ಈಶ್ವರಪ್ಪ-ಯಡಿಯೂರಪ್ಪ ಕಿತ್ತಾಟ, ‘ಮಿಷನ್ 150’ ಅಣಕ!

ಬೇಟೆಗಾರ ಅನ್ನಿಸಿಕೊಂಡವನು ಮೊದಲು ಶಿಕಾರಿ ಮಾಡಿ, ನಂತರ ಪಾಲು ಮಾಡಿಕೊಳ್ಳುವ ಬಗ್ಗೆ ಮಾತಾಡಬೇಕು. ತಲೆ ಭಾಗ ಯಾರಿಗೆ, ತೊಡೆ ಭಾಗ ಯಾರಿಗೆ ಅನ್ನೋ ಪ್ರಶ್ನೆ ಬರೋದು ಶಿಕಾರಿ ಆದ ನಂತರವಷ್ಟೇ. ಇನ್ನೂ ಕೊವಿನೇ ಹಿಡಿದಿಲ್ಲ. ಗುರಿನೂ ಇಟ್ಟಿಲ್ಲ. ಶಿಕಾರಿಯೂ ಸಿಕ್ಕಿಲ್ಲ. ಆಗಲೇ ನನ್ನ ಪಾಲು ಇಷ್ಟು, ನನ್ನ ಪಾಲು ಅಷ್ಟು ಅಂತ  ಕಿತ್ತಾಡುತ್ತಿದ್ದಾರೆ. ಕಿತ್ತಾಡೋವಾಗ ಗುರಿ ಹಿಡಿಯೋಕೆ ಆಗುವುದಿಲ್ಲ. ಗುರಿ ಹಿಡಿಯದಿದ್ದ ಮೇಲೆ ಶಿಕಾರಿಯೂ ಸಿಕ್ಕೋದಿಲ್ಲ. ‘ಅಯ್ಯಯ್ಯೋ ಸರಿಯಾಗಿ ಗುರಿ ಇಟ್ಟು ಹೊಡೆದಿದ್ರೆ 150 ಕೆಜಿ ಹಂದಿನೇ ಸಿಕ್ತಿತ್ತಲ್ಲಪ್ಪಾ, ಏನು ಮಾಡೋದು? ಗುರಿ ತಪ್ಪೋಯ್ತಲ್ಲ’ ಅಂತ ಬಾಯಿ ಬಡಿದುಕೊಳ್ಳೋದು ಆಮೇಲೆ ಇದ್ದಿದ್ದೇ!

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸೀಟು ಗ್ಯಾರಂಟಿ, ಅದರ ಮೇಲೆ ಬರೋದೆಲ್ಲ ಬೋನಸ್ ಅನ್ನುವ ತಮ್ಮ ಭ್ರಮೆಗೆ ‘ಮಿಷನ್ 150’ ಅಂತ ಹೆಸರಿಟ್ಟುಕೊಂಡು, ಮೊನ್ನೆ ನಂಜನಗೂಡು ಮತ್ತು ಗುಂಡ್ಲುಪೇಟೆ ಮರುಚುನಾವಣೆಯಲ್ಲಿ ಮುಖ ಅಪ್ಪಚ್ಚಿ ಆಗುವಂತೆ ದಬಾಕಿಕೊಂಡಿರುವ ಕರ್ನಾಟಕದ ಕದನ ನಿರತ ಬಿಜೆಪಿ ನಾಯಕರ ಸ್ಥಿತಿ ಕೂಡ ಇದೇ ರೀತಿ ಇದೆ. ನಾಲಿಗೆಯನ್ನೇ ಕತ್ತಿ ಮಾಡಿಕೊಂಡು ಹಾದಿಬೀದೀಲಿ ಕಡಿದಾಡುತ್ತಾ ‘ಮಿಷನ್ 150’ ಅಂತಾ ಕೂಗಿದರೆ, ಅಧಿಕಾರ ಅನ್ನೋದೇನು ರಾಗಿ ಮಿಷನ್ ಕೆಟ್ಟೋಯ್ತೇ? ಮೇಲೆ ರಾಗಿ ಹಾಕಿದ ತಕ್ಷಣ ಕೆಳಗೆ ಹಿಟ್ಟಿನಂತೆ ಉದುರೋಕೆ?

