ಕೃಷಿಗೇಕೆ ಕೈ ಹಾಕಿದಿರಿ ಎಂದು ಕೇಳಿದಾಗ ಪ್ರಕಾಶ್ ರೈ ಬಿಚ್ಚಿಟ್ಟ ಕೌತುಕದ ಎಳೆಗಳು

ಡಿಜಿಟಲ್ ಕನ್ನಡ ವಿಶೇಷ:

– ನಾವು ಹಳ್ಳಿಗೆ ಹೋದ್ರೆ ರೈತ ಊಟ ಹಾಕುತ್ತಾನೆ. ರೈತ ಸಿಟಿಗೆ ಬಂದರೆ ಅವನಿಗೆ ಊಟ ಹಾಕೋ ಶಕ್ತಿ ನಮಗಿದ್ಯಾ?

– ಯಾವುದೋ ಒಂದು ಹಂತದಲ್ಲಿ ಮನಸ್ಸಾಕ್ಷಿ ನಮ್ಮನ್ನು ಕೂರಿಸಿ ಸರಿಯಾದ ದಾರಿ ಹೇಳುತ್ತದೆ. ಅದನ್ನು ನಾವು ಕೇಳಿಸಿಕೊಳ್ಳಬೇಕು.

– ನಾವು ಭೂಮಿಯ ಮಕ್ಕಳು. ಯಾವತ್ತಾದರೊಂದು ದಿನ ಮತ್ತೆ ಭೂಮಿಗೆ ಮರಳಲೇಬೇಕು.

–  ಬೆಳೆಯೋದು ಅಂದ್ರೆ ವ್ಯಾಪಾರ ಅಲ್ಲ ನಂಗೆ. ಅದು ನನ್ನ ಬದುಕು.

ಬ್ಯುಸಿ ಇದ್ದೀರಿ, ಆದ್ರೂ ಕೃಷಿ ಕೆಲ್ಸ ಮಾಡ್ತೀರಿ..

ಬದುಕುವುದಕ್ಕೆ ಬ್ಯುಸಿ ಯಾಕಿರಬೇಕು. ಬದುಕಬೇಕಾದ ರೀತಿ ಇದು. ಹೀಗೆಯೇ ಬದುಕಬೇಕು ನಾವು. ಕೃಷಿ ಅನ್ನೋದು ಕೆಲಸ ಅಲ್ಲ. ಅದು ಸಹಜ ಕ್ರಿಯೆ. ಈ ಪ್ರಪಂಚದಲ್ಲಿ ನನ್ನಂತೆ ಎಲ್ಲಾ ಜೀವಿಗಳಿಗೂ ಬದುಕುವ ಅರ್ಹತೆ ಇದೆ. ನನ್ನಂತೆ ಲಕ್ಷಾಂತರ ಸೂಕ್ಷ್ಮಾಣುಜೀವಿಗಳೂ ಇಲ್ಲಿ ಬದುಕುತ್ತವೆ. ನಾನು ಸುತ್ತಲೂ ನೋಡಿದಾಗ ಹತ್ತಾರು ಮರಗಳು ಕಾಣಿಸುತ್ತವೆ. ಗಿಡದಲ್ಲಿ ಹೂವು ಅರಳುತ್ತವೆ. ಎಷ್ಟು ಚೆನ್ನಾಗಿದೆ ನೋಡಿ ಪ್ರಕೃತಿ. ನಮ್ಮ ಮನುಷ್ಯ ಸಂಕುಲವನ್ನು ನೆಮ್ಮದಿಯಿಂದ ಇಟ್ಟಿರುವುದೇ ಈ ಪ್ರಕೃತಿ. ನಾವು ನೆಮ್ಮದಿಯಾಗಿರಬೇಕಾದರೆ ಪ್ರಕೃತಿಯ ಜೊತೆಗೇ ಇರಬೇಕು.

ನಿಮಗೆ ಕೃಷಿ ಮಾಡಬೇಕು ಅಂತ ಅನ್ನಿಸಿದ್ದು ಯಾಕೆ?

