ಜಗದಗಲಕ್ಕೆ ಬಸವಣ್ಣ: ವಚನಗಳಿಗೆ ಡಿಜಿಟಲ್ ಸ್ಪರ್ಶ, 23 ಭಾಷೆಗಳಲ್ಲಿ ವಚನಗಳ ಪುಸ್ತಕ

ಡಿಜಿಟಲ್ ಕನ್ನಡ ಟೀಮ್:

ವಿಶ್ವಕ್ಕೆ ಮಾನವಾತವಾದವನ್ನು ತಮ್ಮ ವಚನಗಳ ಮೂಲಕ ಸಾರಿದ ಸಾಮಾಜಿಕ ಸುಧಾರಣೆಗಾರ ಬಸವಣ್ಣನವರ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 23 ಭಾಷೆಗಳಲ್ಲಿ ಬಸವಣ್ಣನವರ ವಚನಗಳ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಜತೆಗೆ ಈ ಪುಸ್ತಕಗಳ ಡಿಜಿಟಲ್ ಸ್ವರೂಪವನ್ನು ಉದ್ಘಾಟಿಸಿದರು.

ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿಯನ್ನು ಆಚರಿಸಲಾಗಿದ್ದು, ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಅವರು ಸ್ಥಾಪಿಸಿದ ಬಸವ ಸಮಿತಿಯ ಸುವರ್ಣ ಮಹೋತ್ಸವಕ್ಕೂ ಈ ಕಾರ್ಯಕ್ರಮ ವೇದಿಕೆಯಾಗಿದೆ.

ಇಂದು ಲೋಕಾರ್ಪಣೆಯದ ಬಸವಣ್ಣನವರ ವಚನ ಪುಸ್ತಕಗಳಲ್ಲಿ 2500 ವಚನಗಳಿದ್ದು, ಇದರ ಜತೆಗೆ 173 ಶರಣರ ವಚನಗಳ ಅನುವಾದದ ಪುಸ್ತಕ ಲೋಕಾರ್ಪಣೆಯಾಯಿತು. ಈ ವಚನಗಳ ಪುಸ್ತಕವನ್ನು ದಿವಂಗತ ಎಂಎಂ ಕಲಬುರ್ಗಿ ಅವರು ಸಂಪಾದನೆ ಮಾಡಿದ್ದು, ಸುಮಾರು 200ಕ್ಕೂ ಹೆಚ್ಚು ಮಂದಿ 23 ಭಾಷೆಗೆ ಅನುವಾದ ಮಾಡಿದ್ದಾರೆ. ಜಗತ್ತಿನ ಮೂಲೆ ಮೂಲೆಗೂ ಬಸವಣ್ಣನವರ ಸಂದೇಶ ತಲುಪಬೇಕು ಎಂಬ ಕಾರಣಕ್ಕೆ ಬೆಂಗಳೂರು ಮೂಲದ ಬಸವ ಸಮಿತಿ ₹ 2.5 ಕೋಟಿ ವೆಚ್ಚದಲ್ಲಿ ಈ ಪುಸ್ತಕಗಳನ್ನು ಹೊರ ತಂದಿದೆ. ಬಸವ ಸಮಿತಿಯ ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಸಹ ₹ 1 ಕೋಟಿ ಅನುದಾನ ನೀಡಿ ಪ್ರೋತ್ಸಾಹಿಸಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವಣ್ಣನವರ ವಚನಗಳ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದಿಷ್ಟು… ‘ಮಾನವತಾವಾದ, ಉತ್ತಮ ಆಡಳಿತ, ಅಹಿಂಸೆಯ ವಿಚಾರಧಾರೆಯನ್ನು ಲೋಕಕ್ಕೆ ಪಸರಿಸಿದ ಮಹಾನ್ ವ್ಯಕ್ತಿ ಬಸವಣ್ಣನವರು. ದೇಶದಲ್ಲಿ ಸಂಸತ್ ಕಲ್ಪನೆಯನ್ನು ಜಾರಿಗೆ ತಂದವರೇ ಬಸವಣ್ಣ. ಅನುಭವ ಮಂಟಪದಲ್ಲಿ ವಿಚಾರಕ್ರಾಂತಿಗೆ ಹೊಸ ರೂಪ ಕೊಟ್ಟವರು. ಭಾರತದ ಇತಿಹಾಸದಲ್ಲಿ ಇಂತಹ ಅನೇಕ ಮಹಾನ್ ವ್ಯಕ್ತಿಗಳು ಬಂದಿದ್ದಾರೆ. ಹೀಗಾಗಿ ಭಾರತದ ಇತಿಹಾಸ ಕೇವಲ ಸಂಘರ್ಷದ ಅಥವಾ ಸೋಲಿನ ಇತಿಹಾವನ್ನು ಹೊಂದಿಲ್ಲ. ಬದಲಿಗೆ ವಿಶ್ವಕ್ಕೆ ಮಾನವೀಯತೆ, ಅಹಿಂಸೆಯ ಸಂದೇಶಗಳನ್ನು ಸಾರಿದೆ.’

Leave a Reply