ಮದುವೆಯಾಗಿ 10 ತಿಂಗಳ ನಂತರ ಕನ್ನಡಿಗ ಪತಿಯನ್ನು ಸೇರಿದ ಪಾಕ್ ಪತ್ನಿ! ಇದೂ ಸುಷ್ಮಾಗಿರಿ

ಡಿಜಿಟಲ್ ಕನ್ನಡ ಟೀಮ್:

ಹುಬ್ಬಳ್ಳಿಯ ನಿವಾಸಿ ಡೇನಿಯಲ್ ದೇವನೂರ್ ಹಾಗೂ ಪಾಕಿಸ್ತಾನ ಮೂಲದ ಸಿಲ್ವಿಯಾ ನೊರೀನ್ ಎಂಬಾಕೆ ಕಳೆದ ವರ್ಷ ಜೂನ್ 26 ರಂದು ಲಾಹೋರ್ ನ ಚರ್ಚ್ ಒಂದರಲ್ಲಿ ವಿವಾಹವಾಗಿದ್ದರು. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಡೇನಿಯಲ್ ಪತ್ನಿಯನ್ನು ತನ್ನ ಮನೆಗೆ ಕರೆದುಕೊಂಡು ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸುಮಾರು 10 ತಿಂಗಳ ಕಾಲ ಸಿಲ್ವಿಯಾ ಪತಿಯ ಮನೆ ಸೇರಲು ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ದಂಪತಿಗಳು ಮತ್ತೆ ಭಾರತಕ್ಕೆ ಬರಲು ನೆರವಾಗಿದ್ದು, ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್.

ಸಿಲ್ವಿಯಾ ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದರೂ ಡೇನಿಯಲ್ ಗೆ ದೂರದ ಸಂಬಂಧಿ. ಭಾರತ ವಿಭಜನೆ ಸಂದರ್ಭದಲ್ಲಿ ಸಿಲ್ವಿಯಾ ಕುಟುಂಬಸ್ಥರು ಪಾಕಿಸ್ತಾನಕ್ಕೆ ತೆರಳಿದ್ದರು. ಡೇನಿಯಲ್ ಕುಟುಂಬ ಈಗಲೂ ಪಾಕಿಸ್ತಾನದಲ್ಲಿ ತಮ್ಮ ಅನೇಕ ನೆಂಟರನ್ನು ಹೊಂದಿದೆ.

ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸಿಲ್ವಿಯಾ ಅವರಿಗೆ ಭಾರತಕ್ಕೆ ತೆರಳಲು ಅಗತ್ಯ ದಾಖಲೆಗಳನ್ನು ನೀಡಲು ಪಾಕಿಸ್ತಾನದ ಅಧಿಕಾರಿಗಳು ಮುಂದಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪತ್ನಿಯನ್ನು ತನ್ನ ಮನೆಗೆ ಕರೆತರಲಾಗದೇ ಅಸಹಾಯಕನಾಗಿದ್ದ ಡೇನಿಯಲ್, ತನ್ನ ಮದುವೆ ಚಿತ್ರಗಳು ಹಾಗೂ ಮದುವೆ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವನ್ನು ಕೇಳಿದ್ದರು. ‘ಮಾನ್ಯರೆ, ನನ್ನ ಪಾಕಿಸ್ತಾನ ಪತ್ನಿ ಭಾರತಕ್ಕೆ ಬರಲು ಪಾಕಿಸ್ತಾನದಲ್ಲಿ ಅಗತ್ಯ ದಾಖಲೆಗಳನ್ನು ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವೆ ನಮಗೆ ಸಹಾಯ ಮಾಡಬೇಕು. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಮನವಿ ಮಾಡಿಕೊಂಡಿದ್ದರು.

ಈ ಹಂತದಲ್ಲಿ ಡೇನಿಯಲ್ ಸಮಸ್ಯೆಯನ್ನು ಕಂಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ, ಸುಷ್ಮಾ ಸ್ವರಾಜ್ ಅವರಿಗೆ ಈ ಪ್ರಕರಣವನ್ನು ಗಮನಕ್ಕೆ ತಂದರು. ನಂತರ ವಿದೇಶಾಂಗ ಸಚಿವಾಲಯ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಈ ದಂಪತಿಗಳಿಗೆ ನೆರವಾಗಿದ್ದು, ಈ ಇಬ್ಬರೂ ಭಾರತಕ್ಕೆ ಮರಳುವಂತೆ ಮಾಡಿದ್ದಾರೆ.

ಈ ಇಬ್ಬರು ನಾಯಕರ ನೆರವಿಗೆ ಧನ್ಯವಾದ ಅರ್ಪಿಸಿರುವ ಡೇನಿಯಲ್ ಹೇಳಿರುವುದಿಷ್ಟು… ‘ಭಾರತ ಸರ್ಕಾರಕ್ಕೆ ನಾನು ಆಭಾರಿಯಾಗಿರುತ್ತೇನೆ. ಅದರಲ್ಲೂ ಪ್ರಹ್ಲಾದ್ ಜೋಷಿ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸದ್ಯ ನಾನು ನವದೆಹಲಿಯಲ್ಲಿದ್ದು, ಈ ಕ್ಷಣವನ್ನು ಸಂತೋಷದಿಂದ ಸಂಭ್ರಮಿಸುತ್ತಿದ್ದೇನೆ.’

Leave a Reply