‘ಪಕ್ಷದಲ್ಲಿ ಬಂಡಾಯ ಧ್ವನಿ ಎತ್ತಿದರೆ ಶಿಸ್ತುಕ್ರಮ…’ ಇದು ಯಡಿಯೂರಪ್ಪನವರ ವಾರ್ನಿಂಗ್

ಡಿಜಿಟಲ್ ಕನ್ನಡ ಟೀಮ್:

ಪಕ್ಷ ಹಾಗೂ ನಾಯಕರ ವಿರುದ್ಧ ಬಂಡಾಯ ಧ್ವನಿ ಎತ್ತಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್.ಯಡಿಯೂರಪ್ಪ. ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಭಿನ್ನಮತೀಯರ ಸಭೆ ನಡೆಯುವ ಹಿನ್ನೆಲೆಯಲ್ಲಿ ಈ ಸಂದೇಶ ರವಾನೆ ಮಾಡಿದ್ದಾರೆ.

ಯಡಿಯೂರಪ್ಪ ವಿರುದ್ಧ ಬಂಡೆದ್ದಿರುವ ಭಿನ್ನಮತೀಯರು ನಾಳೆ ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಭೆ ಏರ್ಪಡಿಸಿದ್ದು, ಸಭೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹೋಗುವುದನ್ನು ತಡೆಗಟ್ಟಲು ಯಡಿಯೂರಪ್ಪ ಹೀಗೆ ನೇರ ಎಚ್ಚರಿಕೆ ನೀಡಿದ್ದಾರೆ. ಈಶ್ವರಪ್ಪ ಅವರು ನಡೆಸುತ್ತಿರುವ ಈ ಸಭೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಇಂದು ಮುಂಜಾನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಂಪರ್ಕಿಸಿ, ಪೂರ್ಣ ಮಾಹಿತಿ ನೀಡಿದ್ದಾರೆ. ಅಮಿತ್ ಷಾ ಅವರ ಜತೆ ದೂರವಾಣಿಯ ಮುಖಾಂತರ ಚರ್ಚೆ ನಡೆಸಿದ ನಂತರ ಅತೃಪ್ತರಿಗೆ ಈ ಕುರಿತು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ಓಬಿಸಿ ಮೋರ್ಚಾ ಅಧ್ಯಕ್ಷ ಹಾಗೂ ಯಡಿಯೂರಪ್ಪ ಅವರ ಪರಮಾಪ್ತ ಬಿ.ಜೆ.ಪುಟ್ಟಸ್ವಾಮಿ ಸುದ್ದಿಗಾರರ ಜತೆ ಮಾತನಾಡಿ, ‘ಅತೃಪ್ತರ ಸಭೆ ನಡೆಯುತ್ತಿರುವುದು ದುರದೃಷ್ಟಕರ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಆದರೂ ಕೂಡಾ ಸಮಸ್ಯೆ ಬೆಳೆಸಲು ಹಲವರು ತಯಾರಾದಂತಿದೆ. ಯಾವ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ. ಹಿರಿಯ ನಾಯಕ ಈಶ್ವರಪ್ಪ ಅವರು ಯಾವ ಕಾರಣಕ್ಕೂ ಈ ಸಭೆಗೆ ಹೋಗಬಾರದು. ಹೋದರೆ ಸುಮ್ಮನಿರುವುದಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಹಲವರನ್ನು ಅಮಾನತು ಮಾಡಿ ಹೊರಡಿಸಿದ್ದ ಆದೇಶವನ್ನೂ ಹಿಂಪಡೆಯಲಾಗಿದೆ. ಆದರೂ ಅತೃಪ್ತರು ಸಭೆ ನಡೆಸುತ್ತಿರಲು ಕಾರಣ ಏನು ಎಂಬುದು ಗೊತ್ತಿಲ್ಲ. ಈ ಅತೃಪ್ತರ ಗುಂಪಿನಲ್ಲಿ ಈಶ್ವರಪ್ಪ ಅವರು ಇದ್ದಾರೆ. ಅವರು ನಮ್ಮ ಪಕ್ಷದ ಹಿರಿಯರು. ಅವರು ಯಾವ ಕಾರಣಕ್ಕೂ ಗುರುವಾರದ ಸಭೆಗೆ ಹೋಗಬಾರದು. ಅಷ್ಟೇ ಅಲ್ಲದೆ ಅತೃಪ್ತರ ಸಭೆ ಕೂಡಾ ನಡೆಯಕೂಡದು. ಒಂದು ವೇಳೆ ನಡೆದರೆ ಅದು ಪಕ್ಷದ ಶಿಸ್ತನ್ನು ಉಲ್ಲಂಘಿಸಿದಂತೆ’ ಎಂದರು.

Leave a Reply