ಬಿಜೆಪಿ ಹೈಕಮಾಂಡ್ ನಿಂದ ಇಬ್ಬಣಗಳಿಗೂ ಎರಡೆರಡೇಟು, ಸಂಘಟನೆಗಿಂತ ಯಾರೂ ದೊಡ್ಡವರಲ್ಲವೆಂಬ ಸಂದೇಶ ರವಾನೆಯಾಯ್ತು

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಬಿಜೆಪಿ ಉಪಾಧ್ಯಕ್ಷರುಗಳಾದ ಭಾನುಪ್ರಕಾಶ್, ನಿರ್ಮಲ್ ಕುಮಾರ್, ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ ರೇಣುಕಾಚಾರ್ಯ ಹಾಗೂ ರಾಜ್ಯ ವಕ್ತಾರ ಗೋ.ಮಧುಸೂದನ್ ಅವರನ್ನು ಪಕ್ಷದ ಪ್ರಮುಖ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಆ ಮೂಲಕ ಇತ್ತೀಚಿನ ದಿನಗಳಲ್ಲಿ ರಾಜ್ಯ ಬಿಜೆಪಿಯ ಆಂತರಿಕ ಕಚ್ಚಾಟಕ್ಕೆ ಕಾರಣವಾಗಿದ್ದ ಕೆ.ಎಸ್ ಈಶ್ವರಪ್ಪ ಬಣಕ್ಕೂ ಹಾಗೂ ಬಿ.ಎಸ್ ಯಡಿಯೂರಪ್ಪನವರ ಬಣಕ್ಕೂ ಹೈಕಮಾಂಡ್ ಚುರುಕು ಮುಟ್ಟಿಸಿದೆ.

ಈ ಬಗ್ಗೆ ಭಾನುವಾರ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅಧಿಕೃತ ಹೇಳಿಕೆ ನೀಡಿದ್ದಾರೆ. ಎರಡೂ ಬಣಗಳಿಂದ ಇಬ್ಬರು ನಾಯಕರುಗಳನ್ನು ಪಕ್ಷದ ಪ್ರಮುಖ ಜವಾಬ್ದಾರಿಯಿಂದ ತೆಗೆದು ಹಾಕಿರುವ ಹೈ ಕಮಾಂಡ್, ತಾವು ಯಾರ ಪರವೂ ನಿಲ್ಲುವುದಿಲ್ಲ. ನಮ್ಮ ಆದೇಶ ಮೀರಿ ಬಹಿರಂಗವಾಗಿ ಜಗಳವಾಡಿ, ನಿಯಂತ್ರಣ ಮೀರಿದರೆ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ನಾಯಕರಿಗೆ ಎಚ್ಚರಿಕೆ ರವಾನಿಸಿದ್ದು, ರಾಜ್ಯ ಉಸ್ತುವಾರಿ ಹೊತ್ತಿರುವ ಮುರಳಿಧರ್ ರಾವ್ ಮೂಲಕ ಆಂತರಿಕ ಜಗಳವನ್ನು ಕೈಬಿಡುವಂತೆ ಸಂದೇಶ ಕಳುಹಿಸಿದ್ದಾರೆ. ‘ಪಕ್ಷದಲ್ಲಿನ ಆಂತರಿಕ ಬೆಳವಣಿಗೆ ಬಗ್ಗೆ ಬಹಿರಂಗವಾಗಿ ಹಾಗೂ ಮಾಧ್ಯಮಗಳ ಮುಂದೆ ಯಾರೂ ಮಾತನಾಡುವಂತಿಲ್ಲ. ಅಲ್ಲದೆ ಪಕ್ಷದಲ್ಲಿ ಪದೇ ಪದೇ ಭಿನ್ನಾಭಿಪ್ರಾಯ ಉದ್ಭವಿಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ’ ಎಂಬುದು ಅಮಿತ್ ಶಾ ಅವರ ಎಚ್ಚರಿಕೆ.

ರಾಷ್ಟ್ರೀಯ ಅಧ್ಯಕ್ಷರು ಪಕ್ಷದಲ್ಲಿನ ಆಂತರಿಕ ವಿಷಯವನ್ನು ಬಹಿರಂಗವಾಗಿ ಮಾತನಾಡಬೇಡಿ ಎಂದು ಸಂದೇಶ ರವಾನಿಸಿದ್ದರೂ ಈಶ್ವರಪ್ಪ ಮಾತ್ರ ಯಡಿಯೂರಪ್ಪನವರ ವಿರುದ್ಧದ ಟೀಕೆ ಮುಂದುವರಿಸಿದ್ದಾರೆ. ತುಮಕೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಈಶ್ವರಪ್ಪ, ಹೇಳಿದಿಷ್ಟು… ‘ಅನೇಕ ವರ್ಷಗಳಿಂದಲೂ ಯಡಿಯೂರಪ್ಪನವರು ನನ್ನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುತ್ತಾ ಬಂದಿದ್ದಾರೆ. ಅದರೆ ಅದು ಸಾಧ್ಯವಿಲ್ಲ. ಯಡಿಯೂರಪ್ಪನವರು ಪಕ್ಷ ಬಿಟ್ಟು ಹೋದಾಗ ನಾನು ಮಂತ್ರಿ ಪದವಿಯನ್ನು ತ್ಯಜಿಸಿ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಹೊತ್ತಿದ್ದೆ. ಹೀಗಾಗಿ ನನ್ನ ವಿರುದ್ಧ ಯಾರೂ ಕೂಡ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.’

ಈ ಆಂತರಿಕ ಭಿನ್ನಾಭಿಪ್ರಾಯದ ವಿಚಾರವಾಗಿ ಮುರಳಿಧರ್ ರಾವ್ ಅವರು ಈಶ್ವರಪ್ಪನವರ ಜತೆ ಮಾತುಕತೆ ನಡೆಸುವ ನಿರೀಕ್ಷೆ ಇದ್ದು, ಶೀಘ್ರದಲ್ಲೇ ಬಿಜೆಪಿಯ ಬೀದಿ ರಂಪಾಟಕ್ಕೆ ತೆರೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ.

Leave a Reply