ತೆರೆ ಮೇಲೆ ಬರಲಿದೆ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ! ಹೆಚ್ಡಿಕೆ ಪಾತ್ರದಲ್ಲಿ ಅರ್ಜುನ್ ಸರ್ಜಾ

ಡಿಜಿಟಲ್ ಕನ್ನಡ ಟೀಮ್:

ವ್ಯಕ್ತಿಯ ಜೀವನ ಆಧಾರಿತ ಚಿತ್ರಗಳು ಈಗ ಬಾಲಿವುಡ್ ನಲ್ಲಿ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಈ ಟ್ರೆಂಡ್ ಕನ್ನಡದಲ್ಲಿ ಅಷ್ಟು ಮಟ್ಟಿಗೆ ಆರಂಭವಾಗಿಲ್ಲ. ಆದರೆ ಈಗ ಅಂತಹ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ ಕಲಾ ಸಾಮ್ರಾಟ್ ಎಸ್.ನಾರಾಯಣ್. ಅದೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರದು.

ಹೌದು, ಕ್ರೀಡಾಪಟುಗಳು, ಚಲನಚಿತ್ರ ಕಲಾವಿದರ ಜೀವನ ಆಧಾರಿತ ಚಿತ್ರಗಳು ಬರುತ್ತಿರುವ ಹೊತ್ತಲ್ಲಿ ಎಸ್.ನಾರಾಯಣ್ ಅವರು ರಾಜಕಾರಣಿ ಅವರ ಜೀವನ ಆಧಾರಿತ ಚಿತ್ರವನ್ನು ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ‘ಭೂಮಿಪುತ್ರ’ ಎಂಬ ನಾಮಕರಣ ಮಾಡಿದ್ದು, ಈ ಚಿತ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ನಡೆಸಿದ 20 ತಿಂಗಳ ಆಡಳಿತ ಆಧಾರಿತವಾಗಿರುವುದು ವಿಶೇಷ. ಅರ್ಜುನ್ ಸರ್ಜಾ ಅವರು ಕುಮಾರಸ್ವಿಮಿ ಅವರ ಪಾತ್ರ ನಿರ್ವಹಿಸಲಿದ್ದು, ಮೇ.8ರಂದು ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಚಿತ್ರದ ಚಿತ್ರೀಕರಣಕ್ಕೆ ಅದ್ಧೂರಿ ಆರಂಭ ದೊರೆಯಲಿದೆ. ಈ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಜರಾಗಲಿದ್ದಾರೆ.

ಕುಮಾರಸ್ವಾಮಿ ಅವರ ಮೇಲೆ ಸಿನಿಮಾ ಮಾಡುತ್ತಿರುವ ಬಗ್ಗೆ ನಾರಾಯಣ್ ಅವರು ಹೇಳೋದಿಷ್ಟು…

‘ಈ ಚಿತ್ರಕ್ಕೆ ಪ್ರಭು ಕುಮಾರ್ ನಿರ್ಮಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಕುರಿತು ಸಿನಿಮಾ ಸಿನಿಮಾ ಮಾಡಬೇಕೆಂಬ ಐಡಿಯಾ ಅವರದ್ದೇ. ಸುಮಾರು ಐದಾರು ತಿಂಗಳ ಕಾಲ ಅವರು ಈ ಚಿತ್ರ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಯಾರೋ ನನ್ನ ಹೆಸರು ಹೇಳಿದ ನಂತರ ನನ್ನನ್ನು ಸಂಪರ್ಕಿಸಿದ್ದಾರೆ. ಆರಂಭದಲ್ಲಿ ನನಗೂ ಆಸಕ್ತಿ ಇರಲಿಲ್ಲ. ಆದರೆ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತವನ್ನು ತೀರಾ ಹತ್ತಿರದಿಂದ ಕಂಡವನು ನಾನು. ಹೀಗಾಗಿ ಚಿತ್ರ ಮಾಡಲು ನಿರ್ಧರಿಸಿದೆ. ಚಿತ್ರದಲ್ಲಿ ಸುಮಾರು 125 ಪಾತ್ರಗಳಿವೆ. ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ಕಲಾವಿದರು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬರೀ ಬಿಗ್‌ ಬಜೆಟ್‌ ಅಷ್ಟೇ ಅಲ್ಲ, ದೊಡ್ಡ ತಾರಾಗಣದ ಚಿತ್ರವೂ ಇದಾಗಲಿದೆ. ಅರ್ಜುನ್‌ ಸರ್ಜಾ ಅವರು ಕುಮಾರಸ್ವಾಮಿ ಅವರ ಪಾತ್ರ ಮಾಡುತ್ತಿದ್ದಾರೆ. ಇನ್ನು ಪಿ.ಕೆ.ಎಚ್‌. ದಾಸ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಸದ್ಯದಲ್ಲೇ ಮಾಡಲಾಗುತ್ತದೆ.’

Leave a Reply