ಬಿಲ್ ಗೇಟ್ಸ್ ಕಂಡ ಭಯಾನಕ ಭವಿಷ್ಯ: ಮನುಕುಲದ ಅಳಿವು ಜೈವಿಕ ಅಸ್ತ್ರಗಳಲ್ಲಿದೆ

ಬಿಲ್ ಗೇಟ್ಸ್ ಎಂದೊಡನೆ ಬಿಲಿಯನೇರ್ ಪಟ್ಟಿಯಲ್ಲಿ ಆತನ ಹೆಸರಿದ್ದೇ ಇರುತ್ತದೆ ಎಂಬುದು ತೀರ ಸಾಮಾನ್ಯ ಹೇಳಿಕೆ. ಆತ `ಮೈಕ್ರೋಸಾಫ್ಟ್’ ಸ್ಥಾಪಕ ಎಂಬುದು ಅಭಿಮಾನದ ಮಾತು. ಈಗ ಬಿಲ್ ಗೇಟ್ಸ್ ಏನು ಹೇಳಿಕೆ ಕೊಟ್ಟರೂ ಪ್ರತಿಕ್ರಿಯಿಸಿದರೂ ಅದನ್ನು ಜಗತ್ತು ಗಮನಿಸುತ್ತದೆ, ತೂಕ ಮಾಡುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ `ಸ್ವಚ್ಛ ಭಾರತ್’ ಯೋಜನೆಯನ್ನು ಮೆಚ್ಚಿ ಇದು ಆಗಬೇಕಾದ್ದೇ ಎಂದು ಶಹಭಾಸ್‍ಗಿರಿಯನ್ನು ಬಿಲ್ ಗೇಟ್ಸ್ ಕೊಟ್ಟಾಗ ಅದರ ಹಿಂದೆ ನಿಜವಾದ ಕಳಕಳಿ, ನೋವು ಇತ್ತು. `ಇಲ್ಲಿನ ಜನಾರೋಗ್ಯ ತುಂಬಾ ಕೆಳಮಟ್ಟದಲ್ಲಿದೆ, ಸುರಕ್ಷಿತವಲ್ಲದ ನೀರು ಕುಡಿದು ಜಗತ್ತಿನಾದ್ಯಂತ ಪ್ರತಿವರ್ಷ ಸಾಯುವ 1.7 ಮಿಲಿಯನ್ ಜನರ ಪೈಕಿ ಆರು ಲಕ್ಷ ಜನ ಇಂಡಿಯಾದವರೇ. `ಸ್ವಚ್ಛ ಭಾರತ್’ ಎನ್ನುವುದು ಕೇವಲ ಘೋಷಣೆಯಾಗಿರದೆ ಕಾರ್ಯರೂಪಕ್ಕಿಳಿದಿರುವ ಯೋಜನೆ ಎಂಬುದು ನನಗೆ ಸಮಾಧಾನ ತಂದಿದೆ’ ಎಂದಿದ್ದಾನೆ ಬಿಲ್ ಗೇಟ್ಸ್.

