ದೆಹಲಿಯಲ್ಲಿ ಯಡಿಯೂರಪ್ಪ: ಅಪ್ಡೇಟಿಗಷ್ಟೇ ಸೀಮಿತ ಬಿಜೆಪಿ ಕದನ, ಕೇಂದ್ರ ನಾಯಕತ್ವವೇಕೆ ಇಲ್ಲಿ ನಿಧಾನ?

ಡಿಜಿಟಲ್ ಕನ್ನಡ ವಿಶೇಷ:

ಬಸವ ಜಯಂತಿ ಪ್ರಯುಕ್ತ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಶನಿವಾರ ಯಡಿಯೂರಪ್ಪನವರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ತಾವು ಭಾಷಣ ಆರಂಭಿಸುತ್ತಿದ್ದಾಗ ವೇದಿಕೆಯ ಮೇಲಿನ ಎಲ್ಲರ ಹೆಸರನ್ನು ಉಲ್ಲೇಖಿಸುತ್ತ, ಬಿಎಸ್ವೈ ಹೆಸರನ್ನು ಉಲ್ಲೇಖಿಸಿದಾಗ ಜೋರು ಚಪ್ಪಾಳೆಯೂ ಬಿತ್ತು.

ಇದೇನೇ ಇದ್ದರೂ ಹೈಕಮಾಂಡಿನ ಜತೆ ಮಾತುಕತೆಯಲ್ಲಿ ಆಗಿರುವುದೇನು? ಜಗ್ಗಾಟ ಎಂದಿನಂತೆ ಮುಂದುವರಿಯುವುದು ಬಿಟ್ಟರೆ ತಕ್ಷಣಕ್ಕೆ ಕೇಂದ್ರ ನಾಯಕರು ನಿರ್ಣಾಯಕ ಸೂಚನೆ ನೀಡುವುದು ದುರ್ಲಭವೇ. ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಅವರು ಬಿಜೆಪಿ ಒಳಜಗಳವನ್ನು ನಿಭಾಯಿಸಲಿದ್ದಾರೆ. ನಂತರ ಮಾಮೂಲಿನಂತೆ ರಾಜ್ಯದ ಉಸ್ತುವಾರಿ ಹೊತ್ತ ಮುರಳಿಧರರಾವ್ ಅವರಿಗೆ ವರದಿ ಸಲ್ಲಿಸುವುದು.

ಕೇಂದ್ರದಲ್ಲಿ ದೃಢ ನಾಯಕತ್ವವೆಂದು ಬಿಂಬಿತವಾಗಿರುವ ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಕರ್ನಾಟಕದ ವಿಚಾರದಲ್ಲಿ ಎಲ್ಲ ಬಣಗಳ ಆಟವನ್ನೂ ಏಕೆ ನೋಡಿಕೊಂಡಿದೆ? ಕಾರಣವಿಷ್ಟೆ. ಉತ್ತರ ಭಾರತದಲ್ಲಿ ಜಾತಿ ರಾಜಕಾರಣ ಸಮೀಕರಣಗಳನ್ನು ಬೇರೆ ಬೇರೆ ಕಾರಣಗಳಿಂದ ದಾಟಿಬಿಟ್ಟಿರುವ ಬಿಜೆಪಿಗೆ, ದಕ್ಷಿಣದ ಸಂದರ್ಭದಲ್ಲಿ ಹಾಗೆ ಮೀರುವ ವಿಶ್ವಾಸ ಇನ್ನೂ ಮೂಡಿಲ್ಲದಿರುವುದು ಸ್ಪಷ್ಟ. ಯಾವ ವ್ಯತ್ಯಾಸದಿಂದ ಯಾವ ಸಮುದಾಯ ದೂರವಾಗುವುದೋ ಎಂಬ ಆತಂಕ ಇದೆ.

