ಅರಮನೆ ಮೈದಾನದಲ್ಲಿ ಇಂದಿನಿಂದ ಸಿರಿಧಾನ್ಯ ಮೇಳ, ಸಾವಯವ ಮತ್ತು ಧಾನ್ಯ ಕೃಷಿಯ ಮಹತ್ವದ ಬಗ್ಗೆ ಜಾಗೃತಿ

ಡಿಜಿಟಲ್ ಕನ್ನಡ ಟೀಮ್:

ಇತ್ತೀಚಿನ ವರ್ಷಗಳಲ್ಲಿ ಬರಗಾಲ ಸಾಮಾನ್ಯವಾಗುತ್ತಿರುವ ಪರಿಸ್ಥಿತಿಯಲ್ಲೂ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಕೃಷಿ ಸಚಿವಾಲಯ ಸಿರಿಧಾನ್ಯಗಳ ಬೆಳೆಗೆ ಪ್ರೋತ್ಸಾಹ ನೀಡಲು ಮುಂದಾಗಿದೆ. ಇದರ ಭಾಗವಾಗಿ ಕೃಷಿ ಇಲಾಖೆ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಸಿರಿಧಾನ್ಯಗಳ ರಾಷ್ಟ್ರೀಯ ವ್ಯಾಪಾರ ಮೇಳ ಆಯೋಜಿಸಿದ್ದು, ಶುಕ್ರವಾರ ಈ ಮೇಳಕ್ಕೆ ಚಾಲನೆ ಸಿಕ್ಕಿದೆ.

ಭಾನುವಾರದವರೆಗೂ ನಡೆಯಲಿರುವ ಈ ವ್ಯಾಪಾರ ಮೇಳದಲ್ಲಿ ಕೃಷಿಗೆ ಸಂಬಂಧಿಸಿದಂತೆ ಚರ್ಚೆಗಳು ವಿಚಾರ ಸಂಕಿರಣಗಳು ನಡೆಯಲಿದ್ದು, ಇದರಲ್ಲಿ ಕೃಷಿ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಿರುವ ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸಾವಯವ ಹಾಗೂ ಮಿಲೆಟ್ ಕೃಷಿ (ಧಾನ್ಯ ಕೃಷಿ) ಯ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಯಲಿದೆ. ಅಷ್ಟೇ ಅಲ್ಲದೆ ಈ ಕಾರ್ಯಕ್ರಮವನ್ನು ನಮ್ಮ ರೈತರು ಹಾಗೂ ಅವರ ಉತ್ಪನ್ನಗಳಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯನ್ನಾಗಿ ಮಾಡಲಾಗಿದ್ದು, ರೈತರು, ಮಾರಾಟಗಾರರು, ಗ್ರಾಹಕರು ಹಾಗೂ ರಫ್ತುದಾರರನ್ನು ಒಂದೆಡೆ ಸೇರಿಸಲಿದೆ. ಇದರ ಜತೆಗೆ ಸಾವಯವ ಕೃಷಿ ಉತ್ಪನ್ನಗಳ ವ್ಯಾಪಾರದ ಬಗ್ಗೆಯೂ ಮಾಹಿತಿ ನೀಡಲಾಗುವುದು.  ಮೂರು ದಿನಗಳ ಈ ಕಾರ್ಯಕ್ರಮದಲ್ಲಿ 1800 ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಈ ಮೇಳೆದಲ್ಲಿ ಕೃಷಿಯಲ್ಲಿ ಲಭ್ಯವಿರುವ ಆಧುನಿಕ ತಂತ್ರಜ್ಞಾನ, ಯಂತ್ರೋಪಕರಣ ಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮೊದಲ ದಿನವಾದ ಇಂದು ಮಳೆಯಾಧಾರಿತ ಕೃಷಿ ಸ್ಥಿರತೆಗೆ ಸಾವಯವ ಮತ್ತು ಮಿಲ್ಲೆಟ್ ಕೃಷಿ, ಭಾರತ ಮತ್ತು ವಿಶ್ವದೆಲ್ಲೆಡೆ ಮಿಲ್ಲೆಟ್ ಕೃಷಿ ಪದ್ಧತಿ ಮರುಹುಟ್ಟು, ಮಾರುಕಟ್ಟೆ- ಮಾರುಕಟ್ಟೆಯ ಬೆಳವಣಿಗೆ ಹಾಗೂ ವಿಸ್ತಾರ ಅವಕಾಶಗಳು ಎಂಬ ವಿಷಯಗಳ ಮೇಲೆ ಚರ್ಚೆಗಳು ನಡೆದವು. ಈ ಚರ್ಚೆಯಲ್ಲಿ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್ ಇ ಕಾಶ್ಮೀರ್ ಕೃಷಿ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳಾದ ಡಾ.ತೇಜ್ ಪ್ರತಾಪ್, ಐಸಿಸಿಒಎನ ಮನೋಜ್ ಕುಮಾರ್ ಮೆನನ್ ಸೇರಿದಂತೆ ರಾಷ್ಟ್ರ ಮಟ್ಟದ ಕೃಷಿ ತಜ್ಞರಿಂದ ಹಿಡಿದು ಸ್ಥಳೀಯ ಕೃಷಿಕರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

Leave a Reply