ಸುಮಾರು ೬೦-೭೦ರ ದಶಕದಲ್ಲಿ ಒಂದು ತಲೆಮಾರು ಬೇರಿನಿಂದ ದೂರಾಗಿ ಇನ್ನೇನನ್ನೋ ಹುಡುಕುತ್ತಾ ಅಲೆಮಾರಿಯಂತೆ ಮತ್ತೊಂದು ಕಡೆ ಸಾಗಿತು. ದೂರದಲ್ಲಿ ದಿಗಂತ ಕಾಣಿಸುತ್ತದೆ. ಆ ದಿಗಂತವನ್ನು ಕಾಣಲು ಹೊರಟಿತು. ನಾನೂ ದಿಗಂತವನ್ನು ಹುಡುಕಿಕೊಂಡು ಅಲೆಯುತ್ತಿದ್ದೆ. ಭೂಮಿಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದೆ. ಆದರೆ ಒಂದು ದಿನ ವಾಪಸ್ ಬಂದೆ. ನಾನು ರೈತನಾಗಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ನನ್ನ ತಾತ ಕೃಷಿ ಮಾಡುತ್ತಿದ್ದರು. ಆದರೆ ನನ್ನಪ್ಪ ಇನ್ನೇನನ್ನೋ ಹುಡುಕುತ್ತಾ ಕೃಷಿಯಿಂದ ದೂರಾದರು. ಒಂದು ಜನರೇಷನ್ನು ಕೃಷಿಯಿಂದ ವಂಚಿತವಾಯಿತು. ಹಾಗಂತ ತಪ್ಪಿಸಿಕೊಂಡು ಎಲ್ಲಿ ಹೋಗೋಕಾಗತ್ತೆ. ನಾವು ಭೂಮಿಯ ಮಕ್ಕಳು. ಯಾವತ್ತಾದರೊಂದು ದಿನ ಮತ್ತೆ ಭೂಮಿಗೆ ಮರಳಲೇಬೇಕು. ನಾನು ಮಧ್ಯದಲ್ಲಿ ದಾರಿ ತಪ್ಪಿದ್ದೆ. ಈಗ ಮತ್ತೆ ದಾರಿಗೆ ಬಂದಿದ್ದೇನೆ. ಸರಿದಾರಿಯಲ್ಲಿದ್ದೇನೆ. ಬೆಳೆಯೋದು ಅಂದ್ರೆ ವ್ಯಾಪಾರ ಅಲ್ಲ ನಂಗೆ. ಅದು ನನ್ನ ಬದುಕು. ಅದು ನನ್ನ ಜೀವನ.

