ನಕ್ಸಲರ ಕೃತ್ಯಕ್ಕೆ ಕಡು ನಿಂದೆ ವ್ಯಕ್ತಪಡಿಸಿ ಸುಮ್ಮನಾಗುವುದಕ್ಕೆ ಕಾಂಗ್ರೆಸ್ ಸಾಕಿತ್ತು, ಬಿಜೆಪಿ ಸರ್ಕಾರವೇ ಏಕೆ ಬೇಕಿತ್ತು?

ಚೈತನ್ಯ ಹೆಗಡೆ

ಈ ಮೇಲಿನ ಪ್ರಶ್ನೆ ಕೇಳುತ್ತಿರುವವರು ಬಿಜೆಪಿ ವಿರೋಧಿಗಳಲ್ಲ, ಅದರ ಬೆಂಬಲಿಗರೇ.

ಸುಕ್ಮಾದಲ್ಲಿ ನಕ್ಸಲರ ದಾಳಿಗೆ ಸಿ ಆರ್ ಪಿಎಫ್ ನ 25 ಮಂದಿ ಯೋಧರ ಬಲಿದಾನವಾಗಿದೆ. ಈ ಹಿಂದಿನ ,.ಸರ್ಕಾರಗಳಲ್ಲಿ ಘನ ಹುದ್ದೆಗಳಲ್ಲಿದ್ದವರು ಪ್ರತಿಕ್ರಿಯಿಸಿದ್ದಿದ್ದನ್ನು ಕಡತದಲ್ಲಿ ಇಟ್ಟುಕೊಂಡಿದ್ದರೆ, ಅವೇ ಹೇಳಿಕೆಗಳ ಕೆಳಗೆ ಗೃಹ ಸಚಿವ ರಾಜನಾಥ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಎಂದು ಹೆಸರು ಬದಲಿಸಿಬಿಟ್ಟರೆ ಸಾಕಷ್ಟೆ.

ಇದು ನಕ್ಸಲರ ಹೇಡಿ ಕೃತ್ಯ ಎಂದು ಟ್ವೀಟಿಸುತ್ತಾರೆ ಪ್ರಧಾನಿ. ನಕ್ಸಲರೇನು ಪ್ರಧಾನಿ ಕಡೆಯಿಂದ ಶೌರ್ಯದ ಪ್ರಮಾಣಪತ್ರ ಪಡೆದುಕೊಳ್ಳುವುದಕ್ಕೆ ಬದುಕುತ್ತಿದ್ದಾರೇನು? ನಿಮಗೆ ಗೊತ್ತಿರಲಿ… 2010ರಿಂದೀಚೆಗೆ ಮಾವೋವಾದಿಗಳಿಂದ ಭದ್ರತಾ ಪಡೆಯವರು ಅತಿಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿರುವುದು 2017ರಲ್ಲೇ. ಇಷ್ಟಕ್ಕೂ 2017ನೇ ಇಸ್ವಿಯ ಅರ್ಧ ವರ್ಷವೂ ಜಾರಿಲ್ಲ. ಆಗಲೇ ಭದ್ರತಾ ಪಡೆಗಳಲ್ಲಿ ಇದುವರೆಗಿನ ನಕ್ಸಲ್ ಸಂಬಂಧಿ ಸಾವಿನ ಸಂಖ್ಯೆ 72. 2016ರಲ್ಲಿ 36 ಇತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದರ ಹಿಂದಿನ ವರ್ಷ 2013ರಲ್ಲಿ ಈ ಸಂಖ್ಯೆ 45 ಇತ್ತು.

