ದೆಹಲಿ ಮಹಾನಗರ ಪಾಲಿಕೆಯಲ್ಲಿ ಈಗ ಕಮಲದ್ದೇ ಕಂಪು! ಹೀನಾಯ ಸೋಲಿಗೆ ಮತಯಂತ್ರವನ್ನು ದೂಷಿಸುತ್ತಿದೆ ಎಎಪಿ

ಡಿಜಿಟಲ್ ಕನ್ನಡ ಟೀಮ್:

ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿನ ಅಭೂತಪೂರ್ವ ಯಶಸನ್ನು ಬಿಜೆಪಿ ದೆಹಲಿ ಪಾಲಿಕೆ ಚುನಾವಣೆಯಲ್ಲೂ ಮುಂದುವರಿಸಿದೆ. ಮೊನ್ನೆ ಭಾನುವಾರ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಜಯ ಸಾಧಿಸಿರುವ ಬಿಜೆಪಿ, ಆಮ್ ಆದ್ಮಿ ಪಕ್ಷವನ್ನು ಮೂಲೆಗುಂಪು ಮಾಡಿ ಬೀಗುತ್ತಿದೆ. ಇತ್ತ ಈ ಚುನಾವಣೆಯಲ್ಲಿನ ಹೀನಾಮಾನ ಸೋಲನ್ನು ಎಎಪಿ ನಾಯಕರು ಮಂತಯಂತ್ರಗಳ ಮೇಲೆ ಹಾಕುವಲ್ಲಿ ನಿರತರಾಗಿದ್ದಾರೆ.

270 ವಾರ್ಡ್ ಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 183 ವಾರ್ಡುಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿದೆ. ದೆಹಲಿಯಲ್ಲಿ ಸರ್ಕಾರ ನಡೆಸುತ್ತಿರುವ ಎಎಪಿ ಕೇವಲ 39 ವಾರ್ಡುಗಳನ್ನು ಮಾತ್ರ ಗೆದ್ದುಕೊಂಡಿದೆ. ಉಳಿದಂತೆ ಕಾಂಗ್ರೆಸ್ ಪಕ್ಷ 35 ಸ್ಥಾನಗಳಲ್ಲಿ ಗೆದ್ದು ದ್ವಿತೀಯ ಸ್ಥಾನಕ್ಕಾಗಿ ಎಎಪಿಗೆ ಪೈಪೋಟಿ ನೀಡಿದರೆ, ಇತರೆ ಅಭ್ಯರ್ಥಿಗಳು 13 ವಾರ್ಡುಗಳನ್ನು ಗೆದ್ದುಕೊಂಡಿದ್ದಾರೆ. ಮೂರು ವಲಯಗಳ ಪಾಲಿಕೆಗಳಲ್ಲಿನ ಫಲಿತಾಂಶ ನೋಡುವುದಾದರೆ,  ಉತ್ತರ ದೆಹಲಿಯಲ್ಲಿ (103/104) ಬಿಜೆಪಿ 65, ಎಎಪಿ 19, ಕಾಂಗ್ರೆಸ್ 17, ಇತರೆ 2ರಲ್ಲಿ ಜಯ ಸಾಧಿಸಿವೆ. ದಕ್ಷಿಣ ದೆಹಲಿಯಲ್ಲಿ (103/104) ಬಿಜೆಪಿ 70, ಎಎಪಿ 16, ಕಾಂಗ್ರೆಸ್ 10, ಇತರೆ 7ರಲ್ಲಿ ಜಯ ಸಾಧಿಸಿವೆ. ಪೂರ್ವ ದೆಹಲಿಯಲ್ಲಿ (63/64) ಬಿಜೆಪಿ 46, ಎಎಪಿ 10, ಕಾಂಗ್ರೆಸ್ 02, ಇತರೆ 05ರಲ್ಲಿ ಜಯ ಸಾಧಿಸಿವೆ.

ಪಂಚರಾಜ್ಯ ಚುನಾವಣೆಗಳ ಪೈಕಿ ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಹಾಗೂ ಬಿಜೆಪಿಗೆ ತೊಡೆ ತಟ್ಟಿ ನಿಲ್ಲುವ ನಿರೀಕ್ಷೆ ಹುಸಿಯಾಗಿತ್ತು. ಇನ್ನು ದೆಹಲಿಯಲ್ಲಿ ಅಧಿಕಾರ ಹೊಂದಿರುವ ಎಎಪಿ ಪಾಲಿಕೆ ಚುನಾವಣೆಯಲ್ಲಾದರೂ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಯೂ ಹುಸಿಯಾಗಿದ್ದು, ಎಎಪಿ ಮತ್ತಷ್ಟು ನೆಲಕಚ್ಚಿದೆ.