ಬೇರೆ ಬೇರೆ ಊರಿಗೆ ಹೋದಾಗ ಅಲ್ಲಿಂದ ಗಿಡ ಅಥವಾ ಬೀಜ ಎತ್ತಿಕೊಂಡು ಬರುತ್ತೀರಂತೆ… 

ಹಕ್ಕಿಗಳು ಹಾರುತ್ತಾ ಇರುತ್ತವೆ. ಒಂದೂರಿಂದ ಇನ್ನೊಂದೂರಿಗೆ. ನನ್ನನ್ನೂ ಒಂದು ಹಕ್ಕಿ ಅಂದುಕೊಳ್ಳಿ. ಹಕ್ಕಿಗಳು ಹಾರುತ್ತಾ ಒಂದೂರಿನಿಂದ ಇನ್ನೊಂದೂರಿಗೆ ಬೀಜವನ್ನು ದಾಟಿಸುತ್ತವೆ. ನಾನೂ ಅದೇ ಥರ. ಮಲೆನಾಡಿಗೆ ಹೋದಾಗ ಅಲ್ಲೊಂದು ಮಲ್ಲಿಗೆ ಗಿಡ ಹೂವು ಬಿಟ್ಟಿರುತ್ತದೆ. ಮಲ್ಲಿಗೆ ಅರಳುವ ಘಮ ನನ್ನ ಮೂಗಿಗೆ ತಾಗುತ್ತದೆ. ನಂಗೂ ಆ ಗಿಡ ಬೇಕು ಅನ್ನಿಸುತ್ತದೆ. ಒಂದು ಗಿಡ ತಂದು ನಮ್ಮನೆ ಮುಂದೆ ನೆಡುತ್ತೇನೆ. ಅದರಲ್ಲಿ ಮಲ್ಲಿಗೆ ಅರಳುತ್ತದೆ. ನಾನು ನನ್ನ ಕೆಲಸ ಮುಗಿಸಿ ಕಾರಲ್ಲಿ ನಿದ್ದೆ ಮಾಡುತ್ತಾ ಬರುತ್ತೇನೆ. ಯಾವಾಗ ಮಲ್ಲಿಗೆ ಘಮ ನನ್ನ ಮೂಗಿಗೆ ಬಡಿಯುತ್ತದೋ ಆಗ ಮನೆ ಬಂತು ಅಂತರ್ಥ. ಎಷ್ಟು ಚೆಂದ ಅಲ್ವೇ..

ಕೃಷಿ ಬದುಕು ಹೇಗನ್ನಿಸುತ್ತಿದೆ?

ನಮ್ಮ ತೋಟದಲ್ಲಿ ಗಿಡಗಳಿಗೆ ಗುಬ್ಬಚ್ಚಿಗಳು ಬರುತ್ತವೆ. ಪಾರಿವಾಳಗಳು ಬರುತ್ತವೆ. ನವಿಲುಗಳು ಬರುತ್ತವೆ. ನಾನಾ ಬಗೆಯ ಹಣ್ಣುಗಳ ಮರ ಇದೆ. ಟೊಮೆಟೋ ಬೆಳೆಯುತ್ತೇನೆ. ಹಕ್ಕಿಗಳು ಬಂದು ಹಣ್ಣುಗಳನ್ನು ತಿನ್ನುತ್ತವೆ. ನಾನು ನೋಡುತ್ತಾ ನಿಲ್ಲುತ್ತೇನೆ. ಒಂದೆರಡು ದಿನ ಹತ್ತಿರ ಬರಲ್ಲ. ಮೂರನೇ ದಿನ ಅದಕ್ಕೂ ಅಭ್ಯಾಸ ಆಗತ್ತೆ. ನನ್ನ ಸುತ್ತಮುತ್ತಲೇ ಹಾರಾಡುತ್ತವೆ. ನನ್ನ ತೊಟದ ಮಧ್ಯ ಒಂದು ಹೊಂಡ ತೋಡಿದ್ದೇನೆ. ಸುಮಾರು ಜನ ಕೇಳುತ್ತಾರೆ. ಯಾಕೆ ಆ ಹೊಂಡ, ಬೇರೇನಾದರೂ ಬೆಳೆಯಬಹುದಿತ್ತಲ್ಲ ಎಂದು ಹೇಳುತ್ತಾರೆ. ಇಲ್ಲ, ಮೇಲೆ ಹಾರುವ ಹಕ್ಕಿಗಳು, ಆಕಾಶದಲ್ಲಿ ಹಾರುವಾಗ ಬಾಯಾರಿದಾಗ ಕುಡಿಯಲು ನೀರು ಬೇಕಲ್ಲ. ಅದಕ್ಕಾಗಿ ಹೊಂಡ ತೋಡಿದ್ದೇನೆ. ಹಕ್ಕಿಗಳು ನೀರು ಕುಡಿಯೋಕೆ ನನ್ನ ತೋಟಕ್ಕೆ ಬರುತ್ತವೆ. ಎಲ್ಲವೂ ನಮಗೆ ಬೇಕು ಅಂದುಕೊಂಡ್ರೆ ಹೇಗೆ. ಪ್ರಕೃತಿಗೂ ಕೊಡಬೇಕಲ್ವಾ.. ಮಕ್ಕಳಿಗೆ ಚಾಕ್ಲೇಟ್ ಕೊಡ್ತೀವಿ. ಅದೇ ಥರ ದನ, ಕರು, ಹಕ್ಕಿಗಳಿಗೂ ಏನಾದರೂ ಕೊಡಬೇಕಲ್ವಾ.. ನಾನು ಊಟಕ್ಕೆ ಕೂತಾಗ ಕೋಳಿಮರಿಗಳು, ನಾಯಿಮರಿಗಳು ಓಡಾಡುತ್ತಿರುತ್ತವೆ. ಅವುಗಳಿಗೂ ಊಟ ಹಾಕುತ್ತಾ ನಾನೂ ಊಟ ಮಾಡುತ್ತೇನೆ. ಎಷ್ಟು ಖುಷಿ ಅಲ್ವೇ. ಈ ಭೂಮಿಯಲ್ಲಿ ಲಕ್ಷಾಂತರ ಸೂಕ್ಷ್ಮಾಣುಜೀವಿಗಳಿವೆ. ಅವೆಲ್ಲವೂ ಖುಷಿಯಿಂದಿದ್ದರೆ ನಾನೂ ಖುಷಿಯಿಂದ ಇರಬಲ್ಲೆ.

