ್ಕಾರ 2022ರ ವೇಳೆಗೆ ಹಾಲು ಉತ್ಪನ್ನಗಾರರ ಆದಾಯವನ್ನು ಎರಡುಪಟ್ಟು ಹೆಚ್ಚಿಸುವ ಗುರಿ ಹೊಂದಿದ್ದು, ಇದಕ್ಕೆ ಈ ಯೋಜನೆ ಸಹಕಾರಿಯಾಗಲಿದೆ. ಹೀಗಾಗಿ ₹ 148 ಕೋಟಿ ಹಣವನ್ನು ಸರ್ಕಾರ ಈ ಯೋಜನೆಗೆ ಮೀಸಲಿಟ್ಟಿದ್ದು, ಎಲ್ಲ ರಾಜ್ಯಗಳಲ್ಲೂ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಿದೆ. ಕೆಲವು ರಾಜ್ಯಗಳಲ್ಲಿ ಇದೇ ವರ್ಷವೇ ಈ ಕಾರ್ಯ ಮುಕ್ತಾಯಗೊಳಿಸುವ ಸೂಚನೆ ಸಹ ನೀಡಲಾಗುವುದು. ಈ ಎಲ್ಲ ಅಂಶಗಳನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಲಾಗಿದೆ.

Leave a Reply