ಲಂಡನ್ನಿನ ರಾಯಲ್ ಯುನೈಟೆಡ್ ಸರ್ವೀಸ್, ಕಳೆದ ವಾರವಷ್ಟೇ ಬಿಲ್ ಗೇಟ್ಸ್ ರನ್ನು ಆಹ್ವಾನಿಸಿ ಉಪನ್ಯಾಸ ಕೊಡಲು ವಿನಂತಿಸಿದಾಗ, ಆತ ಆರಿಸಿಕೊಂಡ ವಿಷಯ ಮಾಹಿತಿ ತಂತ್ರಜ್ಞಾನವೂ ಅಲ್ಲ, ಕಂಪ್ಯೂಟರ್ ಸಾಕ್ಷರತೆಯೂ ಅಲ್ಲ, ಶತಕೋಟ್ಯಧೀಶನಾಗುವುದು ಹೇಗೆ ಎಂಬ ಸಲಹೆಯೂ ಆಗಿರಲಿಲ್ಲ. ಅದು ಮುಂದಿನ ಜೈವಿಕ ಯುದ್ಧದ ಸಾಧ್ಯತೆ ಕುರಿತು. ಇತಿಹಾಸದಲ್ಲಿ ದಾಖಲಾಗಿರುವಂತೆ `ವೇರಿಯೋಲ’ ಎನ್ನುವ ಸಿಡುಬು ತರುವ ವೈರಸ್ ಇಪ್ಪತ್ತನೆಯ ಶತಮಾನವೊಂದರಲ್ಲೇ ಜಗತ್ತಿನಾದ್ಯಂತ 300ರಿಂದ 500 ಮಿಲಿಯನ್ ಜನರನ್ನು ಕೊಂದಿತ್ತು. ವಿಶ್ವಸಂಸ್ಥೆ ಈ ಮಹಾ ಸಾಂಕ್ರಾಮಿಕ ಪಿಡುಗನ್ನು ಭೂಮಿಯಿಂದಲೇ ಉಚ್ಛಾಟಿಸಲು ಎಲ್ಲ ದೇಶಗಳಿಗೂ ಕರೆಕೊಟ್ಟಿತ್ತು. 1980ರಲ್ಲಿ ಇದು ನಿರ್ಮೂಲವಾಗಿದೆ ಎಂಬ ಘೋಷಣೆಯನ್ನೂ ಮಾಡಿತ್ತು. ಕೆಲವು ಸ್ಯಾಂಪಲ್‍ಗಳನ್ನು ಸುರಕ್ಷಿತ ಸಂಶೋಧನೆಗೆ ಎಂಬ ಏಕೈಕ ಕಾರಣಕ್ಕಾಗಿ ವಿಶ್ವಸಂಸ್ಥೆಯ ಸಮ್ಮತಿಯ ಮೇರೆಗೆ ಅಮೆರಿಕದ `ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್’ ಎಂಬ ಕೇಂದ್ರದಲ್ಲೂ ಮತ್ತು ರಷ್ಯಾದ `ವೈರಾಲಜಿ ರಿಸರ್ಚ್ ಸೆಂಟರ್’ನಲ್ಲೂ ಈಗ ಸುರಕ್ಷಿತವಾಗಿ ಇಟ್ಟಿದೆ.

ವೈರಸ್ ಕಣಗಳು.

ಬಿಲ್ ಗೇಟ್ಸ್ ಸ್ಪಷ್ಟವಾಗಿ ನಂಬಿರುವ ವಿಚಾರ ಒಂದಿದೆ. ಇಂದಿನ ಭಯೋತ್ಪಾದಕರೆಲ್ಲ ಸಾಮಾನ್ಯ ಜನರಲ್ಲ. ಬುದ್ಧಿವಂತರಷ್ಟೇ ಅಲ್ಲ, ಅತಿ ಬುದ್ಧಿವಂತರು. ಈ ಸ್ಥಿತಿಯಲ್ಲಿ ಸಿಡುಬಿನ ವೈರಸ್ ಅವರ ಕೈಗೆ ಸಿಕ್ಕುವುದಿಲ್ಲವೆಂದು ನಾವು ಧೈರ್ಯವಾಗಿ ಹೇಳುವುದಕ್ಕಾಗುತ್ತಿಲ್ಲ. ಜೈವಿಕ ತಂತ್ರಜ್ಞಾನ ಭರಾಟೆಯಿಂದ ಮುನ್ನುಗ್ಗುತ್ತಿರುವ ಈ ದಿನಗಳಲ್ಲಿ ಯಾವನೋ ತಲೆಕೆಟ್ಟವನು ಹೇಗೋ ಈ ವೈರಸ್ ಸಂಪಾದಿಸಿ ಛೂ ಬಿಟ್ಟರೆ ಇಡೀ ಭೂಮಂಡಲವೇ ನಡುಗಿ ಹೋಗುತ್ತದೆ. ನಾವು ನಿರ್ಲಕ್ಷ್ಯದಿಂದಿದ್ದರೆ ನಮ್ಮನ್ನು ಬಹುಬೇಗ ಅವರು ಮೂರ್ಖರನ್ನಾಗಿ ಮಾಡುತ್ತಾರೆ. ಹೇಳಿ ಕೇಳಿ ಇದು ಜಾಗತೀಕರಣ ಯುಗ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಅಷ್ಟೇ ಏಕೆ, ಖಂಡದಿಂದ ಖಂಡಕ್ಕೆ ಸುಲಭವಾಗಿ ಸಿಡುಬು ರೋಗಾಣುವನ್ನು ಹರಡುವಂತೆ ಮಾಡಬಹುದು. ವಿಮಾನ ಹಾರಾಟವಂತೂ ಈಗ ಬಹುತೇಕ ಎಲ್ಲ ದೇಶಗಳನ್ನೂ ಸಂಪರ್ಕಿಸುವ ಜಾಲವಾಗಿದೆ. ಸಿಡುಬಿಗೆ ಲಸಿಕೆ ಇದೆ ನಿಜ. ಆದರೆ ವೈರಸ್ ಹಬ್ಬುವ ಭರಾಟೆಯಷ್ಟು ಚಿಕಿತ್ಸೆಯ ಭರಾಟೆ ಇರುವುದಿಲ್ಲ. ವೈರಸ್ ದಾಳಿಯಿಂದ ಜಗತ್ತಿನಲ್ಲಿ ಚಿಕಿತ್ಸೆ ಕೊಡುವ ಮುನ್ನವೇ 30 ಮಿಲಿಯನ್ ಜನ ಇದಕ್ಕೆ ಬಲಿಯಾಗಬಹುದು. ಇದು ವಿಜ್ಞಾನಿಗಳ ಲೆಕ್ಕಕ್ಕೂ ತಾಳೆಯಾಗುತ್ತದೆ.

ವಾಸ್ತವವೆಂದರೆ ಪರಮಾಣು ಅಸ್ತ್ರದಿಂದ ದಾಳಿ ಮಾಡಿದಾಗಲೂ ಇಷ್ಟೊಂದು ಜನ ಸಾಯುವುದಿಲ್ಲ. `ವೇರಿಯೋಲ’ ವೈರಸ್ ನಿರೀಕ್ಷೆಗಿಂತಲೂ ಹೆಚ್ಚು ವೇಗದಲ್ಲಿ ಜಗತ್ತನ್ನು ಹಬ್ಬಬಲ್ಲದು. ಒಂದುವೇಳೆ ಭಯೋತ್ಪಾದಕರಿಗೆ `ವೇರಿಯೋಲ’ ವೈರಸ್ ಸಿಕ್ಕದಿದ್ದರೂ ಇಂದಿನ ಜೈವಿಕ ತಂತ್ರಜ್ಞಾನ ಬಳಸಿ ವೇರಿಯೋಲ ಸೃಷ್ಟಿಸುವುದು ಅಸಾಧ್ಯವೇನಲ್ಲ. ಜೈವಿಕ ತಂತ್ರಜ್ಞಾನ ಜಗತ್ತನ್ನು ಮುಂದಕ್ಕೆ ಒಯ್ಯಲೆಂದು ವಿಜ್ಞಾನಿಗಳು ರೂಪಿಸಿದ್ದು. ಆದರೆ ಸಮಾಜಕ್ಕೆ ಭೀತಿಯನ್ನು ತರಲೂ ಕೂಡ ಇದೇ ತಂತ್ರಜ್ಞಾನ ಕುಮ್ಮಕ್ಕು ಕೊಡುತ್ತದೆ. ಸೂಕ್ಷ್ಮಜೀವಿಯೊಂದರ ಡಿ.