ಅಂತರ್ಜಾಲ ಬೆಳವಣಿಗೆ ಇನ್ನೇನಿದ್ದರು ಪ್ರಾದೇಶಿಕ ಭಾಷೆಗಳಲ್ಲಿ- ಇದು ಗೂಗಲ್ ಸಾರುತ್ತಿರುವ ಟ್ರೆಂಡ್

ಡಿಜಿಟಲ್ ಕನ್ನಡ ಟೀಮ್:

ಭವಿಷ್ಯದಲ್ಲಿ ಪ್ರಾದೇಶಿಕ ಭಾಷೆಗಳ ಪ್ರಾಬಲ್ಯ ಹಾಗೂ ಪ್ರಾದೇಶಿಕ ಭಾಷೆ ಬಳಕೆದಾರರನ್ನು ಗಂಭೀರವಾಗಿ ಪರಿಗಣಿಸಿರುವ ಗೂಗಲ್, ಇಂಗ್ಲಿಷ್ ಹೊರತಾಗಿ ಇತರೆ ಭಾಷೆಗಳಲ್ಲಿ ಮಾಹಿತಿ ನೀಡುವ ಬಗ್ಗೆ ಗಮನ ಹರಿಸುತ್ತಿದೆ. ಸದ್ಯ ಭಾರತದಲ್ಲಿ ಅಂತರ್ಜಾಲ ಸಂಪರ್ಕ ವಿಸ್ತರಣೆ, ಡಾಟಾ ಬೆಲೆ ಇಳಿಕೆ ಹಾಗೂ ಬಳಕೆದಾರರ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೂಗಲ್ ಇಂತಹ ಮಹತ್ವ ನಿರ್ಧಾರ ತೆಗೆದುಕೊಂಡಿದೆ.

ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್, ಕೈಗೆಟುಕುವ ದರದಲ್ಲಿ ಇಂಟರ್ನೆಟ್ ಸೌಲಭ್ಯ ಸಿಗುವುದರಿಂದ ಅಂತರ್ಜಾಲ ಬಳಕೆದಾರರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿಗುವ ಅಂತರ್ಜಾಲ ಬಳಕೆದಾರರಲ್ಲಿ ಶೇ.90 ರಷ್ಟು ಜನರು ಇಂಗ್ಲಿಷ್ ಹೊರತಾದ ಭಾಷಿಗರಾಗಿರುತ್ತಾರೆ. ಸ್ವತಃ ಗೂಗಲ್ ನಡೆಸಿರುವ ಸಮೀಕ್ಷೆಯಲ್ಲಿ ಈ ಮಹತ್ವದ ಅಂಶ ಕಂಡು ಬಂದಿದ್ದು, 2021ರ ವೇಳೆಗೆ ಬಳಕೆದಾರರು ಇಂಗ್ಲಿಷ್ ಗಿಂತ ಹಿಂದಿ ಭಾಷೆಯಲ್ಲಿನ ಮಾಹಿತಿಯನ್ನು ಹೆಚ್ಚು ಬಳಕೆ ಮಾಡಲಿದ್ದಾರೆ. ಈ ಬಗ್ಗೆ ಗೂಗಲ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಕಾರ್ಯಾಚರಣೆಯ ಉಪಾಧ್ಯಕ್ಷ ರಾಜನ್ ಆನಂದನ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಹೀಗಿದೆ…

‘ಇಂಗ್ಲಿಷ್ ಬಳಕೆದಾರರ ಪ್ರಮಾಣ ಮುಗಿದಿದೆ. ದೇಶದಲ್ಲಿ 200 ಮಿಲಿಯನ್ (20 ಕೋಟಿ) ಜನರು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿ ಬಳಕೆದಾರರಾಗಿದ್ದು, ಅವರೆಲ್ಲರೂ ಈಗಾಗಲೇ ಅಂತರ್ಜಾಲ ಬಳಕೆದಾರರಾಗಿದ್ದಾರೆ. ಇನ್ನು ಮುಂದೆ ಬರುವ ಹೊಸ ಅಂತರ್ಜಾಲ ಬಳಕೆದಾರರ ಪೈಕಿ 10ರಲ್ಲಿ 9 ಮಂದಿ ಇಂಗ್ಲಿಷೇತರ ಭಾಷಿಗರಾಗಿರಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಪ್ರಗತಿ ಇರುವುದು ಇಂಗ್ಲಿಷೇತರ ಭಾಷಿಗರಿಂದ ಎಂಬುದರಲ್ಲಿ ಅನುಮಾನವಿಲ್ಲ.

ಇನ್ನು ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಹಿಂದಿ ಭಾಷೆ ಇಂಗ್ಲಿಷ್ ಗಿಂತಲೂ ಹೆಚ್ಚಿನ ಬಳಕೆದಾರರನ್ನು ಹೊಂದಿರಲಿದೆ. ಹಿಂದಿಯ ಜತೆಯಲ್ಲೇ ಇತರೆ ಪ್ರಾದೇಶಿಕ ಭಾಷೆಗಳು ಸಹ ಉತ್ತಮ ವೇಗದಲ್ಲಿ ಬೆಳೆಯುತ್ತಿದ್ದು, ಈ ಭಾಷೆಗಳು ಹೊಸ ಬಳಕೆದಾರರನ್ನು ಅಂತರ್ಜಾಲ ಲೋಕಕ್ಕೆ ಕರೆದುಕೊಂಡು ಬರುತ್ತಿವೆ.