2015ರ ವಿಧಾನಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಗೆ ಸೆಡ್ಡು ಹೊಡೆದು 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಈ ರೀತಿಯಾಗಿ ಪಾತಾಳ ತಲುಪಿರುವುದು, ಎರಡೇ ವರ್ಷದಲ್ಲಿ ಎಎಪಿ ಮತದಾರರ ವಿಶ್ವಾಸವನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿ ಎಂದು ಬಣ್ಣಿಸಲಾಗುತ್ತಿದೆ.

ಈ ಎರಡು ವರ್ಷಗಳ ಅವಧಿಯಲ್ಲಿ, ದೆಹಲಿಯನ್ನು ಕಾಡಿದ್ದ ವಾಯು ಮಾಲಿನ್ಯ, ಡೆಂಗ್ಯು ಹಾಗೂ ಇತರೆ ಪ್ರಮುಖ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅರವಿಂದ ಕೇಜ್ರಿವಾಲರ ಸರ್ಕಾರ ವಿಫಲವಾಗಿತ್ತು. ತಮ್ಮ ಸಚಿವರುಗಳು ಭ್ರಷ್ಟಾಚಾರ ಪ್ರಕರಣಗಳು, ಕೇಂದ್ರ ಸರ್ಕಾರ ವಿರುದ್ಧದ ತಿಕ್ಕಾಟದಂತಹ ವಿಷಯಗಳಿಗೆ ಹೆಚ್ಚು ಸುದ್ದಿಯಾಗಿದ್ದ ಆಪ್ ಸರ್ಕಾರ ಜನಪರ ಯೋಜನೆಗಳ ಮೂಲಕ ಸದ್ದು ಮಾಡಲೇ ಇಲ್ಲ. ಇವುಗಳ ಜತೆಗೆ ಚುನಾವಣೆಗೂ ಮುನ್ನ, ‘ನೀವು ಬಿಜೆಪಿಗೆ ಅಧಿಕಾರ ನೀಡಿದರೆ, ಡೆಂಗ್ಯು ಹಾಗೂ ಇತರೆ ಆರೋಗ್ಯ ಸಮಸ್ಯೆ ಎದುರಾದರೆ ನಾವು ಜವಾಬ್ದಾರರಲ್ಲ’ ಎಂಬ ಬೇಜವಾಬ್ದಾರಿ ಹೇಳಿಕೆ ಅರವಿಂದ ಕೇಜ್ರಿವಾಲ್ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ.

ಅರುಣ್ ಜೇಟ್ಲಿ ವಿರುದ್ಧದ ವೈಯಕ್ತಿಕವಾಗಿ ಕಾನೂನು ಹೋರಾಟಕ್ಕೆ ಸರ್ಕಾರದ ಬೊಕ್ಕಸದಿಂದ ಹಣ ಬಳಕೆ ಮಾಡಿರುವಂತಹ ಪ್ರಕರಣಗಳು ಜನರು ಅರವಿಂದ್ ಕೇಜ್ರಿವಾಲ್ ಅವರ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿನ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುವುದನ್ನು ಬಿಟ್ಟು, ತಮ್ಮ ಸೋಲಿಗೆ ಮತಯಂತ್ರಗಳನ್ನು ದೂಷಿಸಿದ್ದ ಕೇಜ್ರಿವಾಲ್ ತಾವು ಎಲ್ಲಿ ತಪ್ಪು ಹೆಜ್ಜೆ ಇಡುತ್ತಿದ್ದೇವೆ ಎಂಬುದರ ಬಗ್ಗೆ ಪರಾಮರ್ಶೆ ನಡೆಸಲೇ ಇಲ್ಲ. ಪರಿಣಾಮ ಎಎಪಿ ದೆಹಲಿ ಪಾಲಿಕೆ ಚುನಾವಣೆಯಲ್ಲೂ ಈ ಮುಖಭಂಗ ಅನುಭವಿಸುವಂತಾಗಿದೆ.

ನಿರೀಕ್ಷೆಯಂತೆ ಈ ಚುನಾವಣೆಯ ಸೋಲಿಗೂ ಎಎಪಿ ನಾಯಕರು ಮತಯಂತ್ರಗಳನ್ನು ದೂಷಿಸುವುದರಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ಆಮ್ ಆದ್ಮಿ ಪಕ್ಷದ ಈ ವೈಫಲ್ಯಗಳನ್ನು ಬಿಜೆಪಿ ಬಳಸಿಕೊಂಡು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Leave a Reply