ಕೃಷಿ ಶುರು ಮಾಡಬೇಕು ಅಂತ ಬಲವಾಗಿ ಅನ್ನಿಸಿದ್ದು ಯಾವಾಗ?

ಬಹಳ ವರ್ಷಗಳ ಹಿಂದೆ. ಅಂದ್ರೆ ಹತ್ತು ಹದಿನೈದು ವರ್ಷದ ಹಿಂದೆ. ಒಂದು ವಿಮಾನ ನಿಲ್ದಾಣದಿಂದ ಇನ್ನೊಂದು ವಿಮಾನ ನಿಲ್ದಾಣಕ್ಕೆ ಒಂದೂರಿನಿಂದ ಇನ್ನೊಂದೂರಿಗೆ ಹಾರುತ್ತಾ ಇದ್ದಾಗ ಭೂಮಿಯೇ ಕಾಣಿಸ್ತಾ ಇಲ್ವಲ್ಲ ಅಂತನ್ನಿಸಿತು. ಬೆಂಗಳೂರಿಗೆ ಬಂದು ಮೈಸೂರಿಗೆ ಕಾರಲ್ಲಿ ಹೋಗುತ್ತಿದ್ದಾಗ ಮದ್ದೂರಿನಲ್ಲಿ ವಡೆ ತಿನ್ನಲು ನಿಂತಾಗ ದೂರದಲ್ಲಿ ತೋಟ ಕಾಣಿಸುತ್ತಿತ್ತಲ್ಲ ಆಗೆಲ್ಲಾ ನಂಜನಗೂಡಿನ ಏಲಕ್ಕಿ ಬಾಳೆ ನೆನಪಾಗುತ್ತಿತ್ತು. ಯಾಕೋ ನಾನು ಹಾರುತ್ತಾ ಹಾರುತ್ತಾ ಭೂಮಿಯನ್ನೇ ಮರೆತು ಬಿಟ್ಟೆನಾ ಅಂತ ಬಲವಾಗಿ ಅನ್ನಿಸಿತು. ಡಿಸ್‌ಕನೆಕ್ಟ್ ಆಗುತ್ತಿದ್ದೇನೆ ಅನ್ನುವ ಭಾವ. ಎಷ್ಟು ವರ್ಷ ಅಂತ ಹೀಗೆಯೇ ಇರುವುದು. ಶ್ರೇಷ್ಠ ನಟ ಅಂತ ಎಷ್ಟು ವರ್ಷ ಕರೆಸಿಕೊಳ್ಳುವುದು. ನಾನೊಬ್ಬ ಒಳ್ಳೆಯ ನಟ ಅಂತ ಸಾಬೀತು ಮಾಡಿಯಾಗಿದೆ. ಇನ್ನು ಎಷ್ಟು ಕಾಲ ಪ್ರೂವ್ ಮಾಡಬೇಕು. ಹೀಗೆಲ್ಲಾ ಅನ್ನಿಸಿದ ತಕ್ಷಣ ನನಗೆ ಮತ್ತೆ ಭೂಮಿಗೆ ಹಿಂತಿರುಗಬೇಕು ಅನ್ನಿಸಿತು. ತಕ್ಷಣ ಐದು ಎಕರೆ ಜಾಗ ತಗೊಂಡೆ. ಐದು ಹತ್ತಾಯಿತು. ಹತ್ತು ಹದಿನೈದಾಯಿತು. ನಾನೂ ಒಬ್ಬ ರೈತನಾದೆ. ಹತ್ತು ಹನ್ನೆರಡು ವರ್ಷಗಳಿಂದ ಸಾವಿರಾರು ಮರಗಳ ಮಧ್ಯೆ ಬದುಕುತ್ತಿದ್ದೇನೆ. ಖುಷಿಯಿದೆ. ನೆಮ್ಮದಿಯಿದೆ.

