ಈಶ್ವರಪ್ಪ ವರ್ಸಸ್ ಬಿಎಸ್ ವೈ ಎಂಬ ಬಿಜೆಪಿ ಕದನವೀಗ ಯಡಿಯೂರಪ್ಪ ವರ್ಸಸ್ ಸಂತೋಷ್!

ಡಿಜಿಟಲ್ ಕನ್ನಡ ಟೀಮ್:

ಇಂದು ಅರಮನೆ ಮೈದಾನದಲ್ಲಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಬಂಡಾಯ ನಾಯಕರ ಸಮಾವೇಶ ಪಕ್ಷದ ಆಂತರಿಕ ಕಲಹದ ಆಳವನ್ನು ತೆರೆದಿಟ್ಟಿದೆ. ಅಷ್ಟೇ ಅಲ್ಲದೆ ಇಷ್ಟು ದಿನಗಳ ಕಾಲ ಯಡಿಯೂರಪ್ಪ ವರ್ಸಸ್ ಈಶ್ವರಪ್ಪ ನಡುವಣ ವೈಯಕ್ತಿಕ ಗುದ್ದಾಟ ಈಗ ಬಿಜೆಪಿಯನ್ನು ಎರಡು ಬಣಗಳನ್ನಾಗಿ ವಿಂಗಡಿಸಿದೆ. ಪಕ್ಷ ಆಡಳಿತಕ್ಕೆ ಬರುವ ಮುನ್ನವೇ ಅಧಿಕಾರದ ಪಾಲುದಾರಿಕೆಯ ಬಗ್ಗೆ ಬಿಜೆಪಿ ನಾಯಕರು ಮಾತಾಡುತ್ತಿದ್ದಾರೆ.

ಒಂದೆಡೆ ಈಶ್ವರಪ್ಪ ಹಾಗೂ ಅವರ ಬೆಂಬಲಿತ ನಾಯಕರು ಅರಮನೆ ಮೈದಾನದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪನವರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದರೆ, ಮತ್ತೊಂದೆಡೆ ಯಡಿಯೂರಪ್ಪನವರು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇದರೊಂದಿಗೆ ಬಿಜೆಪಿಯ ಆಂತರಿಕ ಕಲಹ ಇರುವುದು ಯಡಿಯೂರಪ್ಪ ಮತ್ತು ಸಂತೋಷ್ ಅವರ ನಡುವೆ ಎಂಬ ತೆರೆ ಮರೆಯ ಮಾತುಗಳು ಈಗ ಸಾರ್ವಜನಿಕವಾಗಿ ಬಟಾಬಯಲಾಗಿದೆ.

ಈ ಎರಡು ಬಣಗಳ ಆರೋಪ ಪ್ರತ್ಯಾರೋಪಗಳಿಗೆ ಕೇವಲ ಸಭೆಗಳು ಮಾತ್ರ ವೇದಿಕೆಯಾಗಿರದೇ ಸುದ್ದಿವಾಹಿನಿಗಳೂ ವೇದಿಕೆಯಾಗಿ ಪರಿಣಮಿಸಿವೆ. ಇಂದು ನಡೆದ ಈ ಟೀಕಾ ಯುದ್ಧದಲ್ಲಿ ಯಾರ ಮಾತಿನ ವರಸೆ ಹೇಗಿತ್ತು ನೋಡೋಣ ಬನ್ನಿ…

ಬಿ.ಎಸ್.ಯಡಿಯೂರಪ್ಪ: ಈ ಬಂಡಾಯದಲ್ಲಿ ಈಶ್ವರಪ್ಪ ಕೇವಲ ಪಾತ್ರಧಾರಿ, ಸೂತ್ರಧಾರಿ ಬೇರೆಯೇ ಇದ್ದಾರೆ. ರಾಜ್ಯ ಬಿಜೆಪಿಯಲ್ಲಿನ ಈ ಎಲ್ಲ ಗೊಂದಲಗಳಿಗೆ ಪಕ್ಷದ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರೇ ಕಾರಣ. ಇಂದು ನಡೆಯುತ್ತಿರುವ ಭಿನ್ನಮತಿಯರ ಸಭೆ ನಡೆಸಲು ಅವರ ಪ್ರೋತ್ಸಾಹ ಇದೆ. ಸಂತೋಷ್ ಅವರ ಬೆಂಬಲಿಗರೇ ಈ ಸಭೆ ನಡೆಸುತ್ತಿದ್ದಾರೆ. ಎಲ್ಲವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ. ಅವರ ಒತ್ತಡಗಳಿಗೆ ಮಣಿಯುವುದಿಲ್ಲ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾಳೆಯಿಂದಲೇ ನನ್ನ ಕಾರ್ಯಕ್ರಮಗಳು ರೂಪುಗೊಳ್ಳಲಿವೆ.