ಎನ್.ಎ. ಬದಲಾಯಿಸಿ ಅದನ್ನು `ವೇರಿಯೋಲ’ ಆಗಿ ಮಾಡುವುದು ಈ ದಿನಗಳಲ್ಲಿ ದೊಡ್ಡ ಸವಾಲೇ ಅಲ್ಲ. ಇಂಥ ತಂತ್ರವನ್ನು CRISPR (Clustered Regularly interspaced short palindromic repeates) ತಂತ್ರವೆಂದಿದ್ದಾರೆ. ಜೈವಿಕ ತಂತ್ರಜ್ಞಾನಕ್ಕೂ ಲಗ್ಗೆ ಹಾಕುವ ಭಯೋತ್ಪಾದಕರಿಗೆ ಇದನ್ನು ಸಾಧಿಸುವುದು ಸುಲಭ. ಮೇಲಾಗಿ ಅದು ತೀರ ಅಗ್ಗವೂ ಹೌದು. ಇವರಲ್ಲಿ ಯಾರೂ ಲ್ಯಾಬೋರೇಟರ್ ವಿಜ್ಞಾನಿಗಳಲ್ಲ. ಗ್ಯಾರೇಜ್ ತಂತ್ರಜ್ಞರು. ಅದಕ್ಕಾಗಿ ದೊಡ್ಡ ಜಾಗವೇನೂ ಬೇಕಾಗುವುದಿಲ್ಲ. ಸದ್ಯ ಜಗತ್ತು ಇನ್ನೂ ಒಂದು ಅಪಾಯದ ಮಟ್ಟವನ್ನು ಮುಟ್ಟಿದೆ. ಆನ್ ಲೈನಿನಲ್ಲಿ ನೂರು ಪೌಂಡ್ ಕೊಟ್ಟರೆ ಈಗ ಕೆಮಿಸ್ಟ್ರಿ ಕಿಟ್‍ಗಳು ದೊರೆಯುತ್ತಿವೆ. ಇದನ್ನು ಯಾರು ಹೇಗೆ ಬಳಸುತ್ತಾರೋ ಅದು ಊಹೆಗೆ ಬಿಟ್ಟದ್ದು. ಜೀನನ್ನು ಕತ್ತರಿಸಿ ಬೇಡವಾದ ಭಾಗವನ್ನು ಬಿಸುಡುವ `ಜೀನ್ ಎಡಿಟಿಂಗ್’ ನಮ್ಮನ್ನು ಯಾವ ಸ್ಥಿತಿಗೆ ಒಯ್ಯುತ್ತದೋ ತಿಳಿಯದು. ಕ್ಯಾನ್ಸರ್‍ನಂತಹ ಕಾಯಿಲೆ ಬರುವ ಮುನ್ನವೇ ಜೀನ್ ಎಡಿಟಿಂಗ್ ವರರೂಪಿಯಾಗಬಹುದು. ಹಾಗೆಯೇ ಈ ತಂತ್ರಜ್ಞಾನ ಭಯೋತ್ಪಾದಕರಿಗೂ ಒದಗಿಬರಬಹುದು. ಇನ್ನೊಂದು ಮಾತನ್ನು ಇಲ್ಲಿ ಹೇಳಬಹುದು. ಇ-ಕೋಲಿ ಬ್ಯಾಕ್ಟೀರಿಯಗೆ ಆ್ಯಂಟಿಯಬಾಟಿಕ್ಸ್ ಗೆ ನಿರೋಧಕತೆ ತೋರುವಂತಹ ಗುಣವನ್ನು ಇದೇ ಕೆಮಿಸ್ಟ್ರಿ ಕಿಟ್‍ನಿಂದ ಕಲಿಯಲೂ ಅವಕಾಶವಿದೆ.

ವೈರಸ್ ಸೋಂಕಿನ ಪರಿಣಾಮ.

