ಸುಕ್ಮಾ ದಾಳಿಯ ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಕ್ರಿಕೆಟಿಗ ಗೌತಮ್ ಗಂಭೀರ್

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ಚತ್ತೀಸಗಢದ ಸುಕ್ಮಾ ಪ್ರದೇಶದಲ್ಲಿ ನಕ್ಸಲರ ದಾಳಿಗೆ ಹುತಾತ್ಮರಾದ ವೀರ ಯೋಧರ ಕುಟುಂಬಕ್ಕೆ ನೆರವು ನೀಡಲು ಭಾರತದ ಕ್ರಿಕೆಟಿಗ ಗೌತಮ್ ಗಂಭೀರ್ ಮುಂದಾಗಿದ್ದು, ಎಲ್ಲರ ಮನಗೆದ್ದಿದ್ದಾರೆ. ಗಂಭೀರ್ ನಕ್ಸಲರ ದಾಳಿಯಲ್ಲಿ ಮೃತಪಟ್ಟ 25 ಯೋಧರ ಮಕ್ಕಳ ಶಿಕ್ಷಣದ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದಾರೆ. ಆ ಮೂಲಕ ಗಂಭೀರ್ ಇತರರಿಗೂ ಮಾದರಿಯಾಗಿದ್ದಾರೆ.

ಗಂಭೀರ್ ಅವರ ಮಾಧ್ಯಮ ಸಲಹೆಗಾರರು ಈ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದ್ದು, ‘ಗೌತಮ್ ಗಂಭೀರ್ ಅವರು ಸುಕ್ಮಾದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 25 ಯೋಧರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದೆ.

ಮೊನ್ನೆಯಷ್ಟೇ ಈ ದಾಳಿಯನ್ನು ಟ್ವಿಟರ್ ಮೂಲಕ ಖಂಡಿಸಿದ್ದ ಗಂಭೀರ್, ‘ನಾವು ದಿನ ನಿತ್ಯ ಹವಾನಿಯಂತ್ರಿತ ಮನೆಗಳಲ್ಲಿ ನೆಮ್ಮದಿಯ ಜೀವನ ನಡೆಸುತ್ತಾ ದೊಡ್ಡ ದೊಡ್ಡ ಕಾರುಗಳಲ್ಲಿ ಆರಾಮಾಗಿ ಓಡಾಡಿಕೊಂಡಿರುವ ಸಂದರ್ಭದಲ್ಲಿ ನಮ್ಮ ದೇಶದ ಭವಿಷ್ಯದ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಹೇಳುತ್ತಾ, ಹುತಾತ್ಮ ಯೋಧರ ಮಕ್ಕಳಿಗೆ ಆಸರೆಯಾಗಬೇಕು ಎನ್ನುವ ಸಂದೇಶ ಕೊಟ್ಟಿದ್ದರು. ಈಗ ತಮ್ಮ ಮಾತನ್ನು ಗಂಭೀರ್ ಕಾರ್ಯರೂಪಕ್ಕೆ ತರುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ.

ಭಾರತೀಯ ಸೈನಿಕರ ಬಗ್ಗೆ ಗಂಭೀರ್ ವಿಶೇಷ ಕಾಳಜಿ ತೋರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಗಂಭೀರ್ ಭಾರತೀಯ ಯೋಧರ ಬೆನ್ನಿಗೆ ನಿಂತಿದ್ದಾರೆ. ಅದಕ್ಕೆ ತಾಜಾ ಉದಾಹರಣೆಯಾಗಿ ನಿಲ್ಲುವುದು, ಇದೇ ತಿಂಗಳು ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಭಾರತೀಯ ಯೋಧರ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದ್ದ ಸಂದರ್ಭದಲ್ಲಿ ಅದನ್ನು ಗಂಭೀರ್ ಖಂಡಿಸಿದ್ದ ಘಟನೆ.

ಈ ಹಿಂದೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಯೋಧರ ಕುಟುಂಬಕ್ಕೆ ಇಂತಹ ನೆರವು ನೀಡುತ್ತಾ ಮಾದರಿಯಾಗಿದ್ದರು. ಈಗ ಕ್ರಿಕೆಟಿಗ ಗೌತಮ್ ಗಂಭೀರ್ ಇಂತಹುದೇ ಸ್ಫೂರ್ತಿದಾಯಕ ಹಾದಿಯಲ್ಲಿ ಹೆಜ್ಜೆ ಇಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Leave a Reply