ಹಾಗಾದರೆ ಬಹಳಷ್ಟು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಆರೆಸ್ಸೆಸ್ ಬೇರಿನವರನ್ನೋ ಮುಖ್ಯವಾಗಿ ಸಂತೋಷ್ ಅಂಥವರನ್ನು ಮುಖ್ಯಮಂತ್ರಿಯಾಗಿಸುವ ಕಾರ್ಯಸೂಚಿ ಇದೆಯೇ? ಸಾಮಾಜಿಕ ಮಾಧ್ಯಮಗಳ ರಂಗೇರಿದ ಚರ್ಚೆ ಏನೇ ನಂಬಿಸಲು ಹೊರಟಿದ್ದರೂ ಅಂಥದ್ದೆಲ್ಲ ಕಟ್ಟರ್ ಕಾರ್ಯಸೂಚಿಗಳು ಇದ್ದಂತಿಲ್ಲ. ಆದರೆ ಮುಖ್ಯಮಂತ್ರಿಯಾಗುವವರು ಸಂಘಟನೆಯ ಹಿಡಿತದಲ್ಲಿ ಭದ್ರವಾಗಿರಬೇಕೆಂದು ಆರೆಸ್ಸೆಸ್-ಬಿಜೆಪಿ ಅಗ್ರ ನಾಯಕತ್ವ ಬಯಸುತ್ತಿದೆ ಎಂಬುದರಲ್ಲಿ ಸಂಶಯವೇ ಬೇಡ. ಇದಕ್ಕೆ ವ್ಯತಿರಿಕ್ತವಾಗಿ ಬಿಎಸ್ವೈ ಕಡೆಯಿಂದ ಮತ್ತದೇ ರೇಣುಕಾಚಾರ್ಯ, ಬಿಜೆ ಪುಟ್ಟಸ್ವಾಮಿ ಇಂಥ ಮುಖಗಳು ಕಾಣುತ್ತಿರುವುದು ಅಡ್ಡಿ ಬರುತ್ತಿದೆಯೇ ಹೊರತು, ಮುಖ್ಯಮಂತ್ರಿ ಸ್ಥಾನಕ್ಕೆ ಇನ್ಯಾರನ್ನೋ ತಂದು ಬಿಡಬೇಕೆಂಬ ಉಮೇದು, ದಕ್ಷಿಣ ಭಾರತದಲ್ಲಿ ಅಸ್ತಿತ್ವವೇ ಗಟ್ಟಿಯಿರದ ಈ ಹಂತದಲ್ಲಿ ಬಿಜೆಪಿ ಅಗ್ರ ನಾಯಕತ್ವಕ್ಕಿದೆ ಎಂಬುದನ್ನು ನಂಬುವುದಕ್ಕೆ ಕಷ್ಟ. ಹೀಗಾಗಿ ಯಡಿಯೂರಪ್ಪನವರು ಈಶ್ವರಪ್ಪ ಬಣದ ಮಾತು ಕೇಳುವಂತೆ ನಿರ್ದೇಶಿಸುವ ದರ್ದೇನೂ ಕೇಂದ್ರ ನಾಯಕತ್ವಕ್ಕಿರದಿದ್ದರೂ, ಸಂಘಟನೆ ಹೊರತಾದ ಏಕವ್ಯಕ್ತಿ ಪ್ರದರ್ಶನವನ್ನು ಪೋಷಿಸುವ ಸಹನೆಯಂತೂ ಇಲ್ಲ. ಹಾಗೆಂದೇ ಅದು ಪರಿಸ್ಥಿತಿಯನ್ನು ಕಾಯಲು ಬಿಡುತ್ತಿದೆ.

ಕೆಲ ಪತ್ರಕರ್ತರೊಂದಿಗೆ ಶನಿವಾರ ಯಡಿಯೂರಪ್ಪ ಅವರು ಮಾತಾಡಿರುವ ಧಾಟಿ ಸಹ ಸಧ್ಯಕ್ಕೆ ‘ಒಂದೇಟು ಎರಡು ತುಂಡು’ ಎಂಬಂಥ ನಿರ್ಣಯಗಳೇನೂ ಬರಲಾರವೆಂಬುದನ್ನು ಸಾರುತ್ತಿದೆ.

ಪಕ್ಷದೊಳಗಿನ ಭಿನ್ನಮತಕ್ಕೆ ಸಂತೋಷ್ ಅವರೇ ಕಾರಣರೇ ಎಂಬ ಪ್ರಶ್ನೆಯನ್ನು ಮತ್ತೆ ಕೇಳಿದಾಗ ಬಿಎಸ್ವೈ ಉತ್ತರ- ‘ ಹಾಗೇನಿಲ್ಲ. ನನಗೆ ಈಗಲೂ ಅವರು ಆಪ್ತರು. ಆದರೆ ಇದನ್ನೆಲ್ಲ ಅವರು ತಪ್ಪಿಸಬಹುದಿತ್ತು ಎಂಬ ನೋವಿದೆ.

‘ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಹೇಳಿದ ಮಾತಿಗೆ ಪೂರಕವಾಗಿ ನೀವು ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರ ಪಟ್ಟಿಯನ್ನು ಪರಿಷ್ಕರಿಸಿಲ್ಲ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ ಎಂಬ ಮಾತಿಗೆ ಪ್ರತಿಯುತ್ತರ ನೀಡಿದ ಅವರು, ‘ಇದು ಸರಿಯಲ್ಲ. ಹಾಗೇನಾದರೂ ಇದ್ದರೆ ಅದನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬಹುದಿತ್ತೇ ಹೊರತು ಹೀಗೆ ಬಹಿರಂಗವಾಗಿ ಮನಬಂದಂತೆ ನಡೆದುಕೊಳ್ಳಬಾರದಿತ್ತು’ ಎಂದರು.

Leave a Reply