ಈಶ್ವರಪ್ಪ ಅವರಿಗೆ ವಿಧಾನ ಪರಿಷತ್ ಪ್ರತಿಪಕ್ಷದ ಸ್ಥಾನ ಬೇಕು ಎನ್ನುವುದಾದರೆ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ರಾಯಣ್ಣ ಬ್ರಿಗೇಡ್ ನಲ್ಲಿ ಮುಂದುವರಿಯುವುದಾದರೆ ಅವರು ಅಲ್ಲಿಯೇ ಇರಲಿ. ಈಶ್ವರಪ್ಪ ನಿಜವಾಗಿಯೂ ಪಕ್ಷದಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ಒಂದಿಷ್ಟು ಸಣ್ಣ ಪುಟ್ಟ ಸಮಸ್ಯೆಗಳಿದ್ದರೆ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಿ ಪರಿಹರಿಸಿಕೊಳ್ಳಬಹುದಿತ್ತು. ಪರ್ಯಾಯ ಸಭೆ ನಡೆಸುವ ಅಗತ್ಯವಾದರೂ ಏನಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದಿಂದ ನಾಲ್ಕನೇ ಸ್ಥಾನ ಪಡೆದ ಈಶ್ವರಪ್ಪಗೆ ಪಕ್ಷ ಪ್ರತಿಪಕ್ಷದ ನಾಯಕನ ಸ್ಥಾನ ನೀಡಿದೆ. ಇದರ ಮೂಲಕ ಎಲ್ಲಾ ಸವಲತ್ತುಗಳನ್ನು ಅವರು ಪಡೆಯುತ್ತಿದ್ದಾರೆ. ಎಲ್ಲವೂ ಸರಿ ಇದ್ದಾಗ ತಮ್ಮ ಸ್ವಾರ್ಥಕ್ಕಾಗಿ ನಾಲ್ಕೈದು ಜನರನ್ನು ಕೂಡಿಸಿಕೊಂಡು ಸಭೆ ನಡೆಸುವುದು ಸರಿಯೇ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಪದಾಧಿಕಾರಿಗಳ ಪಟ್ಟಿ ಬದಲಾಗಿದೆ. ಆದರೂ 20 ಜನರನ್ನು ಸೇರಿಸಿಕೊಂಡು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಂಬಿಸಲು ಹೊರಟಿದ್ದಾರೆ. ರಾಜ್ಯದ ಉಸ್ತುವಾರಿ ಹೊಣೆಹೊತ್ತ ಮುರಳೀಧರ್ ರಾವ್ ಸಭೆ ನಡೆಸದಂತೆ ಎಚ್ಚರಿಕೆ ನೀಡಿದರೂ, ಈಶ್ವರಪ್ಪ ಪಕ್ಷ ನಿಷ್ಠರ ಸಭೆ ಎಂದು ಹೇಳಿಕೊಂಡು ಗೊಂದಲ ಸೃಷ್ಠಿಸುತ್ತಿದ್ದಾರೆ. ಇಂತಹ ಸಭೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅನುಕೂಲವಾಗಲಿದಿಯೇ ಹೊರತು, ಬಿಜೆಪಿ ಅಧಿಕಾರಕ್ಕೆ ಬರಲು ಅಲ್ಲ. ಸಭೆಯ ನಡುವಳಿಕೆಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು. ಹಿಂದೇಯ ರಾಯಣ್ಣ ಬ್ರೀಗೇಡ್ ನಡೆಸದಂತೆ ವರಿಷ್ಠರು ಸೂಚನೆ ಕೊಟ್ಟಿದ್ದರೂ, ಪುನಃ ಮತ್ತೆ ಅದೇ ಚಟುವಟಿಕೆ ನಡೆಯುತ್ತಿದೆ.

