ಸುಕ್ಮಾ ದಾಳಿಯ ಶೋಕದ ಬೆನ್ನಲ್ಲೇ ಕುಪ್ವಾರದಲ್ಲಿ ಉಗ್ರರ ದಾಳಿ, ಕ್ಯಾಪ್ಟನ್ ಸೇರಿದಂತೆ 3 ಯೋಧರು ಹುತಾತ್ಮ- 2 ಉಗ್ರರ ಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಮೊನ್ನೆ ಮೊನ್ನೆಯಷ್ಟೇ ಬಿಹಾರದ ಸುಕ್ಮಾ ಪ್ರದೇಶದಲ್ಲಿ ಮಾವೋವಾದಿ ನಕ್ಸಲರ ದಾಳಿಗೆ 25 ಯೋಧರನ್ನು ಕಳೆದುಕೊಂಡು ಸೂತಕದ ವಾತಾವರಣದಲ್ಲಿ ಮುಳುಗಿದ್ದ ಭಾರತೀಯರಿಗೆ ಗುರುವಾರ ಮತ್ತೊಂದು ಶಾಕ್. ಕಾರಣ, ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ದಾಳಿ ನಡೆದಿದ್ದು, ಕ್ಯಾಪ್ಟನ್ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಈ ದಾಳಿಗೆ ಪ್ರತಿಯಾಗಿ ಸೇನೆಯು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದು, ಈ ಉಗ್ರರನ್ನು ನಿಷೇಧಿತ ಜೈಷ್ ಇ ಮೊಹಮದ್ ಸಂಘಟನೆಯ ಸದಸ್ಯರು ಎಂದು ಶಂಕಿಸಲಾಗಿದೆ. ಈ ಬಗ್ಗೆ ರಕ್ಷಣಾ ಇಲಾಖೆಯ ವಕ್ತಾರರು ಮಾಹಿತಿ ನೀಡಿದ್ದು, ಅದು ಹೀಗಿದೆ…

‘ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 100 ಕಿ.ಮೀ ದೂರದಲ್ಲಿರುವ ಕುಪ್ವಾರ ಜಿಲ್ಲೆಯ ಪಂಜ್ಗಮ್ ಪ್ರದೇಶದಲ್ಲಿ ಯೋಧರ ನೆಲೆ ಮೇಲೆ ಉಗ್ರರ ದಾಳಿ ನಡೆದಿದ್ದು, ಹಿರಿಯ ಅಧಿಕಾರಿ ಸೇರಿದಂತೆ 3 ಯೋಧರು ಹುತಾತ್ಮರಾದರೆ, 5 ಯೋಧರು ಗಾಯಗೊಂಡಿದ್ದಾರೆ. ನಂತರ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಗಾಯಾಳು ಯೋಧರನ್ನು ವಿಮಾನದ ಮೂಲಕ ಬೇರೆಡೆಗೆ ಸಾಗಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.’

ಇನ್ನು ಸೇನಾ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಉಗ್ರರು ಸೇನಾ ನೆಲೆಗೆ ನುಗ್ಗಿದ್ದು, ಇನ್ನು ಇಬ್ಬರು ಉಗ್ರರು ಇರುವ ಶಂಕೆ ಇದೆ. ಹೀಗಾಗಿ ಯೋಧರ ಕಾರ್ಯಾಚರಣೆ ಮುಂದುವರಿದಿದೆ.

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ನನ್ನು ಅಂತಾರಾಷ್ಟ್ರೀಯ ಉಗ್ರರ ಪಟ್ಟಿಗೆ ಸೇರಿಸುವಂತೆ ಭಾರತ ಒತ್ತಡ ಹೇರುತ್ತಿದ್ದರೂ ಈ ಪ್ರಯತ್ನಕ್ಕೆ ಚೀನಾ ಅಡ್ಡಗಾಲು ಹಾಕುತ್ತಲೇ ಬಂದಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಜೈಶ್ ಇ ಮೊಹಮದ್ ಸಂಘಟನೆ ಇತ್ತೀಚಿನ ವರ್ಷಗಳಲ್ಲಿ ಹಲವು ಬಾರಿ ಇಂತಹ ದಾಳಿ ನಡೆಸುತ್ತಲೇ ಬಂದಿದೆ.

Leave a Reply