ನಮ್ಮ ಅಧ್ಯಯನದ ವರದಿ ಪ್ರಕಾರ ಇಂದು ಭಾರತದಲ್ಲಿ 234 ಮಿಲಿಯನ್ ನಷ್ಟು ಅಂತರ್ಜಾಲ ಬಳಕೆದಾರರು ಭಾರತೀಯ ಭಾಷೆಗಳಲ್ಲಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದೇ ವೇಳೆ ಇಂಗ್ಲಿಷ್ ನಲ್ಲಿ ಮಾಹಿತಿ ಪಡೆದುಕೊಳ್ಳುತ್ತಿರುವ ಬಳಕೆದಾರರ ಸಂಖ್ಯೆ 175 ಮಿಲಿಯನ್ ಆಗಿದೆ. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷ ಶೇ.18 ರಷ್ಟು ಪ್ರಾದೇಶಿಕ ಭಾಷೆಯ ಬಳಕೆದಾರರು ಹೆಚ್ಚಾಗಲಿದ್ದು. 2021ರ ವೇಳೆಗೆ 534 ಮಿಲಿಯನ್ (53.40 ಕೋಟಿ) ಪ್ರಾದೇಶಿಕ ಭಾಷೆ ಬಳಕೆದಾರರಾಗಲಿದ್ದಾರೆ.’

ಗೂಗಲ್ ಅಧ್ಯಯನದ ಪ್ರಕಾರ ಹಿಂದಿ ಭಾಷೆಯ ನಂತರ ಭಾರತದ ಪ್ರಾದೇಶಿಕ ಭಾಷೆಗಳಾದ ತಮಿಳು, ಕನ್ನಡ, ಬೆಂಗಾಳಿ, ಮರಾಠಿ, ತೆಲುಗು, ಗುಜರಾತಿ ಹಾಗೂ ಮಲೆಯಾಳಂ ಭಾಷೆಗಳು ಬಳಕೆದಾರರು ಹೆಚ್ಚಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಕನ್ನಡ ಭಾಷೆಯ ಪ್ರಭಾವ ಹೆಚ್ಚಿಬಿಡುತ್ತದೆ ಎಂದು ನೀವು ಭಾವಿಸಿದರೆ ತಪ್ಪಾಗುತ್ತದೆ. ಕಾರಣ, ಕನ್ನಡ ಈ ಪ್ರಮುಖ ಪ್ರಾದೇಶಿಕ ಭಾಷೆಗಳ ಪಟ್ಟಿಯಲ್ಲಿ ಇದ್ದರೂ, ಹಿಂದಿಯ ನಂತರ ಹೆಚ್ಚು ಪ್ರಭಾವ ಬೀರು ಪ್ರಾದೇಶಿಕ ಭಾಷೆಗಳೆಂದರೆ, ಮರಾಠಿ, ಬೆಂಗಾಳಿ, ತಮಿಳು ಮತ್ತು ತೆಲುಗು. ಈ ನಾಲ್ಕು ಭಾಷೆಗಳ ಬಳಕೆದಾರರು ಶೇ.30 ರಷ್ಟು ಬಳಕೆದಾರರನ್ನು ಹೊಂದಲಿವೆ ಎಂದು ಗೂಗಲ್ ಅಧ್ಯಯನದ ವರದಿ ತಿಳಿಸಿದೆ. ಇದರಿಂದ ನಮ್ಮ ಕನ್ನಡ ಭಾಷಾಭಿಮಾನ ಇನ್ನು ಸುಧಾರಿಸಬೇಕಾದ ಅಗತ್ಯತೆಯನ್ನು ಸ್ಪಷ್ಟಪಡಿಸುತ್ತಿದೆ. ಈ ಬಗ್ಗೆ ಕನ್ನಡಿಗರಾದ ನಾವು ಹೆಚ್ಚು ಮಾಹಿತಿಗಳನ್ನು ಕನ್ನಡದಲ್ಲಿ ಪಡೆಯುವ ಮೂಲಕ ನಮ್ಮ ಭಾಷೆಯನ್ನು ಬೆಳೆಸಬೇಕು. ಆಗ ಗೂಗಲ್ ಸಹ ಬಳಕೆದಾರರ ಅನುಗುಣವಾಗಿ ಹೆಚ್ಚಿನ ಮಾಹಿತಿಗಳನ್ನು ಕನ್ನಡ ಭಾಷೆಯಲ್ಲಿ ನೀಡಲು ಮುಂದಾಗುತ್ತದೆ. ಹೀಗಾಗಿ ಜವಾಬ್ದಾರಿ ನಮ್ಮ ಮೇಲೆಯೇ ಹೆಚ್ಚಿದೆ.

Leave a Reply