ಕೆ.ಎಸ್ ಈಶ್ವರಪ್ಪ: ಸರ್ವಾಧಿಕಾರಿ ಧೋರಣೆ ಬಿಟ್ಟು ಎಲ್ಲವನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಿ, ಇಲ್ಲದಿದ್ದರೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಿರಿ. ಬಿಜೆಪಿ ಉಳಿಸಲು ನಾವು ಯಾವುದೇ ತ್ಯಾಗಕ್ಕೂ ಸಿದ್ಧ. ಅಪ್ಪ-ಅಮ್ಮನಿಗೆ ಹುಟ್ಟಿದವರು ನಾವು. ಯಾವ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಬದಲಿಗೆ ಪಕ್ಷದಲ್ಲಿ ನಡೆಯುತ್ತಿರುವ ಸರ್ವಾಧಿಕಾರಿ ಧೋರಣೆಗೆ ಬ್ರೇಕ್ ಹಾಕುತ್ತೇವೆ. ಮುಖ್ಯಮಂತ್ರಿ ನಾಯಕತ್ವ ನಿಮಗೇ ಇರಲಿ. ಆದರೆ ರಾಜ್ಯಾದ್ಯಕ್ಷ ಸ್ಥಾನ ಮಾತ್ರ ಬೇಡ. ಇದೇ ಸ್ಥಿತಿ ಮುಂದುವರೆದರೆ ನಾವು ಮುಂದೆ ಅಧಿಕಾರ ಹಿಡಿಯುವುದು ಕನಸಿನ ಮಾತು. ನಮ್ಮ ರಕ್ತದ ಕಣ ಕಣದಲ್ಲಿರುವುದು ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತ. ನಮ್ಮ ಪಕ್ಷ ನಿಷ್ಠೆಯನ್ನು ಯಾರೊಬ್ಬರು ಪ್ರಶ್ನಿಸುವಂತಿಲ್ಲ.

ನಮ್ಮ ತಾಯಿಯ ಮೇಲೆ ಪ್ರಮಾಣ ನಾವೆಂದೂ ಪಕ್ಷ ವಿರೋಧಿ ಚಟುವಟಿಕೆ  ನಡೆಸಿದವರಲ್ಲ. ಯಾರು ನಡೆಸುತ್ತಿದ್ದಾರೆ ಎಂಬುದು ಕಾರ್ಯಕರ್ತರಿಗೆ ತಿಳಿದಿದೆ. ಕೆಜೆಪಿ ಕಟ್ಟಬೇಡಿ ಕಟ್ಟಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಪಕ್ಷ ಕಟ್ಟಿದ್ರಿ. ಇದರಿಂದ ಬಿಜೆಪಿಗೆ ಸೋಲಾಗಿ ಸಿದ್ದರಾಮಯ್ಯನವರಿಗೆ ಲಾಟರಿ ಹೊಡೆಯಿತು.

ಬಿಜೆಪಿಯನ್ನು ನಿಷ್ಠಾವಂತರು ಕಟ್ಟಿದ್ದಾರೆ. ಲಕ್ಷಾಂತರ ಕಾರ್ಯಕರ್ತರು ಬೆವರು ಸುರಿಸಿ ಶ್ರಮವಹಿಸಿದ್ದರಿಂದ ಇಷ್ಟು ದೊಡ್ಡ ಪಕ್ಷವಾಗಿ ಬೆಳೆದಿದೆ. ಮುಂದೆಯೂ ನಿಷ್ಠಾವಂತ ಕಾರ್ಯಕರ್ತರು ಬರಬೇಕೆಂಬುದು ನಮ್ಮ ಆಸೆ. ನಿಮ್ಮ ಹಿಂದೆ ಮುಂದೆ ಇರುವವರು ಇಂದ್ರ, ಚಂದ್ರ ಎಂದು ತಿಳಿದುಕೊಂಡಿದ್ದೀರಿ. ನಾವು ಚರ್ಚೆಗೆ ಸಿದ್ದ ಎಂದು ಹೇಳಿದರೂ ನೀವು ಮಾಡುತ್ತಿರುವುದು ಏನು? ಪದಾಧಿಕಾರಿಗಳ ಪಟ್ಟಿ  ಬದಲಾಯಿಸಬೇಕೆಂದು ವರಿಷ್ಠರು ಸೂಚನೆ ಕೊಟ್ಟರೂ ನಾಮಕಾವಸ್ತೆಗೆ ಒಂದೆರಡು ಬದಲಾಯಿಸಿ ಸುಮ್ಮನಾದಿರಿ. ನಿಮಗೆ ಜಯಕಾರ ಹಾಕುವವರನ್ನು ಪದಾಧಿಕಾರಿಗಳ ಪಟ್ಟಿಯಲ್ಲಿ ನೇಮಕ ಮಾಡಿದಿರಿ. ವಿರೋಧಿಸಿದವರನ್ನು ಮೂಲೆಗುಂಪು ಮಾಡಿದ್ದೀರಿ. ಸೊಗಡು ಶಿವಣ್ಣ, ನಂದೀಶ್ ಏನು ತಪ್ಪು ಮಾಡಿದ್ದರೆಂದು ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೀರಿ, ಕೆಜಿಪಿಯಿಂದ ಬಂದವರನ್ನು ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿದ್ದೀರಿ. ಮುಂದೆ ಸರ್ಕಾರ ಬಂದರೆ ಅವರನ್ನು ಮಂತ್ರಿಯೂ ಮಾಡುತ್ತೀರಿ. ಹಾಗಾದರೆ ಪಕ್ಷ ನಿಷ್ಠರು ಎಲ್ಲಿಗೆ ಹೋಗಬೇಕೆಂದು ಹರಿಹಾಯ್ದರು.