ಮೊದಲು ನಿಮ್ಮ ಬದುಕು ಹೇಗಿತ್ತು, ಈಗ ಹೇಗಿದೆ?

ಪ್ರಕಾಶ್ ರಾಜ್ ಟ್ವಿಟ್ಟರ್ ಚಿತ್ರ: ಹೈದರಾಬಾದ್ ಬಳಿಯ ಫಾರ್ಮ್ ಹೌಸ್

ಅಪ್ಪ ಅಮ್ಮನಿಗಿದ್ದ ಭಯ ನಮಗೂ ಇರುತ್ತದೆ. ಅವರ ಕನಸುಗಳೂ ನಮ್ಮದಾಗಿರುತ್ತದೆ. ಅವರ ಪ್ರಕಾರ ನಾವು ಚೆನ್ನಾಗಿರಬೇಕು. ಚೆನ್ನಾಗಿರಬೇಕು ಅಂದ್ರೆ ಹೇಗೆ? ಒಂದೊಳ್ಳೆ ಕೆಲಸ ಇರಬೇಕು. ಶ್ರೀಮಂತರಾಗಬೇಕು. ಮನೆ ಕಟ್ಟಿಕೊಳ್ಳಬೇಕು. ಮೊದಲು ನಾನೂ ಹಾಗೇ ಅಂದುಕೊಂಡಿದ್ದೆ. ಅನಂತರ ಡಿಜಿಟಲ್ ಲೈಫ್ ಅನ್ನು ತನ್ನದಾಗಿಸಿಕೊಂಡೆ. ಕಂಪ್ಯೂಟರ್ ಬಳಸಲು ಶುರು ಮಾಡಿದೆ. ಟೆಲಿಫೋನ್‌ಗೆ ಅಡಿಕ್ಟ್ ಆದೆ. ಸಂಪೂರ್ಣವಾಗಿ ಡಿಜಿಟಲ್ ಆಗಿಹೋದೆ. ಒಂದಲ್ಲ ಒಂದು ಕ್ಷಣ ನಮ್ಮ ಬದುಕು ಅದಲ್ಲ ಅಂತನ್ನಿಸುತ್ತದೆ. ಹಾಗನ್ನಿಸಿದ ತಕ್ಷಣ ಮರಳಿ ಮಣ್ಣಿಗೆ ಬರಬೇಕು. ಆಗಲೇ ತೃಪ್ತಿ. ಯಾವುದೋ ಒಂದು ಹಂತದಲ್ಲಿ ಮನಸ್ಸಾಕ್ಷಿ ನಮ್ಮನ್ನು ಕೂರಿಸಿ ಸರಿಯಾದ ದಾರಿ ಹೇಳುತ್ತದೆ. ಅದನ್ನು ನಾವು ಕೇಳಿಸಿಕೊಳ್ಳಬೇಕು. ನಾನು ಕೇಳಿಸಿಕೊಂಡಿದ್ದೇನೆ ಅಂತ ಈಗನ್ನಿಸುತ್ತದೆ. ಭೂಮಿ ಜೊತೆ ಒಡನಾಟ. ಕೃಷಿ ಜೊತೆ ಖುಷಿ. ನೆಮ್ಮದಿ ಇದೆ. ಇದನ್ನು ನನ್ನ ಪುಣ್ಯ ಅನ್ನಬೇಕು. ನನಗೆ ಬೇಗ ಅರ್ಥ ಆಗಿದೆ. ಇಲ್ಲದಿದ್ದರೆ ೬೦-೭೦ ವರ್ಷ ಆದಾಗ ತೋಟ ಬೇಕು ಅನ್ನೋ ಆಸೆಯಾದರೆ ಯಾರೋ ಬೆಳೆಸಿದ ತೋಟವನ್ನು ಕೊಂಡುಕೊಳ್ಳಬೇಕಿತ್ತು. ಆದರೆ ನನ್ನದು ಭೂಮಿ ಜೊತೆ ೨೦-೩೦ ವರ್ಷಗಳ ಸಾಂಗತ್ಯ, ಪಯಣ. ನನಗೆ ಈ ಪಯಣ ತುಂಬಾ ಖುಷಿ ಕೊಟ್ಟಿದೆ.

