ಬುಕ್ ಮೈಶೋನಲ್ಲಿ ಬಾಹುಬಲಿ2 ದಾಖಲೆಯ ಟಿಕೆಟ್ ಮಾರಾಟ, ಹೊಸಪೇಟೆಯಲ್ಲಿ ಟಿಕೆಟ್ ಸಿಗದಕ್ಕೆ ಅಭಿಮಾನಿಯ ಹುಚ್ಚಾಟ!

ಡಿಜಿಟಲ್ ಕನ್ನಡ ಟೀಮ್:

ಬಹುನಿರೀಕ್ಷಿತ ಬಾಹುಬಲಿ2 ಚಿತ್ರದ ಟಿಕೆಟ್ ಗೆ ದೇಶದೆಲ್ಲೆಡೆ ಬಾರಿ ಬೇಡಿಕೆ ಹೆಚ್ಚಿದೆ. ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ, ಬಾಲಿವುಡ್ ಮಾರುಕಟ್ಟೆಯನ್ನು ಆವರಿಸಿ ಹಿಂದಿ ಭಾಷಿಗರ ಪ್ರದೇಶದಲ್ಲೂ ಬಾಹುಬಲಿಯ ಅಬ್ಬರ ಮುಗಿಲುಮುಟ್ಟಿದೆ. ಹೀಗಾಗಿ ಚಿತ್ರದ ಟಿಕೆಟ್ ಬೇಡಿಕೆ ಪ್ರಮಾಣ ಹೇಗಿದೆ ಎಂದರೆ, ಮುಂಗಡ ಟಿಕೆಟ್ ಖರೀದಿಯಲ್ಲಿ ಹೊಸ ದಾಖಲೆಯನ್ನು ಬರೆದಿರುವುದು ಒಂದೆಡೆಯಾದರೆ, ಹೊಸಕೋಟೆಯಲ್ಲಿ ಟಿಕೆಟ್ ಸಿಗದ ಕಾರಣ ಕೋಪಗೊಂಡ ಪ್ರಬಾಸ್ ಅಭಿಮಾನಿಯೊಬ್ಬ ಚಿತ್ರಮಂದಿರದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ.

ಕನ್ನಡ ಸೇರಿದಂತೆ ಇತರೆ ಪ್ರಾದೇಶಿಕ ಭಾಷೆಗಳ ಚಿತ್ರಗಳಿಂದ ಚಿತ್ರ ಮಂದಿರಗಳನ್ನು ಕಸಿದಿಕೊಂಡಿರುವ ಬಾಹುಬಲಿ2 ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧದ ಕೂಗು ಕೇಳಿಬಂದಿದ್ದರೂ ಚಿತ್ರದ ಓಟಕ್ಕೆ ಕಿಂಚಿತ್ತು ತೊಡಕಾಗಿಲ್ಲ. ಪರಿಣಾಮ ಚಿತ್ರ ಬಿಡುಗಡೆಯಾಗಿ ಕೇವಲ ಎರಡು ದಿನಗಳಷ್ಟೇ ಕಳೆದಿದ್ದರೂ ಬುಕ್ ಮೈಶೋ ವೆಬ್ ಸೈಟ್ 3.3 ಮಿಲಿಯನ್ ಮುಂಗಡ ಟಿಕೆಟ್ ಮಾರಾಟ ಮಾಡಿದೆ. ಈ ವೆಬ್ ಸೈಟ್ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ‘ಈ ವೆಬ್ ಸೈಟಿನಲ್ಲಿ ಈವರೆಗೂ ಮಾರಾಟವಾಗಿರುವ ಟಿಕೆಟ್ ಪ್ರಮಾಣವು, ಪ್ರತಿ ಸೆಕೆಂಡಿಗೆ 12 ಟಿಕೆಟ್ ಮಾರಾಟದ ಸರಾಸರಿ ಹೊಂದಿದೆ. ಈ ವೆಬ್ ಸೈಟಿನ ಮೂಲಕ ಅತಿ ಹೆಚ್ಚು ಮುಂಗಡ ಟಿಕೆಟ್ ಮಾರಾಟವಾದ ದಾಖಲೆಯನ್ನು ಬಾಹುಬಲಿ ಮೊದಲ ಭಾಗ ಹೊಂದಿತ್ತು. ಆದರೆ, ಆ ದಾಖಲೆಯನ್ನು 2ನೇ ಭಾಗ ಮೀರಿಸುವಲ್ಲಿ ಯಶಸ್ವಿಯಾಗಿದೆ. ಅದೂ ಶೇ.350ರಷ್ಟು ಹೆಚ್ಚು.

ಇನ್ನು ಹೊಸಕೋಟೆಯಲ್ಲಿನ ಅಭಿಮಾನಿಯೊಬ್ಬ ಎರಡು ದಿನವಾದರೂ ಚಿತ್ರ ನೋಡಲು ಟಿಕೆಟ್ ಸಿಗದಿದ್ದಕ್ಕೆ ಕೋಪಗೊಂಡು ಚಿತ್ರಮಂದಿರದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ. ಈತನ ಈ ಹುಚ್ಚಾಟಕ್ಕೆ ದಂಗಾದ ಚಿತ್ರಮಂದಿರ ಸಿಬ್ಬಂದಿ, ಭದ್ರತಾ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಆ ವ್ಯಕ್ತಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Leave a Reply