ಮಿಲಿಟರಿ ಅಂದರೆ ಶಸ್ತ್ರವಷ್ಟೇ ಅಲ್ಲ, ಭಾರತೀಯ ಯೋಧರಿಂದ ಚೀನೀ ಭಾಷೆ ಶಾಸ್ತ್ರಾಭ್ಯಾಸ!

ಸಾಂದರ್ಭಿಕ ಚಿತ್ರ

ಡಿಜಿಟಲ್ ಕನ್ನಡ ಟೀಮ್:

‘ಗುಪ್ತಚರ ಇಲಾಖೆಯ ಮಾಹಿತಿ ಸಂಗ್ರಹಣೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ನೇಮಕವಾಗಿರುವ ಸೈನಿಕರಿಗೆ ಅನುಕೂಲವಾಗುವ ಸಲುವಾಗಿ ಭಾರತೀಯ ಯೋಧರಿಗೆ ಚೀನಾ ಭಾಷೆಯನ್ನು ಕಲಿಸಲು ನಿರ್ಧರಿಸಲಾಗಿದೆ…’ ಹೀಗೊಂದು ಮಾಹಿತಿಯನ್ನು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ನೀಡಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

ಭಾರತೀಯ ಸೈನಿಕರು ಚೀನಾ ಭಾಷೆ ಕಲಿಯುವುದು ಎಲ್ಲಿ? ಎಂದು ಸಹಜವಾಗಿ ಉದ್ಭವಿಸುವ ಪ್ರಶ್ನೆಗೆ ಸಿಗುವ ಉತ್ತರ, ‘ಚೀನಾ ಭವನ’. ಹೌದು, ಭಾರತ ಮತ್ತು ಚೀನಾ ನಡುವಣ ಸಂಬಂಧದ ಸಂಕೇತವಾಗಿ ಪಶ್ಚಿಮ ಬಂಗಾಳದ ವಿಶ್ವ ಭಾರತಿ ಎಂಬ ಪ್ರದೇಶದಲ್ಲಿರುವ ಚೀನಾ ಭವನದಲ್ಲಿ ಸೈನಿಕರಿಗೆ ಚೀನಾ ಭಾಷೆ ಕಲಿಸಲು ನಿರ್ಧರಿಸಲಾಗಿದೆ. ಕಳೆದ ಎಂಟು ದಶಕಗಳಿಂದ ಉಭಯ ರಾಷ್ಟ್ರಗಳ ನಡುವಣ ಸ್ಮಾರಕವಾಗಿರುವ ಈ ಚೀನಾ ಭವನ ಈಗ ಭಾರತೀಯ ಯೋಧರಿಗೆ ಶಾಲೆಯಾಗುತ್ತಿದೆ. ಈ ಬಗ್ಗೆ ಸೇನೆಯ ಪೂರ್ವ ವಿಭಾಗದ ಹಿರಿಯ ಅಧಿಕಾರಿ ನೀಡಿರುವ ಮಾಹಿತಿ ಹೀಗಿದೆ…

‘ಅರುಣಾಚಲ ಪ್ರದೇಶ ಸೇರಿದಂತೆ ಚೀನಾ ಗಡಿ ಪ್ರದೇಶ ಅಭಿವೃದ್ಧಿಯಾಗುತ್ತಿರುವ ಬೆನ್ನಲ್ಲೇ ಇಲ್ಲಿ ಸಿಗುವ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ಭಾರತೀಯ ಸೈನಿಕರಿಗೆ ಚೀನಾ ಭಾಷೆ ಗೊತ್ತಿರಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ವೇಳೆ ಯೋಧರಿಗೆ ಒಂದು ವರ್ಷಗಳ ಅವಧಿಯ ಸರ್ಟಿಫಿಕೇಟ್ ಕೋರ್ಸು ನಡೆಸುವ ಪ್ರಸ್ತಾವನೆಯನ್ನು ಚೀನಾ ಭವನ ನಮಗೆ ನೀಡಿತ್ತು. ಇದಕ್ಕೆ ನಾವು ಸಹ ಒಪ್ಪಿಗೆ ನೀಡಿದ್ದು, ಸೈನಿಕರಿಗೆ ಚೀನಾ ಭವನದಲ್ಲಿ ಆ ಭಾಷೆ ಕಲಿಸಲಾಗುವುದು. ಇದೇ ಮೊದಲ ಬಾರಿಗೆ ಚೀನಾ ಭವನದಲ್ಲಿ ಸೈನಿಕರಿಗೆ ಚೀನಾ ಹೇಳಿಕೊಡಲಾಗುತ್ತಿದೆ.’

ಇನ್ನು ಮೂಲಗಳ ಪ್ರಕಾರ ಭಾರತೀಯ ಸೇನೆ ಈಗಾಗಲೇ ಚೀನಾ ಭಾಷೆ ಕಲಿಕೆಯ ಲ್ಯಾಬೊರೇಟರಿಯನ್ನು ಸಿದ್ಧಪಡಿಸಿದೆ. ವಿಶ್ವ ಭಾರತಿಯಲ್ಲಿರುವ ಚೀನಾ ಬೋಧಕರು ಯೋಧರಿಗೆ ಚೆನ್ನಾಗಿ ಚೀನಿ ಭಾಷೆ ಕಲಿಸುವ ವಿಶ್ವಾಸ ಸೇನೆಯದ್ದಾಗಿದೆ.

ಅಂದಹಾಗೆ, ಶಾಂತಿನಿಕೇತನದಲ್ಲಿ ಚೀನಾ ಭವನವನ್ನು 1937ರಲ್ಲಿ ಆರಂಭಿಸಿದವರು ಟ್ಯಾಗೋರರು. 1924ರಲ್ಲಿ ಅವರು ಚೀನಾ ಪ್ರವಾಸ ಮಾಡಿದ ನಂತರ ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಅರಿವು ಹೆಚ್ಚಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಿದ್ದರು.

Leave a Reply