ಬಾಹುಬಲಿ2 ಅಬ್ಬರಕ್ಕೆ ತತ್ತರಿಸುತ್ತಿರುವ ರಾಜಕುಮಾರ, ರಾಗ… ಕನ್ನಡ ಚಿತ್ರಗಳಷ್ಟೇ ಅಲ್ಲ ಬೆಂಗಾಳಿ- ಅಸ್ಸಾಂ ಚಿತ್ರಗಳದ್ದೂ ಇದೇ ಪಾಡು

ಡಿಜಿಟಲ್ ಕನ್ನಡ ಟೀಮ್:

ಭಾರತ ಸೇರಿದಂತೆ ದೇಶ ವಿದೇಶಗಳಲ್ಲಿ ಬಾಹುಬಲಿ2 ಚಿತ್ರದ ಕ್ರೇಜ್ ಮುಗಿಲು ಮುಟ್ಟಿದೆ. ತಾಂತ್ರಿಕವಾಗಿ ಉನ್ನತ ಗುಣಮಟ್ಟದಲ್ಲಿ ಮೂಡಿ ಬಂದಿರುವ ಈ ಚಿತ್ರ, ಭಾರತೀಯ ಚಿತ್ರರಂಗಕ್ಕೆ ದೊಡ್ಡ ಕೊಡುಗೆಯಾಗಿರುವುದು ಎಷ್ಟು ಸತ್ಯವೋ, ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳ ಪಾಲಿಗೆ ಈ ಚಿತ್ರ ಮಾರಕವಾಗಿ ಪರಿಣಮಿಸಿರುವುದು ಅಷ್ಟೇ ವಾಸ್ತವ. ಬಾಹುಬಲಿ2 ಚಿತ್ರ ಬಿಡುಗಡೆಯಿಂದಾಗಿ ಜನಮನ್ನಣೆ ಗಳಿಸಿರುವ ಕನ್ನಡದ ‘ರಾಜಕುಮಾರ’ ಹಾಗೂ ‘ರಾಗ’ ಚಿತ್ರಗಳು ಚಿತ್ರಮಂದಿರಗಳಿಂದ ಎತ್ತಂಗಡಿಯಾಗುತ್ತಿವೆ.

ವರದಿಗಳ ಪ್ರಕಾರ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಚಿತ್ರಕ್ಕೆ ಎರಡು ಚಿತ್ರಮಂದಿರಗಳಿಂದ ದಿನಕ್ಕೆ ₹ 5 ಲಕ್ಷ ಕಲೆಕ್ಷನ್ ಆಗುತ್ತಿತ್ತು. ಆದರೂ ಈ ಚಿತ್ರಮಂದಿರಗಳು ರಾಜಕುಮಾರನಿಗೆ ಗೇಟ್ ಪಾಸ್ ಕೊಟ್ಟು, ಬಾಹುಬಲಿಯನ್ನು ಸ್ವಾಗತಿಸಲು ಸಿದ್ಧವಾಗಿದ್ದವು. ಅಭಿಮಾನಿಗಳು, ಸಂಘಟನೆಗಳು, ವಾಣಿಜ್ಯ ಮಂಡಳಿಗಳ ಒತ್ತಾಯದ ಮೇರೆಗೆ ಸ್ವಲ್ಪ ಕಾಲ ಈ ಚಿತ್ರಮಂದಿರಗಳಲ್ಲಿ ರಾಜಕುಮಾರನಿಗೆ ಜಾಗ ಸಿಕ್ಕಿದೆ. ಆದರೆ ಅದು ಎಷ್ಟು ದಿನ ಎಂಬ ಆತಂಕ ಮುಂದುವರಿದಿದೆ.

ಇನ್ನು ನಟ ಮತ್ತು ನಿರ್ಮಾಪಕ ಮಿತ್ರಾ ಅವರ ವಿಭಿನ್ನ ಪ್ರಯೋಗದ ರಾಗ ಚಿತ್ರ, ಅಭಿಮಾನಿಗಳು ಹಾಗೂ ವಿಮರ್ಶಕರಿಂದ ಸಾಕಷ್ಟು ಪ್ರಶಂಸೆ ಪಡೆದು ಯಶಸ್ವಿಯಾಗಿ ಪ್ರದರ್ಶನವಾಗುತ್ತಿತ್ತು. ಈಗತಾನೆ ರಾಗ ಚಿತ್ರ ಹೆಚ್ಚಿನ ಮಟ್ಟದಲ್ಲಿ ಜನರನ್ನು ತಲುಪುತ್ತಿದೆ ಎನ್ನುವ ಸಂದರ್ಭದಲ್ಲಿ ಬಾಹುಬಲಿ ಮಾರಕವಾಗಿದೆ.