ನಿಜ, ಯಡಿಯೂರಪ್ಪ ಮತ್ತು ಈಶ್ವರಪ್ಪ ಕೃಪಾಪೋಷಿತ ಬಿಜೆಪಿ ಕದನ ಮಂಡಳಿ ಪ್ರತಿನಿತ್ಯ ಪ್ರಸ್ತುತ ಪಡಿಸುತ್ತಿರುವ ಆರೋಪ-ಪ್ರತ್ಯಾರೋಪ ಪ್ರಹಸನ ನೋಡುಗರಿಗೆ ಪುಗಸಟ್ಟೆ ಮನರಂಜನೆ ಒದಗಿಸುತ್ತಿದೆ. ಬ್ಲಾಕ್‌ಮಟ್ಟದ ಸಭೆಯಿಂದ ಹಿಡಿದು ಕೋರ್ ಕಮಿಟಿ ಸಭೆವರೆಗೂ, ಚುನಾವಣೆ ಪ್ರಚಾರದಿಂದ ಹಿಡಿದು ವೈಯಕ್ತಿಕ ನಿಂದನೆವರೆಗೂ ಎಗ್ಗುಸಿಗ್ಗಿಲ್ಲದೆ ಈ ಈರ್ವರು ನಾಯಕರು ನಡೆದುಕೊಳ್ಳುತ್ತಿರುವ ರೀತಿ ಪಕ್ಷದ ಒಗ್ಗಟ್ಟಿಗೆ ಸವಾಲಾಗಿದ್ದು, ಇತರ ಮುಖಂಡರು ಹಾಗೂ ಕಾರ್ಯಕರ್ತರನ್ನು ಚಿಂತೆಯ ಕೂಪದಲ್ಲಿ ಮುಳುಗಿಸಿದೆ. ಕುತ್ತಿಗೆ ಪಟ್ಟಿ ಹಿಡಿದುಕೊಂಡಿಲ್ಲ ಎನ್ನುವುದನ್ನು ಬಿಟ್ಟರೆ ಬೀದಿ ಕೊಳಾಯಿ ಜಗಳಕ್ಕೆ ಯಾವುದರಲ್ಲೂ ಕಡಿಮೆ ಇರದ ಈ ನಾಯಕರ ಕಚ್ಚಾಟ ಅವರನ್ನು ಭ್ರಮನಿರಶನರನ್ನಾಗಿಸಿದೆ.

ಗುಂಡ್ಲುಪೇಟೆ ಹಾಗೂ ನಂಜನಗೂಡು ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಏ. 23 ಭಾನುವಾರ ನಡೆದ ಆತ್ಮಾವಲೋಕನ ಸಭೆಗೆ ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ಮುಖಂಡರಾದ ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಹಾಜರಾಗಿಲ್ಲ. ಪೂರ್ವ ನಿಗದಿತ ಕಾರ್ಯಕ್ರಮದ ನೆಪ ಹೇಳಿ ಗೈರಾಗಿದ್ದಾರೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಮರುಚುನಾವಣೆ ಸೋಲಿನ ಆತ್ಮಾವಲೋಕನ ಸಭೆ ಸಹಜವಾಗಿಯೇ ಪ್ರಮುಖವಾದದ್ದು. ಆದ್ಯತೆ ವಿಚಾರ ಬಂದಾಗ ಈ ಸಭೆಯೇ ಮುಖ್ಯ. ಆದರೂ ಈ ಇಬ್ಬರು ಪ್ರಮುಖ ನಾಯಕರು ತಪ್ಪಿಸಿಕೊಂಡಿದ್ದಾರೆ. ಈಶ್ವರಪ್ಪ ಅವರಂತೂ ಈ ಸಭೆ ಬಗ್ಗೆ ಬಹಿರಂಗವಾಗಿಯೇ ಕಿಡಿ ಕಾರಿದ್ದರು. ಯಾವುದೇ ಕಾರಣಕ್ಕೂ ತಾವು ಹೋಗುವುದಿಲ್ಲ ಎಂದು ಹೇಳಿದ್ದರ ಹಿಂದೆ ಅನ್ಯ ನೆಪಕ್ಕಿಂತ ಅಸಮಾಧಾನದ ಹೊಗೆಯೇ ಎದ್ದು ಕಾಣುತ್ತಿತ್ತು. ಶೆಟ್ಟರ್ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೈರು, ಇವರು ಕರೆದ ಸಭೆಗೆ ಅವರ ಗೈರು ವರ್ಷದಿಂದಲೂ ನಡೆದುಕೊಂಡೇ ಬಂದಿದೆ. ಯಡಿಯೂರಪ್ಪನವರು ಬಿಜೆಪಿ ಅಧ್ಯಕ್ಷರಾಗಿ ಬಂದ ನಂತರ ಆರಂಭವಾಗಿರುವ ಸಭೆ-ಸಮಾರಂಭಗಳಿಗೆ ಭಿನ್ನ ನಾಯಕರ ಗೈರು ಚಾಳಿ ಇವತ್ತಿಗೂ ನಿಂತಿಲ್ಲ. ಅದು ಪಕ್ಷದ ಸಂಘಟನೆ ಕೆಲಸವಿರಲಿ, ಸರಕಾರದ ವಿರುದ್ಧ ಹೋರಾಟವಿರಲಿ, ‘ಎತ್ತು ಏರಿಗೆಳೆದರೆ, ಕೋಣ ನೀರಿಗಿಳಿಯತ್ತದೆ’ ಎಂಬಂಥ ಪ್ರತೀತಿ. ಸಾಮರಸ್ಯ, ಸಹಕಾರ ಎಂಬುದು ಇಲ್ಲವೇ ಇಲ್ಲ. ಆದರೂ ‘ಮಿಷನ್ 150’ರ ಕನಸು. ಎರಡು ಕ್ಷೇತ್ರ ಗೆಲ್ಲಲಾಗದಿದ್ದರೂ 150 ಸೀಟಿನ ಮಾತು. ಸೀಟು ಬಗ್ಗೆ ಸೀಟಿ ಊದೋದು ಬಿಟ್ಟು ಅವರು ರೂಪಿಸಬೇಕಿರುವುದು ‘ಬಿಜೆಪಿ ರಿಪೇರಿ ವಿಷನ್’ ಅನ್ನೋದು ಪಕ್ಷ ನಿಷ್ಠರ ಮಾತು.

ಪಕ್ಷ ಇದ್ದರೆ ಎಲ್ಲರೂ ಅನ್ನುವುದು ನಾಯಕನಾದವನಿಗೆ ಮೊದಲು ಗೊತ್ತಿರಬೇಕಾದ ವಿಚಾರ. ಈಶ್ವರಪ್ಪನವರು ಎತ್ತುತ್ತಿರುವ ವಿಷಯ ಸರಿ ಇರಬಹುದು. ಆದರೆ ಎತ್ತುತ್ತಿರುವ ರೀತಿ ಸರಿ ಇಲ್ಲ. ಅವರು ಸಮಸ್ಯೆಯನ್ನು ಸಾರ್ವಜನಿಕಗೊಳಿಸುವ ಮೂಲಕ ಪಕ್ಷಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆಯೇ ಹೊರತು ಬೇರೇನನ್ನೂ ಸಾಧಿಸುತ್ತಿಲ್ಲ. ಅವರು ಶಿಕಾರಿಗೆ ಮೊದಲೇ ಪಾಲು ಕೇಳುತ್ತಿದ್ದಾರೆ. ತಾವು ಯಡಿಯೂರಪ್ಪನವರಿಗೆ ಇಟ್ಟಿರುವ ಗುರಿ ಪಕ್ಷಕ್ಕೆ ತಗುಲುತ್ತಿದೆ ಎಂಬುದನ್ನು ಮರೆತಿದ್ದಾರೆ. ಈಶ್ವರಪ್ಪನವರು ಸಾರಿರುವ ಸಮರದ ಹಿಂದೆ ಬೇರೆ ನಾಯಕರು ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಸಿಎಂ ಅಭ್ಯರ್ಥಿ ಆಗಿರುವುದು ಅವರಿಗೆ ಇಷ್ಟವಿಲ್ಲ. ಹಾಗೆಂದು ಎದುರಿಗೆ ನಿಂತು ಹೇಳುವಷ್ಟು ತಾಕತ್ತು ಅವರಿಗ್ಯಾರಿಗೂ ಇಲ್ಲ. ಹೀಗಾಗಿ ಯಡಿಯೂರಪ್ಪನವರಿಗೆ ಒಳೇಟು ನೀಡಲು ಈಶ್ವರಪ್ಪನವರಪ್ಪನವರನ್ನು ಅಸ್ತ್ರ ಮಾಡಿಕೊಂಡಿದ್ದಾರೆ. ಹರಕುಬಾಯಿಯ ಈಶ್ವರಪ್ಪನವರು ಯಡಿಯೂರಪ್ಪನವರ ವಿರುದ್ಧ ಯುದ್ಧ ಮಾಡುವ ಭರದಲ್ಲಿ ಬಿಜೆಪಿ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ. ಎದುರಾಳಿ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾ ದಳದವರು ಇದನ್ನು ಕಂಡು ಮುಸಿಮುಸಿ ನಗುತ್ತಿದ್ದಾರೆ.

ನಾಯಕರ ಸ್ವಪ್ರತಿಷ್ಠೆ, ದ್ವೇಷ, ಅಸೂಯೆ, ಅಹಮಿಕೆ ರಾಜ್ಯ ಬಿಜೆಪಿಯ ನೈಜ ಶತ್ರುಗಳು. ಮರುಚುನಾವಣೆ ಸೋಲಿಗೂ ಇದೇ ಪ್ರಮುಖ ಕಾರಣ. ಚುನಾವಣೆಗೆ ಮೊದಲೇ ಗೆಲುವಿನ ಹೆಸರು ತಮ್ಮದಾಗಿಸಿಕೊಳ್ಳಬೇಕೆಂಬ ಯಡಿಯೂರಪ್ಪನವರ ಅತೀವ ವಾಂಛೆ, ಅವರ ವಾಂಛೆಯನ್ನೇ ತಿರುಗುಬಾಣ ಮಾಡಲು ತವಕಿಸಿದ ಪಕ್ಷದ ಇತರ ಮುಖಂಡರು, ಬಿಜೆಪಿ ಕಚ್ಚಾಟದ ಸದ್ಬಳಕೆ, ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಂಡ ಅಧಿಕಾರರೂಢ ಕಾಂಗ್ರೆಸ್, ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ಕಾಂಗ್ರೆಸ್ಸಿಗೆ ಪರೋಕ್ಷ ನೆರವು ಕೊಟ್ಟ ಜೆಡಿಎಸ್ – ಈ ಎಲ್ಲದರ ಒಟ್ಟು ಫಲಿತಾಂಶವೇ ಮರುಚುನಾವಣೆಯಲ್ಲಿ ಬಿಜೆಪಿ ಸೋಲು. ಪಂಚರಾಜ್ಯಗಳ ಪೈಕಿ ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಕರ್ನಾಟಕದಲ್ಲಾದ ಸೋಲು ನಿಜಕ್ಕೂ ಬಿಜೆಪಿ ಆತ್ಮಸ್ಥೈರ್ಯ ಕಸಿದಿದೆ.