ದೇಶರಕ್ಷಣೆ ಮಾಡುವುದಾದರೆ ಅದು ತನ್ನಿಂದ ಮಾತ್ರ ಸಾಧ್ಯ ಎಂಬಂತೆ ಬಿಂಬಿಸಿಕೊಳ್ಳುವ ಬಿಜೆಪಿ ಇದರ ಜವಾಬ್ದಾರಿ ಹೊರಲೇಬೇಕು. ಛತ್ತೀಸ್ಗಢದಲ್ಲಿರುವುದೂ ಅವರದ್ದೇ ಸರ್ಕಾರ, ಕೇಂದ್ರದಲ್ಲೂ ಇವರದ್ದೇ ರಾಜ್ಯಭಾರ. ಹೀಗಿರುವಾಗ ಎಲ್ಲರಂತೆ ಇವರೂ ಸಹ ‘ಇದೊಂದು ಹೇಯಕೃತ್ಯ’ ಅಂತ ಕರ್ಚೀಫು ಫಡಫಡಿಸಿಬಿಟ್ಟರೆ ಆಯಿತೇ?

ಪಾಕಿಸ್ತಾನದ ಸರಣಿಕೃತ್ಯಗಳಲ್ಲಿ ನಮ್ಮ ಯೋಧರು ಜೀವ ಕಳೆದುಕೊಳ್ಳುತ್ತಲೇ ಹೋಗುತ್ತಿದ್ದಾಗ, ಪ್ರತಿಯಾಗಿ ಒಂದು ಗುರಿ ನಿರ್ದಿಷ್ಟ ದಾಳಿ ಆಗದೇ ಹೋಗಿದ್ದರೆ ಮೋದಿ ಸರ್ಕಾರವನ್ನು ಅದರ ಬೆಂಬಲಿಗರು ಕ್ಷಮಿಸುತ್ತಿರಲಿಲ್ಲ. ಈಗಲೂ ಅದೇ ಸ್ಥಿತಿ ಇದೆ. ಈ ಕಟು ಟೀಕೆ ವ್ಯಕ್ತಪಡಿಸುತ್ತೇವೆ, ಇದೊಂದು ಹೇಡಿ ಕೃತ್ಯ ಇತ್ಯಾದಿ ಕ್ಲೀಷೆಗಳನ್ನು ಮತ್ತೆ ಮತ್ತೆ ಹೊಸೆಯದೇ ಇನ್ನು ಕೆಲದಿನಗಳಲ್ಲಿ ನಕ್ಸಲರ ದೊಡ್ಡ ಗುಂಪೊಂದರ ನಿರ್ನಾಮವನ್ನು ತೋರಿಸಲೇಬೇಕು.

ಸಿ ಆರ್ ಪಿಎಫ್ ಗೆ ಮುಖ್ಯಸ್ಥರ ನೇಮಕವೇ ಆಗಿಲ್ಲ ಎಂಬುದು ಈ ಸುಕ್ಮಾ ವಿದ್ಯಮಾನದ ಬೆನ್ನಲ್ಲೇ ಚರ್ಚೆಯಾಗುತ್ತಿರುವ ವಿಚಾರ. ಒಬ್ಬ ಡಿಜಿ ಮುಖ್ಯಸ್ಥ ಹುದ್ದೆಯಲ್ಲಿದ್ದ ಮಾತ್ರಕ್ಕೆ ಈ ದಾಳಿ ತಪ್ಪಿಬಿಡುತ್ತಿತ್ತೇ ಎಂಬ ವಿತಂಡವಾದ ಬೇಡ. ಯಾವಾಗ ಒಂದು ಸಂಸ್ಥೆಗೆ ಮುಖ್ಯಸ್ಥರೇ ಇರುವುದಿಲ್ಲವೋ ಅಲ್ಲಿ ಒಂದು ಸಂದೇಶ ರವಾನೆಯಾಗಿಬಿಡುತ್ತದೆ. ಅದೇನೆಂದರೆ, ನಿಮ್ಮ ಬಗ್ಗೆ ನಮಗೆ ಅಷ್ಟಾಗಿ ಗಮನವಿಲ್ಲ, ನೀವು ನಮ್ಮ ಆದ್ಯತೆಯಲ್ಲ ಅನ್ನೋದು. ಇದು ಅತ್ಯಂತ ಅಪಾಯಕಾರಿ. ಯೋಧರು ಎಷ್ಟೇ ಸಮರ್ಥರಾಗಿದ್ದರೂ ಹೀಗೊಂದು ಸಂದೇಶ ಹೋಗಿಬಿಡುವುದು ಅಷ್ಟರಮಟ್ಟಿಗೆ ಅವರ ಮನೋಸ್ಥೈರ್ಯವನ್ನು ಕುಗ್ಗಿಸುತ್ತದೆ.

ಇಂಥ ದಾಳಿಗಳಾದಾಗಲೆಲ್ಲ ಸಾಮಾಜಿಕ ಮಾಧ್ಯಮದಲ್ಲಿ ಬುದ್ಧಿಜೀವಿಗಳ ಮೌನವನ್ನು ಪ್ರಶ್ನಿಸಲಾಗುತ್ತದೆ, ಎಡಪಂಥೀಯ ನಿಲುವಿನವರನ್ನು ಪ್ರಶ್ನಿಸಲಾಗುತ್ತದೆ. ಇವೆಲ್ಲ ವ್ಯರ್ಥಾಲಾಪಗಳು. ನಕ್ಸಲರನ್ನು ನಿರ್ನಾಮ ಮಾಡಬೇಕಿರುವುದು ಸರ್ಕಾರದ ಹೊಣೆ. ಬಿಜೆಪಿ ಅಧಿಕಾರದಿಂದ ದೂರವಿರುವಷ್ಟು ಕಾಲ ಇಂಥ ಸಿದ್ಧಾಂತ ದೂಷಣೆ, ಬುದ್ಧಿಜೀವಿ ತರಾಟೆಗಳಿಗೆಲ್ಲ ಒಂದು ಅರ್ಥವಿತ್ತು. ಈಗಲೂ ಅದನ್ನೇ ಮಾಡಿಕೊಂಡಿರುವುದರಿಂದ ಏನುಪಯೋಗ?

ಬಸ್ತಾರ್ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಚುರುಕಾಗಿರುವುದು ನಕ್ಸಲರನ್ನು ಹತಾಶರನ್ನಾಗಿಸಿದೆ, ಏಕೆಂದರೆ ಜನ ಆಡಳಿತವನ್ನು ದ್ವೇಷಿಸುವುದನ್ನು ಬಿಟ್ಟು ಹಿಂಸೆಯ ಹೊರತಾದ ಮಹಾತ್ವಾಕಾಂಕ್ಷೆ ರೂಪಿಸಿಕೊಳ್ಳುತ್ತಿದ್ದಾರೆ ಎಂಬ ವ್ಯಾಖ್ಯಾನಗಳಲ್ಲಿ ಸುಳ್ಳಿಲ್ಲ. 25 ಯೋಧರ ಹತ್ಯೆಯಾಗಿದ್ದು ಸಹ ರಸ್ತೆ ಕಾಮಗಾರಿಗೆ ಗಸ್ತು ರಕ್ಷಣೆ ಒದಗಿಸುತ್ತಿದ್ದಾಗಲೇ.

ಆದರೆ ಇವ್ಯಾವುದೂ ಯೋಧರ ಬಲಿದಾನಕ್ಕೆ ಸಮರ್ಥನೆಗಳಾಗುವುದಿಲ್ಲ. ಪ್ರತಿ ಹಳ್ಳಿ ಅಭಿವೃದ್ಧಿಯಲ್ಲಿ ಮಿಂದೆದ್ದ ನಂತರವೂ ನಕ್ಸಲರು ತಮ್ಮ ಅಂಗಡಿ ಮುಚ್ಚುವುದಿಲ್ಲ ಎಂಬುದು ವಾಸ್ತವ ತಾನೇ? ಹೀಗಾಗಿಸಿ ಆರ್ ಪಿ ಎಫ್ ಗೆ ಬಲ ತುಂಬಿ ಈ ಮಾವೋವಾದಿಗಳನ್ನು ಹುಡುಕಿ ಸಂಹರಿಸುವುದಲ್ಲದೇ ಸರ್ಕಾರದೆದುರು ಬೇರೆ ಮಾರ್ಗ ಏನಿದೆ?

