ಮಾಲೆಗಾಂವ್ ಸ್ಫೋಟ: ಆರೋಪಿ ಪ್ರಗ್ಯಾ ಸಿಂಗ್ ಗೆ ಜಾಮೀನು, ಪ್ರಸಾದ್ ಪುರೋಹಿತ್ ಗೆ ನಿರಾಸೆ

ಡಿಜಿಟಲ್ ಕನ್ನಡ ಟೀಮ್:

2008ರ ಮಾಲೆಗಾಂವ್ ಸ್ಫೋಟದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್, ಪ್ರಮುಖ ಆರೋಪಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಜಾಮೀನು ನೀಡಿದರೆ, ಮತ್ತೊಬ್ಬ ಆರೋಪಿ ಪ್ರಸಾದ್ ಪುರೋಹಿತ್ ಅವರಿಗೆ ಜಾಮೀನು ನಿರಾಕರಿಸಿದೆ. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಹೈ ಕೋರ್ಟ್, ‘ಈ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ವಿರುದ್ಧ ಯಾವುದೇ ಪ್ರಮುಖ ಸಾಕ್ಷ್ಯಾಧಾರಗಳಿಲ್ಲ’ ಎಂದು ಹೇಳಿ, ₹ 5 ಲಕ್ಷ ಶೂರಿಟಿ ಕಟ್ಟಿ ಜಾಮೀನು ಪಡೆಯಲು ಅವಕಾಶ ಮಾಡಿಕೊಟ್ಟಿದೆ.

2008ರ ಸೆಪ್ಟೆಂಬರ್ 8ರಂದು ನಾಸಿಕ್ ಸಮೀಪದ ಮಾಲೆಗಾಂವ್ ಪ್ರದೇಶದ ಹಮೀದಿಯಾ ಮಾಸ್ಕ್ ಬಳಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು. 6 ಮಂದಿಯ ಪ್ರಾಣ ಬಲಿ ಪಡೆದ ಈ ಪ್ರಕರಣದಲ್ಲಿ ಪ್ರಗ್ಯಾ ಸಿಂಗ್ ಅವರ ಕೈವಾಡವಿರುವುದಾಗಿ ಆರೋಪ ಮಾಡಲಾಗಿತ್ತು. ಈಗ ಪ್ರಗ್ಯಾ ಅವರಿಗೆ ಜಾಮೀನು ನೀಡಿರುವ ಹೈ ಕೋರ್ಟ್, ಪ್ರಗ್ಯಾ ಅವರು ತಮ್ಮ ಪಾಸ್ ಪೋರ್ಟ್ ಅನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಅಲ್ಲದೆ ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎಂಬ ಸೂಚನೆ ನೀಡಿದೆ.

ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪ್ರಗ್ಯಾ ಹಾಗೂ ಪುರೋಹಿತ್ ಇಬ್ಬರಿಗೂ ಪ್ರಾಥಮಿಕ ಹಂತದ ನ್ಯಾಯಾಲಯದಲ್ಲಿ ಜಾಮೀನು ನಿರಾಕರಿಸಲಾಗಿತ್ತು. ಹೀಗಾಗಿ ಇಬ್ಬರೂ ಆರೋಪಿಗಳು ಕಳೆದ ಫೆಬ್ರವರಿಯಲ್ಲಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಒಂದು ತಿಂಗಳಲ್ಲಿ ಅನೇಕ ಬಾರಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಎನ್ಐಎ ಪ್ರಗ್ಯಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಅಲ್ಲದೆ ಪ್ರಗ್ಯಾ ಅವರ ಜಾಮೀನು ಅರ್ಜಿಗೆ ತಮಗೆ ಯಾವುದೇ ಆಕ್ಷೇಪಣೆ ಇಲ್ಲ ಎಂದೂ ತಿಳಿಸಿತ್ತು. ಹೀಗಾಗಿ ಬಾಂಬೆ ಹೈ ಕೋರ್ಟ್ ಪ್ರಗ್ಯಾ ಅವರಿಗೆ ಜಾಮೀನು ನೀಡಿದೆ.

ಈ ಪ್ರಕರಣದ ಮತ್ತೊಬ್ಬ ಆರೋಪಿ ಪುರೋಹಿತ್ ಅವರ ಜಾಮೀನು ಅರ್ಜಿಗೆ ಎನ್ಐಎ ಆಕ್ಷೇಪ್ತ ವ್ಯಕ್ತಪಡಿಸಿದ್ದು, ‘ಪುರೋಹಿತ್ ಅವರು ಈ ಹಿಂದೆ ಸಾಕಷ್ಟು ಬಾರಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದ್ದು, ಹಲವು ಪಿತೂರಿ ಸಭೆಗಳಲ್ಲೂ ಭಾಗವಹಿಸಿದ್ದರು’ ಎಂದು ವಾದ ಮಂಡಿಸಿತು. ಇದಕ್ಕೆ ಪುರೋಹಿತ್ ಅವರು, ‘ಎನ್ಐಎ ತನ್ನ ಇಚ್ಛೆಗೆ ಬಂದಂತೆ ಪ್ರಕರಣದ ಆರೋಪಿಗಳ ವಿರುದ್ಧ ಆರೋಪ ಮಾಡುತ್ತಿದೆ ಹಾಗೂ ಸಾಕ್ಷ್ಯಾಧಾರಗಳನ್ನು ನೀಡುತ್ತಿದೆ. ಈ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಗುತ್ತಿದೆ. ನನ್ನ ವಿರುದ್ಧ ಇರುವ ಎಲ್ಲ ಸಾಕ್ಷ್ಯಾಧಾರಗಳನ್ನು ಸೃಷ್ಟಿಮಾಡಲಾಗಿದೆ’ ಎಂದು ವಾದ ಮಂಡಿಸಿದ್ದರು.

Leave a Reply