ಬೆಳೆದ ಹಣ್ಣು, ತರಕಾರಿಗಳನ್ನು ಏನು ಮಾಡುತ್ತೀರಿ?

ನನ್ನ ತೋಟದಲ್ಲಿ ಎಂಟ್ಹತ್ತು ಕುಟುಂಬಗಳು ಕೆಲಸ ಮಾಡುತ್ತವೆ. ಅವರನ್ನು ಈ ಭೂಮಿಯೇ ಸಾಕುತ್ತದೆ. ನಾನು ವ್ಯಾಪಾರ ಮಾಡುವುದಕ್ಕೆ ತೋಟ ಮಾಡಿದ್ದಲ್ಲ. ಇಲ್ಲಿ ಬೆಳೆದಿದ್ದನ್ನು ಆಪ್ತರಿಗೆ ಹಂಚುತ್ತೇನೆ. ಈಗ ರುಚಿಯಾದ ಮಾವಿನ ಹಣ್ಣುಗಳ ಸೀಸನ್ನು. ಒಂದು ಚೆಂದದ ಬಾಕ್ಸ್ ಮಾಡಿ ಅದರಲ್ಲಿ ಮಾವಿನ ಹಣ್ಣುಗಳನ್ನಿಟ್ಟು ಆತ್ಮೀಯರಿಗೆ ಹಂಚಬೇಕು. ಹಂಚಿಕೊಂಡರೆ ಖುಷಿ ಜಾಸ್ತಿಯಾಗುತ್ತದೆ. ನಾನು ಸಿನಿಮಾರಂಗದಲ್ಲಿ ತುಂಬಾ ದುಡಿಯುತ್ತಿದ್ದೆ. ಆದರೆ ಕೃಷಿಯಿಂದ ಹತ್ತು ಸಾವಿರ ದುಡಿದರೂ ಖುಷಿಯಾಗುತ್ತದೆ.

ರೈತನ ಸಮಸ್ಯೆಗಳ ಬಗ್ಗೆ ನಿಮಗೆ ಏನನ್ನಿಸುತ್ತದೆ?

ರೈತನ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಒಬ್ಬ ರೈತನಾಗಿ ರೈತನ ಸಮಸ್ಯೆಗಳ ತುಂಬಾ ನೋವಿದೆ. ಈಗ ಎಲ್ಲರೂ ಹೇಳುವ ರೈತನ ಸಮಸ್ಯೆ ನೀರೊಂದೇ ಅಲ್ಲ. ಮನುಷ್ಯನ ದುರಾಸೆಯಿಂದಾಗಿ ಪ್ರಕೃತಿಯಲ್ಲಿ ತೇವಾಂಶ ಕಡಿಮೆಯಾಗಿದೆ. ಎಲ್ಲರೂ ಬಾವಿ, ಕೆರೆ, ಕಾಲುವೆಗಳನ್ನು ತೋಡುವುದು ಬಿಟ್ಟು ಬೋರ್‌ವೆಲ್ ಕೊರೆಯುತ್ತಾರೆ. ಅಂತರ್ಜಲ ಕಡಿಮೆಯಾಗಿದೆ. ನೀರು ಹರಿದು ಹೋಗುವುದಿಲ್ಲ. ಭೂಮಿಯಲ್ಲಿ ತೇವಾಂಶವೇ ಇಲ್ಲ. ಬೆಂಗಾಡಾಗಿ ಹೋಗಿದೆ. ಹಾಗಾಗಿ ಎಲ್ಲಾ ಕಡೆ ಹಾಹಾಕಾರ. ಜೀವನ ಕ್ರಮವೇ ಬದಲಾಗಿ ಹೋಗಿದೆ. ಹಾಗಾಗಿ ಪ್ರಕೃತಿ ಡಿಸ್ಟರ್ಬ್ ಆಗಿ ಹೋಗಿದೆ. ಮನುಷ್ಯ ಅನ್ನೋನು ಭೂಮಿಗೆ ಹುಟ್ಟಿದೋನು. ಎಲ್ಲರೂ ಭೂಮಿಗೆ ಕನೆಕ್ಟ್ ಆಗಬೇಕು. ಪಕ್ಕದಲ್ಲಿರುವವರಿಗೆ ಸಮಸ್ಯೆ ಆದಾಗ ಸ್ಪಂದಿಸೋದು ಧರ್ಮ. ರೈತನಿಗೆ ಸಮಸ್ಯೆಯಾದಾಗ ಇಡೀ ನಾಡು ಸ್ಪಂದಿಸಬೇಕು. ಅವನ ಸಮಸ್ಯೆ ನೀರೊಂದೇ ಅಲ್ಲ. ಸಾಲವಷ್ಟೇ ಅಲ್ಲ. ಅವನ ಆತ್ಮ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾದದ್ದು ಎಲ್ಲರ ಕರ್ತವ್ಯ. ಒಬ್ಬ ಶ್ರೇಷ್ಠ ಸಾಹಿತಿಯಷ್ಟೇ, ಶ್ರೇಷ್ಠ ವಿಜ್ಞಾನಿಯಷ್ಟೇ ರೈತನೂ ಕೂಡ ಶ್ರೇಷ್ಠ. ಶಿಕ್ಷಣದಿಂದ ಪದವಿ ಸಿಗುತ್ತದೆ. ಆದರೆ ಅನುಭವ ಜ್ಞಾನಿಯನ್ನಾಗಿ ಮಾಡುತ್ತದೆ. ನಾವು ಗಡಿಯಾರ ನೋಡಿ ಸಮಯ ಹೇಳುತ್ತೇವೆ. ಆದರೆ ರೈತ ಸೂರ್ಯನನ್ನು ನೋಡಿ ಸಮಯ ಹೇಳುತ್ತಾನೆ. ಜ್ಞಾನ ಅಂದ್ರೆ ಅದು.