ಈಗ ಹೇಗೆ ಛತ್ತೀಸ್ಗಢದ ಬಸ್ತಾರ್ ಪ್ರಾಂತ್ಯದಿಂದ ಮೇಲಿಂದ ಮೇಲೆ ಯೋಧರು ಹುತಾತ್ಮರಾದ ಸುದ್ದಿ ಬರುತ್ತಿದೆಯೋ ಹಾಗೆಯೇ ಆರೇಳು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ನಿರಂತರವಾಗಿ ಪೊಲೀಸರು ನಕ್ಸಲ್ ದಾಳಿಗೆ ಪ್ರಾಣ ತೆರುತ್ತಿದ್ದರು. ಈಗ ಅಂಥ ಸುದ್ದಿಗಳು ಅಲ್ಲಿಂದ ಬರುವುದು ವಿರಳ. ಏಕೆಂದರೆ ಗ್ರೇಹೌಂಡ್ಸ್ ಪಡೆ ಕಟ್ಟಿ ಅತ್ಯಂತ ವ್ಯವಸ್ಥಿತವಾಗಿ ನಕ್ಸಲರನ್ನು ಬಗ್ಗುಬಡಿಯಲಾಯಿತು. ಆಗಲೂ ಎಡಪಂಥೀಯ ಕಾರ್ಯಕರ್ತರಿಂದ ಮಾನವ ಹಕ್ಕು ಬೊಬ್ಬೆಗಳು, ಕೋರ್ಟ್ ಕೇಸುಗಳೆಲ್ಲ ದಾಖಲಾದವು. ಆದರೇನಂತೆ ಪೊಲೀಸರು ಜೀವ ಕಳೆದುಕೊಳ್ಳುವುದು ನಿಂತಿತು. ಸರ್ಕಾರದ ಅಸ್ತಿತ್ವದ ಬಗ್ಗೆ ಮರುನಂಬಿಕೆ ಮೂಡಿತು.

ಅದು ನಕ್ಸಲಿಸಂ ಇರಬಹುದು, ಜಿಹಾದಿ ಭಯೋತ್ಪಾದನೆ ಇದ್ದಿರಬಹುದು. ಎಷ್ಟು ಮಂದಿ ಮೃತರಾದರು ಎನ್ನುವುದರ ಮೇಲಷ್ಟೆ ಪರಿಣಾಮವನ್ನು ಲೆಕ್ಕ ಹಾಕಲಿಕ್ಕಾಗುವುದಿಲ್ಲ. ಈ ಕೃತ್ಯಗಳ ಮೂಲಕ ಉಗ್ರರು ಜನಮಾನಸಕ್ಕೆ ಬಿತ್ತುತ್ತಿರುವ ಸಂದೇಶವೇನೆಂದರೆ- ನೀವು ಆರಿಸಿ ಕಳುಹಿಸಿರುವ ನಿಮ್ಮ ಸರ್ಕಾರವು ನಿಮ್ಮನ್ನು ರಕ್ಷಿಸುವುದಕ್ಕೆ ಶಕ್ತವಾಗಿಲ್ಲ ಅನ್ನೋದು! ಇದು ತುಂಬ ಮುಖ್ಯ. ಅಭಿವೃದ್ಧಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಇವೆಲ್ಲ ನಿರಂತರ ಆಗುತ್ತಿರಬೇಕಾದ ಸಂಗತಿಗಳೇ. ಆದರೆ ಅವಷ್ಟೇ ಸಾಕಾಗದು. ದೇಶದ ಭದ್ರತೆ ಮೇಲೆ ಪೆಟ್ಟು ಕೊಟ್ಟವರಿಗೆ ಅದೆಷ್ಟು ಪಟ್ಟು ತೀವ್ರವಾಗಿ ಸರ್ಕಾರ ಮರುಏಟು ಕೊಡುತ್ತದೆ ಎಂಬುದರ ಮೇಲಷ್ಟೇ ಜನರಿಗೆ ವಿಶ್ವಾಸ ವೃದ್ಧಿಯಾಗುತ್ತದೆ.

Leave a Reply