ಬಾಹುಬಲಿ2 ಚಿತ್ರದ ಹವಾದಿಂದ ಕೇವಲ ಕನ್ನಡ ಚಿತ್ರಗಳು ಮಾತ್ರ ಪರದಾಡುತ್ತಿಲ್ಲ. ಬೇರೆ ಪ್ರಾದೇಶಿಕ ಭಾಷೆಗಳಾದ ಬೆಂಗಾಳಿ, ಅಸ್ಸಾಮಿ ಚಿತ್ರಗಳು ನೆಲಕಚ್ಚುವ ಆತಂಕದಲ್ಲಿವೆ. ಕಳೆದ ವಾರವಷ್ಟೆ ಎರಡು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ‘ಬಿಶೋರ್ಜೋನ್’ ಸಹ ಬಾಹುಬಲಿ ಅಬ್ಬರಕ್ಕೆ ಸಿಕ್ಕು ನಲುಗುತ್ತಿದೆ. ಬಾಹುಬಲಿ2 ಚಿತ್ರಕ್ಕಾಗಿ ಚಿತ್ರಮಂದಿರಗಳು ಈ ಚಿತ್ರವನ್ನು ಎತ್ತಂಗಡಿ ಮಾಡುತ್ತಿವೆ. ಈ ಬಗ್ಗೆ ಚಿತ್ರದ ನಿರ್ದೇಶಕ ಕೌಶಿಕ್ ಗಂಗೂಲಿ, ಟ್ವಿಟರ್ ನಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿರುವುದು ಹೀಗೆ…

‘ಬಾಹುಬಲಿ2 ಚಿತ್ರದಿಂದಾಗಿ ಬಿಶೋರ್ಜೋನ್ ಚಿತ್ರ ನೆಲಕಚ್ಚುತ್ತಿದೆ. ಬಾಹುಬಲಿ ಚಿತ್ರ ಪಶ್ಚಿಮ ಬಂಗಾಳದಲ್ಲಿ 8-10 ಪ್ರದರ್ಶನಗಳನ್ನು ಕಡಿಮೆ ಮಾಡಿಕೊಂಡಿದ್ದರೆ ಅವರಿಗೆ ದೊಡ್ಡ ಹೊಡೆತವಾಗುತ್ತಿರಲಿಲ್ಲ. ಆದರೆ ಈ ಚಿತ್ರಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ.’

ಇನ್ನು ಸಾರ್ವಜನಿಕರಿಂದ ನಿರ್ಮಾಣವಾಗಿದ್ದ ಅಸ್ಸಾಂ ಚಿತ್ರ ‘ಲೋಕಲ್ ಕುಂಗ್ ಫು2’ ಚಿತ್ರ ಸಹ ಕಳೆದ ವಾರವಷ್ಟೇ ಬಿಡುಗಡೆಯಾಗಿ ಚಿತ್ರದ ಪ್ರದರ್ಶನದ ವೇಳೆ ಚಿತ್ರಮಂದಿರಗಳು ತುಂಬಿದ್ದವು. ಚಿತ್ರ ಯಶಸ್ಸಿನ ನಗೆ ಬೀರಬೇಕು ಎನ್ನುವ ಪರಿಸ್ಥಿತಿಯಲ್ಲಿ ಬಾಹುಬಲಿ2 ಚಿತ್ರ ಈ ಚಿತ್ರದ ಕನಸಿಗೆ ತಣ್ಣೀರೆರೆಚಿದೆ.

ಒಟ್ಟಿನಲ್ಲಿ ಬಾಹುಬಲಿ2 ಚಿತ್ರ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಯಶಸ್ಸನ್ನು ಸಾಧಿಸುವ ಬರದಲ್ಲಿ, ಇತರೆ ಪ್ರಾದೇಶಿಕ ಭಾಷೆಗಳ ಗುಣಮಟ್ಟದ ಚಿತ್ರಗಳಿಗೆ ಮಾರಕವಾಗುತ್ತಿರುವುದು ಕಹಿ ಸತ್ಯವಾಗಿದೆ.

Leave a Reply