ಬ್ಯಾಂಕುಗಳ ದೈನಂದಿನ ವ್ಯವಹಾರ ಕನ್ನಡದಲ್ಲೇ ಆಗಬೇಕು… ರಾಜ್ಯದಲ್ಲಿರುವ ರಾಷ್ಟ್ರೀಕೃತ ಬ್ಯಾಂಕಿನ ಶಾಖೆಗಳಿಗೆ ಕರವೇ ಎಚ್ಚರ

ಡಿಜಿಟಲ್ ಕನ್ನಡ ಟೀಮ್:

‘ರಾಜ್ಯದಲ್ಲಿರುವ ರಾಷ್ಷ್ಟ್ರೀಕೃತ ಬ್ಯಾಂಕುಗಳ ಬಹುತೇಕ ಶಾಖೆಗಳಲ್ಲಿ ದೈನಂದಿನ ವ್ಯವಹಾರದ ವೇಳೆ ಕನ್ನಡವನ್ನು ನಿರ್ಲಕ್ಷಿಸಲಾಗುತ್ತಿದ್ದು, ಇದು ಕೂಡಲೇ ನಿಲ್ಲಬೇಕು. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿ ಅನುಸರಿಸಿ ಇಂಗ್ಲಿಷ್, ಹಿಂದಿ ಜತೆ ಕನ್ನಡವು ದೈನಂದಿನ ವ್ಯವಹಾರಗಳಲ್ಲಿ ಬಳಕೆಯಾಗಬೇಕು…’ ಇದು ಕರ್ನಾಟಕ ರಕ್ಷಣಾ ವೇದಿಕೆ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಿಗೆ ನೀಡುತ್ತಿರುವ ಎಚ್ಚರಿಕೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರವೇ ಅಧ್ಯಕ್ಷ ನಾರಾಯಣ ಗೌಡರು ಹೇಳಿರುವುದಿಷ್ಟು…

‘ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು ಕನ್ನಡ ಇಲ್ಲಿನ ಆಡಳಿತ ಭಾಷೆ ಎಂಬುದನ್ನು ಮರೆತು ವ್ಯವಹರಿಸುತ್ತಿವೆ. ಇತ್ತೀಚಿಗೆ ಎಲ್ಲ ಬ್ಯಾಂಕುಗಳು ಹಿಂದಿ ಭಾಷೆಯನ್ನು ಅನಗತ್ಯವಾಗಿ ಮೆರೆಸುತ್ತ, ಕನ್ನಡವನ್ನು ಕಡೆಗಣಿಸುತ್ತಿವೆ. ಬ್ಯಾಂಕ್ ಚಲನ್ ಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಉಳಿದುಕೊಂಡಿವೆ. ಕೇಂದ್ರ ಸರ್ಕಾರದ ತ್ರಿ ಭಾಷಾ ಸೂತ್ರವನ್ನು ಪಾಲಿಸುವುದಾಗಿ ಹೇಳುವ ಬ್ಯಾಂಕುಗಳು ಹಿಂದಿಯನ್ನೇ ಪ್ರಧಾನವಾಗಿ ಬಳಸುತ್ತಾ, ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿವೆ.

ಕೆಲವು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆದ ಚೆಕ್ ಗಳನ್ನು ಸ್ವೀಕರಿಸುತ್ತಿಲ್ಲ. ಕನ್ನಡದಲ್ಲಿ ಚಲನ್ ತುಂಬಿದರೆ ಅದನ್ನು ಸ್ವೀಕರಿಸುತ್ತಿಲ್ಲ. ಕೆಲವು ಬ್ಯಾಂಕುಗಳಲ್ಲಿ ಉತ್ತರ ಭಾರತೀಯ ಸಿಬ್ಬಂದಿಯೇ ತುಂಬಿಕೊಂಡಿದ್ದು, ಅವರು ಹಿಂದಿಯಲ್ಲೇ ಕನ್ನಡಿಗರೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ. ಹಿಂದಿ ಬಾರದ ಗ್ರಾಹಕರು ಇದರಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೆಲ್ಲದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಆಗಾಗ ಧ್ವನಿ ಎತ್ತುತ್ತಲೇ ಬಂದಿದೆ. ಹಿಂದಿ ಹೇರಿಕೆಯನ್ನು ತಡೆಯಲು ಮನವಿ ಮಾಡುತ್ತಲೇ ಬಂದಿದೆ. ಆದರೆ ಇತ್ತೀಚಿಗೆ ಇದೆಲ್ಲವೂ ಹೆಚ್ಚಾಗುತ್ತಲೇ ಇದೆ. ಅನಿವಾರ್ಯವಾಗಿ ಈಗ ರಾಜ್ಯದ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರಿಗೂ ಈ ನೋಟೀಸನ್ನು ನೀಡುತ್ತಿದ್ದೇವೆ.’

ಇದೇ ವೇಳೆ ಕರವೇ ಕೆಲವು ಹಕ್ಕುಗಳು ಜಾರಿಯಾಗಬೇಕು ಎಂದು ಆಗ್ರಹಿಸಿದ್ದು, ಆ ಹಕ್ಕುಗಳು ಹೀಗಿವೆ…

  • ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕುಗಳು ಹಿಂದಿಯನ್ನು ಬಳಸಬಾರದು. ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆಯಲ್ಲಿ ವ್ಯವಹರಿಸಬೇಕು. ಆಡಳಿತ ಭಾಷೆ ಮತ್ತು ನಾಡ ಭಾಷೆಯಾಗಿ ಕನ್ನಡವಿರುತ್ತದೆ, ಕನ್ನಡ ಬಾರದವರಿಗೆ ಇಂಗ್ಲಿಷ್ ಇರುತ್ತದೆ. ಮೂರನೇ ಭಾಷೆಯ ಅವಶ್ಯಕತೆ ನಮಗೆ ಇರುವುದಿಲ್ಲ.
  • ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳ ಸಿಬ್ಬಂದಿ ಕರ್ನಾಟಕದವರೇ ಆಗಿರಬೇಕು. ಹೊರ ರಾಜ್ಯದ, ಕನ್ನಡ ಬಾರದ ಸಿಬ್ಬಂದಿ ನಿಮ್ಮಲ್ಲಿ ಇದ್ದರೆ ಅವರನ್ನು ಕೂಡಲೇ ತವರು ರಾಜ್ಯಗಳಿಗೆ ವರ್ಗಾಯಿಸಬೇಕು. ಮುಂದೆಯೂ ಸಹ ಕನ್ನಡಿಗರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಸಹ ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯ ಶಿಫಾರಸಿನಂತೆ ಶೇ. 100ರಷ್ಟು ಕನ್ನಡಿಗರಿಗೇ ನೀಡಬೇಕು.
  • ಬ್ಯಾಂಕುಗಳ ವ್ಯವಹಾರ ಇನ್ನುಮುಂದೆ ಕನ್ನಡದಲ್ಲಿ ಮಾತ್ರ ನಡೆಯಬೇಕು. ಯಾರೇ ಸಿಬ್ಬಂದಿಯೂ ಹಿಂದಿಯಲ್ಲಿ ಗ್ರಾಹಕರೊಂದಿಗೆ ಮಾತನಾಡಬಾರದು. ಒಂದು ವೇಳೆ ಗ್ರಾಹಕರಿಗೆ ಕನ್ನಡ ಬಾರದೇ ಇದ್ದ ಪಕ್ಷದಲ್ಲಿ ಮಾತ್ರ ಅವರೊಂದಿಗೆ ಇಂಗ್ಲಿಷ್ ನಲ್ಲಿ ವ್ಯವಹರಿಸಬೇಕು.
  • ಚಲನ್ ಗಳು, ಚೆಕ್ ಪುಸ್ತಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಣವಾಗಬೇಕು. ಕನ್ನಡದಲ್ಲಿ ತುಂಬಿದ ಅರ್ಜಿಗಳು, ಚಲನ್, ಚೆಕ್ ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸಕೂಡದು. ಗ್ರಾಹಕರಿಗೆ ನೀಡುವ ದಾಖಲೆ, ಮಾಹಿತಿ ಎಲ್ಲವೂ ಕನ್ನಡ ಮತ್ತು ಇಂಗ್ಲಿಷ್ ನಲ್ಲಿರಬೇಕು. ಹಿಂದಿಯಲ್ಲಿ ಯಾವುದೇ ದಾಖಲೆಗಳನ್ನು ನೀಡಕೂಡದು.
  • ರಾಷ್ಟ್ರೀಕೃತ ಬ್ಯಾಂಕುಗಳು ಸಂಪೂರ್ಣ ಕನ್ನಡ ಮಯವಾಗಬೇಕು ಮತ್ತು ಎಲ್ಲ ನಾಮಫಲಕಗಳು, ಸೂಚನಾ ಫಲಕಗಳು ಕನ್ನಡದಲ್ಲೇ ಇರಬೇಕು. ಕನ್ನಡದ ವಾತಾವರಣವನ್ನು ನಿರ್ಮಿಸಬೇಕು.

Leave a Reply