ಮದುವೆ, ಸಮಾರಂಭ, ಹೋಟೆಲ್ಲುಗಳಲ್ಲಿ ಆಹಾರ ನಷ್ಟ ಮಾಡಿದರೆ ಶಿಕ್ಷೆ!

ಡಿಜಿಟಲ್ ಕನ್ನಡ ಟೀಮ್:

ಮದುವೆ ಹಾಗೂ ಇತರೆ ಸಮಾರಂಭಗಳು ಮತ್ತು ಹೋಟೆಲ್ ಗಳಲ್ಲಿ ಉಳಿದ ಆಹಾರವನ್ನು ಎಸೆದು ಹಾಳು ಮಾಡಿದರೆ ದಂಡ ಹಾಗೂ ಶಿಕ್ಷೆ ವಿಧಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಇದರ ಜತೆಗೆ ಹೋಟೆಲ್ ಸೇರಿದಂತೆ ಇತರೆ ಕಡೆಗಳಲ್ಲಿ ಗ್ರಾಹಕರ ಮೇಲೆ ಸೇವಾ ಶುಲ್ಕ (ಸರ್ವೀಸ್ ಟ್ಯಾಕ್ಸ್) ವಿಧಿಸುವುದಕ್ಕೂ ನಿರ್ಬಂಧ ಹೇರಲಾಗಿದೆ.

ಈ ವಿಷಯಗಳಿಗೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಯು.ಟಿ.ಖಾದರ್ ಅವರ ಮಾತುಗಳು ಹೀಗಿವೆ… ‘ಊಟ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಸಿದ್ಧ ಆಹಾರ ಪದಾರ್ಥಗಳನ್ನು ಎಸೆಯುವ ಅಧಿಕಾರ ಯಾರಿಗೂ ಇಲ್ಲ. ಒಂದು ವೇಳೆ ಯಾರಾದರು ಸಿದ್ಧ ಆಹಾರಗಳನ್ನು ಎಸೆದರೆ ಅಂತಹವರ ವಿರುದ್ಧ ಕಠಿಣ ಶಿಕ್ಷೆ ಜತೆಗೆ ದಂಡ ವಿಧಿಸುವ ಕಾನೂನು ತರಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಪ್ರತಿ ಹೋಟೆಲ್ಲುಗಳಲ್ಲೂ ಉಳಿದ ಆಹಾರವನ್ನು ಒಂದು ಸರ್ಕಾರೇತ್ತರ ಸಂಸ್ಥೆಗೆ ನೀಡಬೇಕು. ಹಾಗೆಯೇ ಮದುವೆ ಮತ್ತಿತರ ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಸರ್ಕಾರೇತ್ತರ ಸಂಸ್ಥೆಗಳಿಗೆ ನೀಡಬೇಕು. ಈ ಸಮಾರಂಭ ನಡೆಸುವ ಹಾಲ್ ಗಳಿಗೆ ನಿರ್ದಿಷ್ಟ ಸಂಖ್ಯೆಯ ಸರ್ಕಾರೇತ್ತರ ಸಂಸ್ಥೆಗಳನ್ನು ನಿಗದಿಪಡಿಸಲಾಗುವುದು. ಪ್ರತಿ ಹೋಟೆಲ್ಲಿಗೆ ಒಂದರಂತೆ ಸರ್ಕಾರೇತ್ತರ ಸಂಸ್ಥೆಗಳನ್ನು ಜತೆ ಮಾಡಲಾಗುವುದು. ಈ ಸರ್ಕಾರೇತ್ತರ ಸಂಸ್ಥೆಗಳು ಈ ಆಹಾರವನ್ನು ಹಸಿದವರಿಗೆ ನೀಡುವ ಕೆಲಸ ಮಾಡುತ್ತವೆ. ಮುಂಬರುವ ಜೂನ್ ಅಥವಾ ಜುಲೈ ತಿಂಗಳ ವೇಳೆಗೆ ಈ ಕೆಲಸ ಪೂರ್ಣಗೊಳ್ಳಲಿದೆ.

ಇನ್ನು ರಾಜ್ಯದ ಯಾವುದೇ ಹೋಟೆಲ್ಲುಗಳಲ್ಲಿ ಗ್ರಾಹಕರಿಗೆ ಒದಗಿಸುವ ಸೇವೆಗೆ ಪ್ರತಿಯಾಗಿ ಸೇವಾ ತೆರಿಗೆ ವಿಧಿಸುವಂತಿಲ್ಲ. ಈ ಸೇವಾ ತೆರಿಗೆ ನೀಡದಿದ್ದರೆ ಪ್ರವೇಶವಿಲ್ಲ ಎನ್ನುವಂತಿಲ್ಲ. ಒಂದು ವೇಳೆ ಸೇವಾ ತೆರಿಗೆ ವಿಧಿಸಿದರೆ ಅಥವಾ ಗ್ರಾಹಕರಿಗೆ ಈ ವಿಷಯವಾಗಿ ತೊಂದರೆ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.’

ಸರ್ಕಾರದ ಈ ನಿರ್ಧಾರ ನಿಜಕ್ಕೂ ಅತ್ಯುತ್ತಮವಾಗಿದೆ. ಆದರೆ, ಕಳೆದ ತಿಂಗಳು ರಾಜ್ಯ ಸರ್ಕಾರ ಬಜೆಟ್ ಮಂಡನೆ ವೇಳೆ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರವನ್ನು 200ಕ್ಕೆ ಸೀಮಿತಗೊಳಿಸಿದ್ದರೂ, ಈ ನಿರ್ಧಾರ ಮಾತ್ರ ಜಾರಿಗೆ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ನಿರ್ಧಾರವು ಕಾರ್ಯರೂಪಕ್ಕೆ ಬರುತ್ತದೆಯೋ ಅಥವಾ ಕಾಗದಕ್ಕೆ ಸೀಮಿತವಾಗುತ್ತದೆಯೋ ಕಾದು ನೋಡಬೇಕು.

Leave a Reply