ಯಡಿಯೂರಪ್ಪನವರು ಈ ಚುನಾವಣೆ ಪ್ರಚಾರದಲ್ಲಿ ತಮ್ಮ ಪಕ್ಷದವರನ್ನೂ ಸೇರಿಸಿ ಎಲ್ಲರನ್ನೂ ಹಿಂದಿಕ್ಕಿ ತಿರುಗಿದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಯಡವಟ್ಟಾಗಿದ್ದು ಇಲ್ಲೇ. ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದಿಂದ ಇದನ್ನು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಕರೆದರು. ಆಡಳಿತ ಪಕ್ಷದವರು ಜನಮತಗಣನೆ ಅಲ್ಲ ಎಂದರೂ ಇವರು ಮಾತ್ರ ಅದನ್ನು ಒಪ್ಪಲಿಲ್ಲ. ಇದು ನನ್ನ ಮತ್ತು ಸಿದ್ದರಾಮಯ್ಯ ನಡುವಣ ಚುನಾವಣೆ ಎಂದರು. ಜನಮತಗಣನೆ ಎಂದರು. ಗೆಲ್ಲುವುದು ಬಿಜೆಪಿಯೇ, ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬೀಗಿದರು. ಯಡಿಯೂರಪ್ಪನವರು ಹಿಂದೆ ಅಧಿಕಾರದಲ್ಲಿದ್ದಾಗ ಅನೇಕ ಮರುಚುನಾವಣೆಗಳನ್ನು ಮಾಡಿದ್ದಾರೆ. ಅಧಿಕಾರದಲ್ಲಿರುವ ಪಕ್ಷ ಚುನಾವಣೆ ಹೇಗೆ ನಡೆಸುತ್ತದೆ ಎಂಬುದರ ಸ್ಪಷ್ಟ ಕಲ್ಪನೆ ಅವರಿಗಿತ್ತು. ಇದು ಗೊತ್ತಿದ್ದರೂ ನಂಜನಗೂಡು ಮತ್ತು ಗುಂಡ್ಲುಪೇಟೆ ಚುನಾವಣೆಯನ್ನು ಆಡಳಿತಪಕ್ಷದವರಿಗಿಂತಲೂ ಹೆಚ್ಚು ಗಂಭೀರವಾಗಿ ಪರಿಗಣಿಸಿದ್ದು, ಚುನಾವಣೆ ಅತಿರೇಕಕ್ಕೆ ಹೋಗುವಂತೆ ಮಾಡಿದ್ದು ಅವರೇ. ಅವರು ಒಳಮಟ್ಟದಲ್ಲಿ, ಗುಪ್ತಗಾಮಿನಿಯಾಗಿ ಕೆಲಸ ಮಾಡಿದ್ದರೆ ಆಡಳಿತ ಪಕ್ಷದವರು ಈ ಚುನಾವಣೆಯನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಗಂಭೀರವಾಗಿ ತೆಗೆದುಕೊಳ್ಳುವಂತೆ ಪ್ರಚೋದನೆ ನೀಡಿದ್ದೇ ಯಡಿಯೂರಪ್ಪನವರು. ಎದುರಾಳಿಗೆ ಗೊತ್ತಾಗದಂತೆ ಚಿತ್ ಮಾಡುವುದು ಬೇರೆ. ಎದುರಾಳಿಯನ್ನು ಕೆರಳಿಸಿ ಚಿತ್ ಮಾಡುವುದು ಬೇರೆ. ಕೆರಳಿಸಿ ಚಿತ್ ಮಾಡಲು ತಾಕತ್ತು ಎದುರಾಳಿಗಿಂತಲೂ ಜೋರಾಗಿರಬೇಕು. ಹಿಂದೆ ಹೆಬ್ಬಾಳ ಮತ್ತು ದೇವದುರ್ಗ ಮರುಚುನಾವಣೆಗಳಲ್ಲಿ ಬಿಜೆಪಿ ಸೈಲೆಂಟಾಗಿ ಗೆದ್ದದ್ದನ್ನು ಯಡಿಯೂರಪ್ಪನವರು ಏಕೆ ಮರೆತು ಹೋದರೋ ಗೊತ್ತಿಲ್ಲ.

