ಗಲ್ಲಾಪೆಟ್ಟಿಗೆಯಲ್ಲೂ ಬಾಹುಬಲಿ2 ಅಬ್ಬರ! ಆರಂಭಿಕ ದಿನದ ಗಳಿಕೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ತಂತ್ರಜ್ಞಾನ, ಚಿತ್ರ ನಿರ್ಮಾಣ, ಹವಾ ಹೀಗೆ ಎಲ್ಲ ವಿಧದಲ್ಲೂ ಒಂದು ಬೆಂಚ್ ಮಾರ್ಕ್ ಸೃಷ್ಟಿಸುತ್ತಾ ಸಾಗುತ್ತಿದ್ದು, ಈಗ ಮೊದಲ ದಿನದ ಗಳಿಕೆಯಲ್ಲೂ ತನ್ನ ಅಬ್ಬರ ಮುಂದುವರಿಸಿದೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೇಳಿದರೆ ನೀವು ಶಾಕ್ ಆಗೋದ್ರಲ್ಲಿ ಅನುಮಾನವೇ ಇಲ್ಲ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈವರೆಗೆ ಯಾವ ಸಿನಿಮಾ ಕೂಡ ಮಾಡದೇ ಇರುವ ಸಾಧನೆ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಸಿನಿಮಾ ಮಾಡಿದೆ.
ಭಾರತದ ಚಿತ್ರಮಂದಿರಗಳಲ್ಲಿನ ಒಟ್ಟಾರೆ ಹಣಗಳಿಕೆ ಪ್ರಮಾಣ ಈಗ ಹೊರ ಬಿದ್ದಿದ್ದು, ಮೊದಲ ದಿನ ಈ ಚಿತ್ರದ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿ ತುಳುಕಿದ ಮೊತ್ತ ₹ 121 ಕೋಟಿ! ಹೌದು, ಇದು ಭಾರತದಲ್ಲಿನ ಕಲೆಕ್ಷನ್ ಮೊತ್ತ. ಆ ಪೈಕಿ ತೆಲುಗು ಹಾಗೂ ಆಂಧ್ರಪ್ರದೇಶಗಳಲ್ಲೇ ಮೊದಲ ದಿನ ₹ 53 ಕೋಟಿ ಗಳಿಕೆಯಾಗಿದೆ. ಉಳಿದಂತೆ ತಮಿಳುನಾಡಿನಲ್ಲಿ ತಮಿಳು ಡಬ್ ಆದ ಬಾಹುಬಲಿ ₹ 12 ಕೋಟಿ ಗಳಿಕೆಮಾಡಿದ್ದು, ಬೆಳಗಿನ ಆಟಕ್ಕೆ ಅಡ್ಡಿ ಎದುರಾಗದಿದ್ದರೆ ಇದರ ಪ್ರಮಾಣ ಮತ್ತಷ್ಟು ಏರಿಕೆಯಾಗುತ್ತಿತ್ತು. ಇನ್ನು ಮಲೆಯಾಳಂನಲ್ಲಿ ₹ 7 ಕೋಟಿ ಹಾಗೂ ಹಿಂದಿಯಲ್ಲಿ 41 ಕೋಟಿ ಬಾಚಿಕೊಂಡಿದೆ. ಆ ಮೂಲಕ ಬಾಲಿವುಡ್ ನಲ್ಲಿ ಪ್ರೇಮ್ ರತನ್ ಧನ್ ಪಾಯೋ ಚಿತ್ರದ ₹ 40.35 ಕೋಟಿಯ ದಾಖಲೆಯನ್ನು ಅಳಿಸಿದೆ.
ಇವಿಷ್ಟೂ ಭಾರತದಲ್ಲಿನ ಬಾಹುಬಲಿಯ ಕಲೆಕ್ಷನ್ ಮಾಹಿತಿ. ಬಾಹುಬಲಿ ಕೇವಲ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನ ಅಬ್ಬರ ಮುಂದುರಿಸಿದ್ದು, ಅಮೆರಿಕ ಒಂದರಲ್ಲಿ 1400 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತ್ತು. ಶುಕ್ರವಾರ ಬಿಡುಗಡೆಯಾದ ಬಾಹುಬಲಿ ಮೊದಲ ದಿನದ ಕಲೆಕ್ಷನ್ 2.5 ಮಿಲಿಯನ್ ಡಾಲರ್. ಅಂದರೆ ಸುಮಾರು ₹ 16 ಕೋಟಿಯಷ್ಟು.
ಬಾಲಿವುಡ್ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.. ಎಲ್ಲರೂ ಮೊದಲ ದಿನ 100 ಕೋಟಿ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು, ಬಾಹುಬಲಿ ಅದನ್ನೂ ಮೀರಿ ಮುನ್ನುಗ್ಗುವ ಮೂಲಕ ಭಾರತದ ಇತಿಹಾಸದಲ್ಲಿ ಚಾರಿತ್ರಿಕ ದಾಖಲೆ ನಿರ್ಮಾಣ ಮಾಡಿದ್ದಾನೆ ಎಂದಿದ್ದಾರೆ.  ಇದೇ ವೇಳೆ ಇತ್ತೀಚಿಗೆ ಗಳಿಕೆಯಲ್ಲಿ ದಾಖಲೆ ನಿರ್ಮಿಸಿದ್ದ ಬಾಲಿವುಡ್ ನ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾದ ದಾಖಲೆ ಮುರಿದುಬಿದ್ದಿದೆ.
ಹಿಂದಿ ಮಾರುಕಟ್ಟೆಯ ಹೊಣೆ ನಿರ್ವಹಿಸಿಕಂಡಿರುವ ಚಿತ್ರ ತಯಾರಕ ಕರಣ್ ಜೋಹರ್ ಬಾಹುಬಲಿ ಚಿತ್ರದ ಯಶಸ್ಸಿನ ಸಂಭ್ರಮವನ್ನು ಟ್ವಿಟರ್ ಮೂಲಕ ವ್ಯಕ್ತಪಡಿಸಿದ್ದು ಹಿಗೆ.. ‘ಯಾರೂ ಊಹೆ ಮಾಡಲಾಗದ ಮಟ್ಟದಲ್ಲಿ ಬಾಹುಬಲಿ ಯಶಸ್ಸು ಕಂಡಿದೆ. ಹಿಂದಿಯಲ್ಲಿ 41 ಕೋಟಿ, ತೆಲುಗು, ತಮಿಳು, ಮಲೆಯಾಳಂನಲ್ಲಿ ₹ 80 ಕೋಟಿ. ಒಟ್ಟಾರೆ ₹ 121 ಕೋಟಿ ಗಳಿಕೆ ಮಾಡಿರುವ ಬಾಹುಬಲಿ, ಇತಿಹಾಸ ನಿರ್ಮಿಸಿದೆ.’

Leave a Reply