ಟೀಂ ಇಂಡಿಯಾ ಡ್ರೆಸಿಂಗ್ ರೂಂನಲ್ಲಿ ಗೊಂದಲ ಸೃಷ್ಟಿಸಿದ್ದ ಗಡ್ಡ! ರವೀಂದ್ರ ಜಡೇಜಾ ಹೊಸ ಲುಕ್ಕಿಗೆ ಕಾರಣ ಬಹಿರಂಗ

ಡಿಜಿಟಲ್ ಕನ್ನಡ ಟೀಮ್:

ಈ ಮೇಲಿನ ಚಿತ್ರ ನೋಡಿ… ಇತ್ತೀಚೆಗೆ ಆರ್ ಸಿಬಿ ಮತ್ತು ಗುಜರಾತ್ ಲಯನ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ತೆಗೆದ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಹೊಸ ಲುಕ್ ನೋಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಹಾಗೂ ಪ್ರವೀಣ್ ಕುಮಾರ್ ಹಾಸ್ಯ ಮಾಡುತ್ತಿದ್ದಾರೆ ಎಂದು ವದಂತಿಯೂ ಹರಿದಾಡಿತ್ತು.

ಇನ್ನು ಜಡೇಜಾ ಅವರು ತಮ್ಮ ಲುಕ್ ಬದಲಿಸಿಕೊಳ್ಳಲು ಪ್ರಮುಖ ಕಾರಣ, ಟೀಂ ಇಂಡಿಯಾ ಡ್ರೆಸಿಂಗ್ ರೂಂನಲ್ಲಿ ಗಡ್ಡದಿಂದ ಆಗಿದ್ದ ಗೊಂದಲವಂತೆ. ಈ ಎಲ್ಲದರ ಬಗ್ಗೆ ಸ್ವತಃ ರವೀಂದ್ರ ಜಡೇಜಾ ಸಂದರ್ಶನವೊಂದರಲ್ಲಿ ನಿಜಾಂಶವನ್ನು ಬಿಚ್ಚಿಟ್ಟಿದ್ದು, ಅದು ಹೀಗಿದೆ…

‘ಆರ್ ಸಿಬಿ ವಿರುದ್ಧದ ಮೊದಲ ಸುತ್ತಿನ ಪಂದ್ಯ ಆರಂಭಕ್ಕೂ ಮುನ್ನ ಈ ಫೋಟೊ ತೆಗೆದಿದ್ದು, ನನ್ನ ಹೊಸ ಲುಕ್ ನೋಡಿ ವಿರಾಟ್ ಕೊಹ್ಲಿ ನನ್ನನ್ನು ‘ರಜಪೂತ್’ ಎಂದು ಕರೆಯಲು ಆರಂಭಿಸಿದರು. ಭಾರತ ತಂಡದಲ್ಲಿ ನಾನು ಮತ್ತು ವಿರಾಟ್ ಕೊಹ್ಲಿ ಅಣ್ಣ ತಮ್ಮನಂತೆ ಇದ್ದೇವೆ. ಕೊಹ್ಲಿ ನನಗೆ ರಜಪೂತ ಅಂತ ಕರೆಯಲು ಆರಂಭಿಸಿದಾಗ ನನಗೆ ಹೆಮ್ಮೆಯೂ ಆಗುತ್ತದೆ. ಅವರು ನನ್ನನ್ನು ಯಾವಾಗಲು ಕಿಚಾಯಿಸುತ್ತಲೇ ಇರುತ್ತಾರೆ. ನಮ್ಮ ಸ್ನೇಹ ಬಾಂಧವ್ಯದಲ್ಲಿ ಇಂತಹ ತಮಾಷೆಗಳು ಸದಾ ನಡೆಯುತ್ತಲೇ ಇರುತ್ತವೆ.

ಇನ್ನು ನಾನು ಹೊಸ ಲುಕ್ ಪಡೆಯಲು ಕಾರಣ, ಟೀಂ ಇಂಡಿಯಾ ಡ್ರೆಸಿಂಗ್ ರೂಂನಲ್ಲಿ ಉಂಟಾಗಿದ್ದ ಗೊಂದಲ. ತಂಡದಲ್ಲಿ ಈಗ ಬಹುತೇಕ ಆಟಗಾರರು ಗಡ್ಡ ಬಿಟ್ಟಿದ್ದರು. ಹೀಗಾಗಿ ಎಲ್ಲರೂ ಒಂದೇ ರೀತಿ ಕಾಣುತ್ತಿದ್ದರು. ಇಂತಹ ಸಂದರ್ಭದಲ್ಲಿ ಒಮ್ಮೆ ನಾನು ಡ್ರೆಸಿಂಗ್ ರೂಂನಲ್ಲಿ ತಲೆ ಕೆಳಗೆ ಮಾಡಿಕೊಂಡು ಕುಳಿತಿದ್ದೆ. ಆಗ ತಂಡದ ಕೋಚ್ ಅನಿಲ್ ಕುಂಬ್ಳೆ ಅವರು ನನ್ನನ್ನು ಕೆ.ಎಲ್ ರಾಹುಲ್ ಎಂದು ಭಾವಿಸಿ ಕನ್ನಡದಲ್ಲಿ ಮಾತನಾಡಲು ಆರಂಭಿಸಿದ್ದರು. ಹೀಗಾಗಿ ಇಂತಹ ಗೊಂದಲಗಳು ಆಗಬಾರದು ಎಂದು ಹೊಸ ಲುಕ್ ಪಡೆಯಲು ನಿರ್ಧರಿಸಿದೆ.’

ರವೀಂದ್ರ ಜಡೇಜಾ ಅವರು ಹೀಗೆ ಗಡ್ಡ ತೆಗೆಸುತ್ತಿದ್ದಂತೆ ಟ್ವಿಟರ್ ನಲ್ಲಿ ಟೀಂ ಇಂಡಿಯಾ ಆಟಗಾರರು ಬ್ರೇಕ್ ದ ಬಿಯರ್ಡ್ (ಗಡ್ಡ ತೆಗೆಸುವುದು) ಎಂಬ ಸವಾಲನ್ನು ಒಬ್ಬರಿಗೊಬ್ಬರು ಹಾಕಿಕೊಂಡರು. ಪರಿಣಾಮ ರೋಹಿತ್ ಶರ್ಮಾ ಸೇರಿದಂತೆ ಇತರೆ ಆಟಗಾರರು ಗಡ್ಡ ತೆಗೆಸಿ ಹೊಸ ಲುಕ್ ಪಡೆದರು. ಆದರೆ ವಿರಾಟ್ ಕೊಹ್ಲಿ ಮಾತ್ರ ತನ್ನ ಗೆಳತಿ ಅನುಷ್ಕಾ ಶರ್ಮಾರ ಆದೇಶಕ್ಕೆ ತಲೆಬಾಗಿ ಈ ಸವಾಲು ಸ್ವೀಕರಿಸಲು ನಿರಾಕರಿಸಿದರು.

Leave a Reply