ಗಾಯಗೊಂಡ ಯೋಧರ ಮೇಲೂ ಕಲ್ಲುತೂರಾಟಗಾರರ ವಿಕೃತಿ!

ಡಿಜಿಟಲ್ ಕನ್ನಡ ಟೀಮ್:

ಇಂದು ಬೆಳಗ್ಗೆ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರ ದಾಳಿ ನಡೆದಿದ್ದು, ಮೂವರು ಯೋಧರು ಹುತಾತ್ಮರಾದ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಅಡ್ಡಿ ಪಡಿಸುವುದು ಇವರ ಉದ್ದೇಶವಾಗಿದ್ದು, ಕಾರ್ಯಾಚರಣೆ ವೇಳೆ ಗಾಯಗೊಂಡ ಯೋಧರ ಮೇಲೂ ಈ ಕಿಡಿಗೇಡಿಗಳು ಕಲ್ಲುತೂರಾಟ ಮಾಡಿ ತಮ್ಮ ವಿಕೃತಿ ತೋರಿದ್ದಾರೆ.

ಇಂದು ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಸೇನೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಆದರೆ, ನಿನ್ನೆ ರಾತ್ರಿ ಉಗ್ರರು ಸೇನಾ ನೆಲೆಗೆ ನುಸುಳಿದ್ದು, ಎಷ್ಟು ಜನ ಉಗ್ರರು ಸೇನಾ ನೆಲೆ ಸೇರಿದ್ದರು ಎಂಬುದರ ಬಗ್ಗೆ ಖಚಿತ ಮಾಹಿತಿ ಇರಲಿಲ್ಲ. ಹೀಗಾಗಿ ಇನ್ನು ಉಗ್ರರು ಇರುವ ಅನುಮಾನದಿಂದ ಭಾರತೀಯ ಸೇನೆ ತನ್ನ ಕಾರ್ಯಾಚರಣೆ ಮುಂದುವರಿಸಿತ್ತು.

ಭಾರತೀಯ ಸೇನೆಯ ಉಗ್ರರ ವಿರುದ್ಧದ ಈ ಕಾರ್ಯಚರಣೆಗೆ ಸ್ಥಳೀಯರು ಅಡ್ಡಿಪಡಿಸಿರುವುದು ನಿಜಕ್ಕೂ ನಮ್ಮ ಸೈನಿಕರ ಶೋಚನೀಯ ಪರಿಸ್ಥಿತಿಗೆ ಸಾಕ್ಷಿ. ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಉಗ್ರರ ದಾಳಿ ಆರಂಭವಾಗಿದ್ದು, ಸೇನಾ ನೆಲೆಯಲ್ಲಿ ಉಗ್ರರ ದಾಳಿ ಆರಂಭವಾಗುತ್ತಿದ್ದಂತೆ ಅಲ್ಲಿಂದ ಕೆಲವೇ ಕಿ.ಮೀ ದೂರದಲ್ಲಿ ಕಿಡಿಗೇಡಿಗಳು ಕಲ್ಲು ಹಾಗೂ ಇಟ್ಟಿಗೆ ಚೂರುಗಳನ್ನು ಭಾರತೀಯ ಸೈನಿಕರ ಮೇಲೆ ತೂರುತ್ತಾ ಸೇನೆಯ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರು. ಅಲ್ಲದೆ ಉಗ್ರರಿಗೆ ರಕ್ಷಣೆಯಾಗಿ ನಿಂತಿದ್ದರು. ಇಂತಹ ಪ್ರಕರಣಗಳು ಭಾರತೀಯ ಯೋಧರಿಗೆ ಉಗ್ರರ ಸವಾಲಿನ ಜತೆಗೆ ಕಲ್ಲುತೂರಾಟಗಾರರು ಸಮಸ್ಯೆಯಾಗುತ್ತಿರುವುದನ್ನು ಸಾಬೀತುಪಡಿಸಿದೆ.

ಈ ತಿಂಗಳು ಶ್ರೀನಗರದ ಉಪಚುನಾವಣೆ ಸಂದರ್ಭದಿಂದ ಕಣಿವೆ ರಾಜ್ಯದಲ್ಲಿ ಮತ್ತೆ ಪರಿಸ್ಥಿತಿ ಬಿಗಡಾಯಿಸಿದೆ. ಪ್ರತ್ಯೇಕತಾವಾದಿಗಳ ಕುಮ್ಮಕ್ಕಿನಿಂದ ಕೆಲವು ಕಿಡಿಗೇಡಿಗಳು ಪದೇ ಪದೇ ಸೇನೆಯ ವಿರುದ್ಧದ ತಿಕ್ಕಾಟ ನಡೆಸುತ್ತಿದ್ದಾರೆ. ಈ ಪರಿಸ್ಥಿತಿ ಹತೋಟಿಗೆ ತರುವ ಉದ್ದೇಶದಿಂದ ಪಿಡಿಪಿ ಹಾಗೂ ಬಿಜೆಪಿ ಮೈತ್ರಿ ಸರ್ಕಾರವು ಬುಧವಾರವಷ್ಟೇ ಫೇಸ್ ಬುಕ್, ವಾಟ್ಸಪ್ ಹಾಗೂ ಟ್ವೇಟರ್ ಸೇರಿದಂತೆ 22 ಸಾಮಾಜಿಕ ಜಾಲತಾಣಗಳನ್ನು ಈ ಪ್ರದೇಶದಲ್ಲಿ ನಿಷೇಧಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗುವುದರ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿರುವುದು ಸ್ಪಷ್ಟವಾಗಿದೆ. 2016ರಿಂದ ಇಲ್ಲಿಯವರೆಗೂ ಸುಮಾರು 100 ಕ್ಕೂ ಹೆಚ್ಚು ಯೋಧರ ಬಲಿದಾನವಾಗಿದ್ದು, ದಿನೇ ದಿನೇ ಇಂತಹ ದಾಳಿಗಳು ನಿರಂತರವಾಗಿ ಹೆಚ್ಚುತ್ತಾ ಹುತಾತ್ಮ ಯೋಧರ ಪಟ್ಟಿ ಬೆಳೆಯುತ್ತಲೇ ಸಾಗಿದೆ. ಯೋಧರು ಮಾತ್ರವಲ್ಲದೇ ಇಲ್ಲಿನ ನಾಗರೀಕರ ಹತ್ಯೆಯ ಪ್ರಮಾಣದಲ್ಲೂ ಗಣನೀಯ ಏರಿಕೆ ಕಂಡಿದೆ.

Leave a Reply