ಯಡಿಯೂರಪ್ಪನವರಿಗೆ ಗೆಲುವಿನ ಬಗ್ಗೆ ಅದೆಂಥ ಭ್ರಮೆ ಇತ್ತೆಂದರೆ ಪಕ್ಷದ ಇತರ ನಾಯಕರು ಅದರ ಲಾಭ ಪಡೆಯುವುದು ಅವರಿಗೆ ಬೇಕಿರಲಿಲ್ಲ. ಹೀಗಾಗಿ ಪಕ್ಷದ ಇತರ ನಾಯಕರಿಗೆ ಇಂತಿಷ್ಟೇ ಎಂದು ಪ್ರಚಾರ ಸಭೆಗಳನ್ನು ನಿಗದಿ ಮಾಡಿಟ್ಟಿದ್ದರು. ಇತರ ನಾಯಕರು ಹೆಚ್ಚು ಪಾಲ್ಗೊಂಡರೆ ಗೆಲುವಿನ ಕೀರ್ತಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ ಎಂಬ ಮುನ್ನೆಚ್ಚರಿಕೆ ಅಲ್ಲಿತ್ತು. ಅನಂತಕುಮಾರ್, ಸದಾನಂದಗೌಡ, ಜಗದೀಶ ಶೆಟ್ಟರ್, ಈಶ್ವರಪ್ಪನವರ ಪ್ರಚಾರ ಕಾರ್ಯವನ್ನು ಒಂದು ಸಲಕ್ಕೆ ಸೀಮಿತವಾದದ್ದು ಇದೇ ಕಾರಣಕ್ಕೆ. ಇತರ ನಾಯಕರಿಗೂ ಅಷ್ಟೇ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಅವರಿಗೂ ಬೇಕಿರಲಿಲ್ಲ. ಗೆದ್ದರೆ ಯಡಿಯೂರಪ್ಪನವರನ್ನು ಹಿಡಿಯಲು ಆಗುವುದಿಲ್ಲ, ಅವರಿಗೆ ಮೂಗುದಾರ ಹಾಕಬೇಕಾದರೆ ಪಕ್ಷ ಇಲ್ಲಿ ಸೋಲಬೇಕು ಎಂಬ ಒಳಾಸೆಯಿತ್ತು. ಅದು ನೆರವೇರಿದ್ದಕ್ಕೆ ಅವರಿಗೆ ಬಹಳ ಖುಷಿ ಇದೆಯೇ ಹೊರತು ಪಕ್ಷ ಸೋತಿದ್ದರ ಬಗ್ಗೆ ಯಾವುದೇ ದುಃಖವಿಲ್ಲ.

ಇಲ್ಲಿ ಇನ್ನೂ ಒಂದು ವಿಚಾರವಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಶ್ರೀನಿವಾಸ ಪ್ರಸಾದ್ ಮರುಚುನಾವಣೆ ಎದುರಿಸುವ ತೊಂದರೆ ತೆಗೆದುಕೊಳ್ಳುವಷ್ಟು ಪೂರ್ವ ತಯಾರಿ ಮಾಡಿಕೊಂಡಿರಲಿಲ್ಲ. ಕೆಲಸವರಿಗೆ ವರ್ಚಸ್ಸು ಇರುತ್ತದೆ. ಇನ್ನೂ ಕೆಲವರಿಗೆ ಶಕ್ತಿ ಇರುತ್ತದೆ. ಶ್ರೀನಿವಾಸ ಪ್ರಸಾದ್ ಅವರಿಗೆ ವರ್ಚಸ್ಸು ಇತ್ತೇ ಹೊರತು, ಚುನಾವಣೆ ಎದುರಿಸುವ ತಾಕತ್ತು ಇರಲಿಲ್ಲ. ಮರುಚುನಾವಣೆ ಎಂದರೆ ಆಡಳಿತರೂಢ ಸರಕಾರ ಹೇಗೆ ಮೈಮೇಲೆ ಮುರಿದುಕೊಂಡು ಬೀಳುತ್ತದೆ ಎಂಬುದರ ಸ್ಪಷ್ಟ ಕಲ್ಪನೆ ಅವರಿಗಿರಬೇಕಿತ್ತು. ಅದರಲ್ಲೂ ಹೇಳಿ-ಕೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾಯಿಗೆ ಬಂದಂತೆ ಏಕವಚನದಲ್ಲಿ ನಿಂದಿಸಿ ಅವರ ಆತ್ಮಗೌರವವನ್ನು ಕೆರಳಿಸಿದ್ದರು. ಒಬ್ಬರನ್ನು ಕೆಣಕುವಾಗ ತಮ್ಮ ತಾಕತ್ತು ಏನು ಎಂಬುದು ಪ್ರತಿಪಕ್ಷದಿಂದ ಕಣಕ್ಕಿಳಿದಿದ್ದ ಪ್ರಸಾದ್ ಅವರಿಗೆ ಗೊತ್ತಿರಬೇಕಿತ್ತು. ಅದನ್ನು ಅರಿಯುವಲ್ಲಿ ವಿಫಲವಾದದ್ದೂ ಸೋಲಿನ ಕಾರಣಗಳಲ್ಲಿ ಮುಖ್ಯವಾದದ್ದು. ಇನ್ನು ಗುಂಡ್ಲುಪೇಟೆಯಲ್ಲಿ ಗೆಲ್ಲಲು ಬಿಜೆಪಿಗೆ ಅವಕಾಶವಿದ್ದರೂ ಆಡಳಿತ ಪಕ್ಷದ ಯಂತ್ರ, ತಂತ್ರಗಾರಿಕೆ, ಹಣಬಲದ ಎದಿರು ಮುರುಟಿಕೊಂಡಿತು.

 ಹೌದು, ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ರಾಜಕೀಯ ಧೃವೀಕರಣ ಆರಂಭವಾಗಿದೆ. ಪಂಜರಾಜ್ಯ ಚುನಾವಣೆ ಫಲಿತಾಂಶದಲ್ಲಿ ಮರುಬಿಂಬಿತ ಆಗಿರುವ ಮೋದಿ ಅಲೆ ವಿರುದ್ಧ ಬಿಜೆಪಿಯೇತರ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುವ ‘ಮಹಾಘಟ ಬಂದನ್’ ಪ್ರಕ್ರಿಯೆ ಚಾಲನೆ ಪಡೆದಿದೆ.  ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತಿಶ್‌ಕುಮಾರ್ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಇನ್ನೂ ಹಲವರು ನಾಯಕರು ಈ ‘ಮಹಾಘಟ ಬಂಧನ’ಕ್ಕೆ ಒಳಗಾಗಲು ಆಸಕ್ತಿ ತೋರಿದ್ದಾರೆ. ಇಂಥ ಸನ್ನಿವೇಶದಲ್ಲಿ ರಾಜ್ಯ ಬಿಜೆಪಿ ಆಂತರಿಕ ವಿಘಟನೆ ಹಾದಿಯಲ್ಲಿ ಮುನ್ನುಗ್ಗುತ್ತಿದೆ. ಆದರೂ ಅದನ್ನು ಒಪ್ಪಿಕೊಳ್ಳಲು ನಾಯಕರು ಸಿದ್ಧರಿಲ್ಲ. ಉತ್ತರ ಪ್ರದೇಶದಲ್ಲಿ ಜಾತ್ಯತೀತ ಶಕ್ತಿಗಳು ಒಂದಾದರೂ ಅಲ್ಲಿನ ಚುನಾವಣೆ ಫಲಿತಾಂಶ ಏನಾಯಿತು? ಅಲ್ಲಿ ಗೆದ್ದಿದ್ದು ಬಿಜೆಪಿಯೇ ಅಲ್ಲವೇ? ಎಂದು ಯಡಿಯೂರಪ್ಪನವರು ಕೇಳಿರುವುದು ಉಡಾಫೆಗಷ್ಟೇ ಸೀಮಿತ. ಏಕೆಂದರೆ ಉತ್ತರ ಪ್ರದೇಶದಲ್ಲಿ ಗೆದ್ದಿದ್ದರೂ ಗುಂಡ್ಲುಪೇಟೆ ಮತ್ತು ನಂಜನಗೂಡಲ್ಲಿ ಇವರೇಕೆ ಗೆಲ್ಲಲಿಲ್ಲ ಎಂಬ ಪ್ರಶ್ನೆಯೂ ಮೂಡುತ್ತದೆ. ಪ್ರಶ್ನೆಗೆ ಪ್ರಶ್ನೆ ಉತ್ತರ ಆಗುವುದಿಲ್ಲ.

