ಖ್ಯಾತ ನಟ- ರಾಜಕಾರಣಿ ವಿನೋದ್ ಖನ್ನಾ ವಿಧಿವಶ

ಡಿಜಿಟಲ್ ಕನ್ನಡ ಟೀಮ್:

ಕಳೆದ ಹಲವು ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದ ಬಾಲಿವುಡ್ ಖ್ಯಾತ ನಟ ವಿನೋದ್ ಖನ್ನಾ ಗುರುವಾರ ಅಂತಿಮ ಉಸಿರೆಳೆದಿದ್ದಾರೆ. 70 ವರ್ಷದ ನಟ ಹಾಗೂ ರಾಜಕಾರಣೆ ವಿನೋದ್ ಖನ್ನಾ, ‘ಬ್ಲಾಡರ್ ಕಾರ್ಕಿನೊಮಾ’ ಸಮಸ್ಯೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ 11.20ಕ್ಕೆ ವಿಧಿವಶರಾಗಿದ್ದಾರೆ.

ಪ್ರಸ್ತುತ ಪಂಜಾಬ್ ನ ಗುರ್ದಾಸ್ಪುರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಪಕ್ಷದ ಸಂಸದರಾಗಿದ್ದ ವಿನೋದ್ ಖನ್ನಾ, ಅನಾರೋಗ್ಯದ ಹಿನ್ನೆಲೆಯಲ್ಲಿ ಮುಂಬೈನ ಎಚ್.ಎನ್.ರಿಲಾಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುದೀರ್ಘ ಐದು ದಶಕಗಳ ಕಾಲ ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದ ವಿನೋದ್ ಖನ್ನಾ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಖಳನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ವಿನೋದ್ ಖನ್ನಾ, ನಂತರ ಹಿರೋ ಆಗಿ ಮಿಂಚಿ ಸಾಕಷ್ಟು ಯಶಸ್ಸು ಗಳಿಸಿದವರು. ‘ಮೇರೆ ಆಪ್ನೆ’, ‘ಇನ್ಸಾಫ್’ ಹಾಗೂ ‘ಅಮರ್ ಅಕ್ಬರ್ ಆಂಥೋನಿ’ ಇವರ ವೃತ್ತಿ ಬದುಕಿನ ಸೂಪರ್ ಹಿಟ್ ಚಿತ್ರಗಳು. 1980ರಲ್ಲಿ ತಮ್ಮ ನಟನಾ ವೃತ್ತಿಬದುಕಿನ ಉತ್ತಂಗದಲ್ಲಿರುವಾಗಲೇ ವಿನೋದ್ ಖನ್ನಾ ಓಶೊ ಆಶ್ರಮ ಸೇರಿದ್ದರು.

ಈ ಹಿರಿಯ ನಟನ ಅಗಲಿಕೆಗೆ ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

Leave a Reply