ವಿಶ್ವಮಟ್ಟದಲ್ಲಿ ಬಸವಣ್ಣ ಬ್ರಾಂಡಿಂಗ್ ಹೇಗೆ? ಪ್ರಧಾನಿ ಮೋದಿ ಕೊಟ್ಟ ಸುಳಿವೇನು?

ಡಿಜಿಟಲ್ ಕನ್ನಡ ಟೀಮ್:

ಯಾವುದೇ ವಿಚಾರವನ್ನು ಜನರ ಆಕರ್ಷಣೆಗೆ ದಕ್ಕುವಂತೆ ಬ್ರಾಂಡ್ ಮಾಡುವ ಕಲೆಯಲ್ಲಿ ಪ್ರಧಾನಿ ಮೋದಿ ಸಿದ್ಧಹಸ್ತರೆನ್ನುವುದನ್ನು ಅವರ ವಿರೋಧಿಗಳೂ ಒಪ್ಪಿಯಾರೇನೋ.

ದೆಹಲಿಯ ವಿಜ್ಞಾನಭವನದಲ್ಲಿ ಶನಿವಾರ ನಡೆದ ಬಸವ ಜಯಂತಿ ಸಂದರ್ಭದಲ್ಲೂ ತಮ್ಮ ಈ ಆಸಕ್ತಿಯನ್ನು ಮೋದಿ ಪ್ರಚುರಪಡಿಸಿದರು. ಜಗತ್ತು ಪ್ರಜಾಪ್ರಭುತ್ವ, ಸಮಾನತೆ ಎಂದೆಲ್ಲ ಯಾವಾಗ ಪರಿಕಲ್ಪನೆಗಳನ್ನು ಹೇಳುವುದಕ್ಕೆ ಶುರುಮಾಡಿತೋ ಅದಕ್ಕಿಂತ ಏಳ್ನೂರು ವರ್ಷಗಳ ಹಿಂದೆಯೇ ಬಸವೇಶ್ವರರ ವಚನಗಳಲ್ಲಿ ಆ ಎಲ್ಲ ವಿಚಾರಗಳು ಬಂದಿವೆ ಎಂಬುದನ್ನು ಪ್ರಧಾನಿ ತಮ್ಮ ಮಾತುಗಳಲ್ಲಿ ಹೇಳಿದ್ದರು. ಅನುಭವ ಮಂಟಪವು ಜಗತ್ತಿನ ಪ್ರಥಮ ಸಂಸತ್ತು ಅಂತಲೂ ಹೇಳಿದರು.

‘ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು, ಆಧುನಿಕ ಜಗದಲ್ಲೂ ಪ್ರಸ್ತುತವಾಗಿರುವ ಬಸವ ತತ್ವದ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಬೇಕು. ವರ್ಷವಿಡೀ ನಡೆಯುವ ಕಾರ್ಯಕ್ರಮವಾಗಿ ಇದನ್ನು ರೂಪಿಸಬೇಕು. ಅಂದರೆ ಜಿಲ್ಲೆಗಳಿಂದ ಹಿಡಿದು, ರಾಜ್ಯಮಟ್ಟ, ರಾಷ್ಟ್ರೀಯ ಸ್ತರ ಹಾಗೂ ಅಂತಾರಾಷ್ಟ್ರೀಯ ಹಂತದವರೆಗೆ ಈ ಸ್ಪರ್ಧೆ ಬೆಳೆಯುತ್ತ ಹೋಗಲಿ. ಈ ಪೀಳಿಗೆ ಬಸವಣ್ಣನವರ ಕೃತಿಗಳನ್ನು ಅಭ್ಯಸಿಸಿ ಇದರಲ್ಲಿ ಪಾಲ್ಗೊಳ್ಳುವಂತಾಗುತ್ತದೆ. ಅಲ್ಲದೇ ಜಗತ್ತಿನ ದೊಡ್ಡ ವ್ಯಕ್ತಿಗಳೆಲ್ಲ ತಮ್ಮ ಮಾತುಗಳಲ್ಲಿ ಯಾವ ಮಹತ್ತರ ಅಂಶ ಹೇಳಿ ಪ್ರಸಿದ್ಧರಾಗಿದ್ದಾರೋ ಅದೇ ಅಭಿವ್ಯಕ್ತಿಯನ್ನು ನೂರಾರು ವರ್ಷಗಳ ಹಿಂದೆಯೇ ಬಸವೇಶ್ವರರು ಹೇಳಿದ್ದಾರೆ ಎಂಬುದು ಲೋಕಕ್ಕೆ ತಿಳಿಯುವಂತಾಗಲಿ. ಈ ವಿಚಾರಗಳು ಹೇಗೆ ಇಂದಿಗೂ ಪ್ರಸ್ತುತ ಎಂಬುದು ಮನದಟ್ಟಾಗುತ್ತದೆ. ಇಲ್ಲದಿದ್ದರೆ ಮಹಾಪುರುಷರನ್ನು ನಾವು ಮರೆತೇ ಬಿಡುತ್ತೇವೆ’ ಎಂದಿರುವ ಪ್ರಧಾನಿ ಮೋದಿ, ಬಸವ ಸಮಿತಿ ಮುಖ್ಯಸ್ಥರಾದ ಅರವಿಂದ ಜತ್ತಿಯವರ ಕಡೆ ತಿರುಗಿ, ‘ಈ ಕಾರ್ಯ ನಿಮ್ಮಿಂದ ಖಂಡಿತ ಸಾಧ್ಯವಾಗುತ್ತದೆ’ ಎಂದರು.

Leave a Reply