`ನಾನು ಆಶಾವಾದಿ. ಎಲ್ಲದಕ್ಕೂ ಪರಿಹಾರವಿದೆ ಎಂದು ನಂಬಿದವನು. ಆದರೆ ಭವಿಷ್ಯದಲ್ಲಿ ಏನಾಗಬಹುದೆಂಬ ಪ್ರಜ್ಞೆಯೂ ನಮಗಿರಬೇಕು. ನಿಯಂತ್ರಣ ಮಾಡದಿದ್ದರೆ ಮುಂದಿನ 20 ವರ್ಷಗಳಲ್ಲಿ ಭಯೋತ್ಪಾದಕರು ಜೈವಿಕ ಸಮರದಲ್ಲಿ ತೊಡಗಿ ಜಗತ್ತನ್ನೇ ನಡುಗಿಸಬಹುದೆಂಬ ವಾಸ್ತವತೆಯನ್ನು ತಳ್ಳಿಹಾಕುವಂತಿಲ್ಲ. ಒಬ್ಬ ರೋಗಿ ಬಸ್ಸಿನಲ್ಲೋ, ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸಿದರೆ ಸಾಕು, ಸಾಂಕ್ರಾಮಿಕ ರೋಗಗಳು ಸುಲಭವಾಗಿ ಖಂಡಗಳಿಗೆ ಪ್ರವೇಶ ಪಡೆಯುತ್ತವೆ. `ವೇರಿಯೋಲ’ ವೈರಸ್ ನಿಜವಾಗಿಯೂ `ವೈರಲ್’ ಆಗಿಬಿಡುತ್ತದೆ. 1919ರಲ್ಲಿ ಫ್ಲೂ ಜಗತ್ತನ್ನು ಹೇಗೆ ಬಾಧಿಸಿತು ಎಂಬುದನ್ನು ನಾವು ಸುಲಭವಾಗಿ ಮರೆಯಲಾಗದು. ಎರಡು ಮಹಾಯುದ್ಧದಲ್ಲಿ ಮಡಿದವರಿಗಿಂತಲೂ ಫ್ಲೂಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು. ಜಗತ್ತಿನಾದ್ಯಂತ 50ದಶಲಕ್ಷ ಮಂದಿಯನ್ನು ಇದು ತ್ರಾಸವಿಲ್ಲದೆ ಕೊಂದಿತ್ತು. ಇದೆಲ್ಲ ನಮಗೆ ಪಾಠ ಕಲಿಸಬೇಕು. ಅಂದರೆ ಸಿದ್ಧತೆ ಮಾಡಿಕೊಳ್ಳಬೇಕು. ಇದು ಅಂತರಾಷ್ಟ್ರೀಯ ಸಹಕಾರದಿಂದ ಮಾತ್ರ ಸಾಧ್ಯ’ ಎನ್ನುತ್ತಾರೆ 85 ಶತಕೋಟಿ ಡಾಲರ್ ಒಡೆಯ ಬಿಲ್ ಗೇಟ್ಸ್. ಈತ ಜಗತ್ತಿನ ಹಿತಚಿಂತಕನೂ ಹೌದು. ಭವಿಷ್ಯದಲ್ಲಿ ಎರಗುವ ಸಾಂಕ್ರಾಮಿಕ ರೋಗಗಳ ಕುರಿತು ಈಗಲೇ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಾಗಿ ಟ್ರಸ್ಟ್ ಸ್ಥಾಪಿಸಿ ಅಲ್ಲಿ ವಿಜ್ಞಾನಿಗಳು ಗಂಭೀರ ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಂಡಿರುವುದು ಮೈಕ್ರೋ ಸಾಫ್ಟ್ ಕಂಪನಿ ಸ್ಥಾಪಿಸಿದ್ದಕ್ಕಿಂತಲೂ ದೊಡ್ಡ ಸಂಗತಿ.

Leave a Reply