ಯಡಿಯೂರಪ್ಪ ಮತ್ತು ಈಶ್ವರಪ್ಪನವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್, ಮಹದೇವಪ್ಪ ಅವರಂಥ ನಾಯಕರು ಚುನಾವಣೆ ಗೆಲುವಿಗೆ ಶ್ರಮಿಸಿದ್ದು ಸಿದ್ದರಾಮಯ್ಯನವರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎಂಬ ಕಾರಣಕ್ಕಾಗಿ ಅಲ್ಲ. ಬದಲಿಗೆ ಪಕ್ಷ ಗೆಲ್ಲಲಿ ಎಂದು. ಸಿದ್ದರಾಮಯ್ಯನವರ ವಿರುದ್ಧ ದ್ವೇಷ-ಅಸೂಯೆ ಸಾಧಿಸುವುದಿದ್ದರೆ ಈ ಚುನಾವಣೆಗಿಂಥ ದೊಡ್ಡ ಅಸ್ತ್ರ ಅವರಿಗೆ ಬೇರೆ ಬೇಕಿರಲಿಲ್ಲ. ಕಿತ್ತಾಟ ಪಕ್ಷವನ್ನು ಬಲಗೊಳಿಸಬೇಕೆ ಹೊರತು, ಅದನ್ನು ಮತ್ತಷ್ಟು ಹಾಳುಗೆಡವಬಾರದು. ಈಗ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದವರೇ ಹೆಚ್ಚಾಗಿದ್ದರೂ ಯಡಿಯೂರಪ್ಪನವರಿಗೆ ಚುನಾವಣೆ ಗೆಲ್ಲಲು ಆಗಲಿಲ್ಲ. ನಂಜನಗೂಡಲ್ಲಂತೂ ಶ್ರೀನಿವಾಸ ಪ್ರಸಾದ್ ಪ್ರತಿನಿಧಿಸುವ ಪರಿಶಿಷ್ಟರು ಎರಡನೇ ಅತಿದೊಡ್ಡ ಸಮುದಾಯವಾಗಿದ್ದರೂ ಅಲ್ಲೂ ಸೋಲು ತಪ್ಪಿಸಿಕೊಳ್ಳಲು ಆಗಲಿಲ್ಲ ಎಂದು ಬಿಜೆಪಿ ಒಳಗಣ ಯಡಿಯೂರಪ್ಪ ವಿರೋಧಿಗಳೇ ಆಡಿಕೊಳ್ಳುತ್ತಿದ್ದಾರೆ. ಬಿಜೆಪಿ ಎತ್ತ ಸಾಗುತ್ತಿದೆ, ಅಲ್ಲಿನ ನಾಯಕರ ಮನಸ್ಥಿತಿ ಎಂಥದ್ದು ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಿಲ್ಲ. ಮರುಚುನಾವಣೆಯಲ್ಲಿ ಮಖಾಡೆ ಮಲಗಿಕೊಂಡರೂ ತಿದ್ದಿಕೊಳ್ಳುವ ಬುದ್ಧಿ ಚಿಗುರದಿರುವುದು ಬಿಜೆಪಿಯ ‘ಮಿಷನ್ 150’ ಕನಸಿನ ಒಂದು ಅಣಕವೇ ಸರಿ.

ಲಗೋರಿ: ಕೆಲವೊಮ್ಮೆ ಯೋಗಕ್ಕೂ ಯೋಗ್ಯತೆ ಇರಬೇಕಾಗುತ್ತದೆ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply