ದೆಹಲಿ ಪೊಲೀಸರಿಂದ ದಿನಕರನ್ ಅರೆಸ್ಟ್, ಪಕ್ಷದ ಕಚೇರಿಯಲ್ಲಿ ಶಶಿಕಲಾ ಪೋಸ್ಟರ್ ಹರಿದ ಕಾರ್ಯಕರ್ತರು… ಇದು ಮನ್ನಾರ್ ಗುಡಿ ಮಾಫಿಯಾದ ಅಂತ್ಯವೇ?

ಡಿಜಿಟಲ್ ಕನ್ನಡ ಟೀಮ್:

ಆರ್.ಕೆ ನಗರ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಎರಡು ಎಲೆ ಚಿಹ್ನೆಯನ್ನು ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಮುಂದಾದ ಪ್ರಕರಣದಲ್ಲಿ ಶಶಿಕಲಾ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಬಂಧಿಸಲಾಗಿದೆ. ಕಳೆದ ಶನಿವಾರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ನಂತರ ಸುದೀರ್ಘ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ ದೆಹಲಿ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿ ದಿನಕರನ್ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ದಿನಕರನ್ ಜತೆಗೆ ಅವರ ಆಪ್ತ ಮಲ್ಲಿಕಾರ್ಜುನ್ ಎಂಬಾತನನ್ನೂ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ನಿನ್ನೆ ರಾತ್ರಿಯೆ ರಾಮ್ ಮನೋಹರ್ ಲೊಹಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಇಬ್ಬರನ್ನು ಸರ್ಕಾರಿ ಅಧಿಕಾರಿಗೆ ಲಂಚ ನೀಡಿರುವ ಆರೋಪದ ಮೇಲೆ ಐಪಿಸಿ ಸೆಕ್ಷನ್ 170 ಹಾಗೂ ಸೆಕ್ಷನ್ 120 ಬಿ ಅಪರಾಧ ಪಿತೂರಿಯ ಪ್ರಕರಣಗಳನ್ನು ದಾಖಲಿಸಲಾಗಿದೆ.

ಶನಿವಾರದಿಂದ ದೆಹಲಿ ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದ ದಿನಕರನ್, ಇಷ್ಟು ದಿನಗಳ ಕಾಲ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಸುಕೇಶ್ ಚಂದ್ರಶೇಖರ್ ಯಾರೆಂದು ಗೊತ್ತೇ ಇಲ್ಲ ಎಂದು ವಾದ ಮಂಡಿಸಿದ್ದು, ನಿನ್ನೆಯಷ್ಟೇ ತಾವು ಸುಕೇಶ್ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದ ಬಗ್ಗೆ ಒಪ್ಪಿಕೊಂಡಿದ್ದರು. ಆದರೆ ಸುಕೇಶ್ ಅವರಿಗೆ ಯಾವುದೇ ಹಣ ನೀಡಿಲ್ಲ ಎಂದು ದಿನಕರನ್ ಹೇಳಿದ್ದಾರೆ.

ಇದೇ ವೇಳೆ ದೆಹಲಿ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೊಚ್ಚಿಯಲ್ಲಿರುವ ಸುಕೇಶ್ ಚಂದ್ರಶೇಖರ್ ಅವರ ಮನೆಯನ್ನು ಜಾಲಾಡಿದ್ದು, ದಿನಕರನ್ ಹಾಗೂ ಸುಕೇಶ್ ಅವರ ದೂರವಾಣಿ ಕರೆ, ಮೇಸೆಜ್ ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಅತ್ತ ದಿನಕರನ್ ಬಂಧನವಾಗುತ್ತಿದ್ದಂತೆ ಬುಧವಾರ ಬೆಳಗ್ಗೆ ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಕಚೇರಿ ಮುಂದೆ ಇದ್ದ ಶಶಿಕಲಾ ಅವರ ಬ್ಯಾನರ್ ಗಳನ್ನು ಕಿತ್ತು ಹಾಕಲಾಗಿದೆ. ದಿನಕರನ್ ಬಂಧನದ ಬೆನ್ನಲ್ಲೇ ಪಕ್ಷದ ಕಾರ್ಯಕರ್ತರು ಶಶಿಕಲಾ ಹಾಗೂ ದಿನಕರನ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಕಟೌಟ್ ಗಳನ್ನು ಕಿತ್ತು ಎಸೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪನ್ನೀರ್ ಸೆಲ್ವಂ, ‘ಇದೊಂದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಪಕ್ಷದ ಕಾರ್ಯಕರ್ತರು ಈಗಲಾದರೂ ಶಶಿಕಲಾ ಅವರ ವಿರುದ್ಧ ನಿಂತಿರುವುದು ಪಕ್ಷದ ದೃಷ್ಟಿಯಿಂದ ಒಳ್ಳೆಯದು’ ಎಂದಿದ್ದಾರೆ. ಇತ್ತ ದೆಹಲಿ ಪೊಲೀಸರು ದಿನಕರನ್ ಅವರನ್ನು ಬಂಧಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ. ‘ದೆಹಲಿ ಪೊಲೀಸರ ಈ ಕೆಲಸ ಪ್ರಶಂಸನೀಯ. ತಮಿಳುನಾಡಿನ ರಾಜಕಾರಣವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ’ ಎಂದು ಬಣ್ಣಿಸಿದೆ.

ಈ ಎಲ್ಲ ಬೆಳವಣಿಗೆಗಳು ತಮಿಳುನಾಡಿನ ರಾಜಕೀಯದಲ್ಲಿ ಮನ್ನಾರ್ ಗುಡಿ ಮಾಫಿಯಾಕ್ಕೆ ತೆರೆ ಎಳೆಯುವುದರ ಆರಂಭವೇ ಎಂಬ ಭಾವನೆ ಮೂಡುತ್ತಿದೆ.

Leave a Reply