ಇವತ್ತು ನಾವು ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಉಳಿಸಬೇಕು. ಅವೆಲ್ಲವನ್ನೂ ಮುಂದಿನ ತಲೆಮಾರಿಗೆ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಮುಂದೊಂದು ದಿನ ನಾವು ಇರದೇ ಹೋಗಬಹುದು. ಆದರೆ ಪ್ರಕೃತಿ ಇರುತ್ತದೆ. ನಾವು ನಮ್ಮ ದುರಹಂಕಾರದಿಂದ ಕಾಡನ್ನು ನಾಶ ಮಾಡುತ್ತಿದ್ದೇವೆ. ಆದರೆ ನಮಗೆ ಒಂದು ಹುಲ್ಲನ್ನು ಸೃಷ್ಟಿಸುವ ಶಕ್ತಿಯೂ ಇಲ್ಲ. ಕಾಡನ್ನು ಬೆಳೆಸುವ ಶಕ್ತಿ ಇಲ್ಲದವರಿಗೆ ಕಾಡನ್ನು ನಾಶಮಾಡುವ ಅಧಿಕಾರ ಯಾರು ಕೊಟ್ಟೋರು? ತಪ್ಪು ಮಾಡುತ್ತಿದ್ದೇವೆ. ಇವತ್ತಿನ ಪರಿಸ್ಥಿತಿಯಲ್ಲಿ ನಾವು ನಗರದಲ್ಲಿರುವವರು ಕೆಲಸ ಕಳೆದುಕೊಂಡು ಹಳ್ಳಿಗೆ ಹೋಗಿ ಮೂರು ತಿಂಗಳು ಇರುತ್ತೇವೆ ಅಂದ್ರೆ ರೈತ ಸಾಕುತ್ತಾನೆ. ಊಟ ಹಾಕುತ್ತಾನೆ. ಆದರೆ ಅದೇ ರೈತರು ಎದ್ದು ನಗರಕ್ಕೆ ಬಂದರೆ ಅವರನ್ನು ಸಾಕುವ ಶಕ್ತಿ ನಮಗಿದೆಯಾ? ಸಾಕ್ತೀರಾ ನೀವು?

ನಮ್ಮ ದೇಶದ ರೈತರು ಕಷ್ಟದಲ್ಲಿದ್ದಾರೆ. ರೈತರು ಕಷ್ಟದಲ್ಲಿದ್ದಾರೆ ಅಂದ್ರೆ ದೇಶ ತಪ್ಪುದಾರಿಯಲ್ಲಿ ಹೋಗ್ತಿದೆ ಅಂತರ್ಥ. ಇಡೀ ಸಮಾಜವೇ ಅಪಾಯದಲ್ಲಿದೆ ಎಂದರ್ಥ.

4 COMMENTS

 1. ನಿಜವಾದ ಜೀವನ ಇದೆ.
  ಪ್ರಕಾಶ್ ರೈ ಅವರ ಮನಸಿನ ಮಾತುಗಳು ನೂರಕ್ಕೆ ನೂರರಷ್ಟು ಸತ್ಯ.

  ಎಷ್ಟೋ ಜನರಿಗೆ ತಮ್ಮ ಮೂಲಕಸುಬಾದ ಕೃಷಿಯನ್ನು ಮುಂದುವರೆಸಬೇಕು ಎಂಬ ಮನಸ್ಸು ಇದೆ. ಆದರೆ ಹಲವು ಕಾರಣಗಳ ನೆಪವೊಡ್ಡಿ.. ಮುಂದುಡುತ್ತಾ ಬಂದಿರುತ್ತಾರೆ.

  ರೈ ಅವರು ಹೇಳಿದ ಹಾಗೆ.. ೬೦~೭೦ ವಯಸ್ಸಿನಲ್ಲಿ ಕೃಷಿ ಮಾಡಲೂ ಹೊರಟರೆ ಬೇರೆಯವರ ಶ್ರಮ ನಮ್ಮ ಹೆಸರು ಎಂಬತಾಗುತ್ತದೆ.

  ದೇಹ ಗಟ್ಟಿ ಇದ್ದಾಗಲೇ, ಕನಸಿನ ಕೃಷಿಯನ್ನು ಪ್ರಾರಂಭ ಮಾಡಿದರೆ ಆಗೊಂದು ತೃಪ್ತಿ ನಮ್ಮ ಜೀವನದಲ್ಲಿ ಉಳಿದು ಕೊಳ್ಳುತ್ತದೆ..

 2. In cinema it is called best actor, but as a former with nature one is a creator. The only one profession
  On this world which is pure, gentle, selfless, honest and great is farming, the oldest and long lasting as long as this world exists. JAI KISSAN. Rai is true.

 3. All those coming from agricultural backgrounds feel the same convulsions. The real problems of agriculture are such that they can’t be expressed in words or gestures it will have to be felt .

Leave a Reply