ನಿಮ್ಮನ್ನು ಈ ಹಿಂದೆ ಜೈ ಜೈ ಎನ್ನುತ್ತಿದ್ದವರೇ ಏನು ಮಾಡಿದ್ದಾರೆ ಎಂಬುದು ಗೊತ್ತಿರಲಿ. ಮುಂದೆಯೂ ಇವರೇ ಮಣ್ಣು ಮುಕ್ಕಿಸುತ್ತಾರೆ ಎಂಬುದರಲ್ಲಿ ಅನುಮಾನಬೇಡ. ಈಗಲೂ ಹೇಳುತ್ತೇವೆ ನಾವ್ಯಾರು ಪಕ್ಷ ವಿರೋಧಿಗಳಲ್ಲ. ಹೈಕಮಾಂಡ್ ನಮ್ಮ ವಿರುದ್ದ ಶಿಸ್ತು ಕ್ರಮ ಜರುಗಿಸಿದರೂ ಚಿಂತೆ ಇಲ್ಲ. ಆದರೆ ಪಕ್ಷದೊಳಗೆ ನಡೆಯುತ್ತಿರುವ ಚಟುವಟಿಕೆಗಳು ಸರಿಯಾಗಬೇಕು, ಯಡಿಯೂರಪ್ಪ ಬೆಂಬಲಿಗರಿಗೆ ಕಡಿವಾಣ ಹಾಕದಿದ್ದರೆ ಉಳಿಗಾಲವಿಲ್ಲ.

ಉದ್ವಿಗ್ನ ಪರಿಸ್ಥಿತಿ ನಿರ್ಮಾಣ..!

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಸಂಘಟನೆ ಉಳಿಸಿ ಭಿನ್ನಮತೀಯರ ಸಮಾವೇಶದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಲು ಮುಂದಾದರು.

ತಮ್ಮ ಭಾಷಣದಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ಹಾಗೂ ಅವರ ಬೆಂಬಲಿಗರ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು. ‘ಕೆಲವರು ಉನ್ನತ ಸ್ಥಾನಕ್ಕೆ ಹೋದರೂ ತಮ್ಮ ಸಣ್ಣತನವನ್ನು ಬಿಟ್ಟಿಲ್ಲ. ಪಕ್ಷ ಬಿಟ್ಟು ಹೋಗಿ ಬಂದವರು ಪಕ್ಷವನ್ನು ಉಳಿಸುವ ಬದಲು ಬೆಂಬಲಿಗರ ಹಿತ ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ  ಪಕ್ಷ ಹಾಳಾಗುತ್ತಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದರೆ ಇವರಿಗೇನು ಕಷ್ಟ’ ಎಂದು ಪರೋಕ್ಷವಾಗಿ ಭಾನುಪ್ರಕಾಶ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

ಇದರಿಂದ ಕೆರಳಿದ ಯಡಿಯೂರಪ್ಪ ಬೆಂಬಲಿಗ ಶಿವಣ್ಣ ನೇರವಾಗಿ ವೇದಿಕೆ ಮುಂಭಾಗ ಬಂದು ಭಾನುಪ್ರಕಾಶ್ ಗುರಿಯಾಗಿಟ್ಟುಕೊಂಡು ನೀನು ಅಯೋಗ್ಯ. ನಮ್ಮ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ನಿನಗಿಲ್ಲ ಎಂದು ಗುಡುಗಿದರು. ಇದರಿಂದ ಸಮಾವೇಶದಲ್ಲಿ ಒಂದು ಕ್ಷಣ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ವತಃ ಭಾನುಪ್ರಕಾಶ್ ಕೂಡ ಕ್ಷಣಕಾಲ ಗಲಿಬಿಲಿಯಾದರು.

ಈ ಹಂತದಲ್ಲಿ ಬಿಎಸ್ ವೈ ಬೆಂಬಲಿಗರು ಮತ್ತು ಈಶ್ವರಪ್ಪ ಬೆಂಬಲಿಗರ ನಡುವೆ ಮಾರಾಮಾರಿ ನಡೆಯಿತು. ಭಾನುಪ್ರಕಾಶ್ ಗೆ ಟೀಕಿಸಿದ ಬೆಂಬಲಿಗನನ್ನು ಹಿಗ್ಗಾಮುಗ್ಗಾ ಥಳಿಸಿ ಕುತ್ತಿಗೆ ಪಟ್ಟಿ ಹಿಡಿದು ಹೊರಗೆ ಹಾಕಿದರು.

Leave a Reply