ನೇರಳೆ ಹಣ್ಣಿನಿಂದ ಕಡಿಮೆ ಖರ್ಚಿನಲ್ಲಿ ಸೋಲಾರ್ ಸೆಲ್ ತಯಾರಿಕೆ! ಇದು ಐಐಟಿ ಸಂಶೋಧಕರ ಅನ್ವೇಷಣೆ

ಡಿಜಿಟಲ್ ಕನ್ನಡ ಟೀಮ್:

ನೇರಳೆ ಹಣ್ಣು..! ನೆನೆಸಿಕೊಂಡರೆ ಬಾಲ್ಯದ ನೆನಪು ಕಣ್ಮುಂದೆ ಬಂದು ಹೋಗುತ್ತದೆ. ಈ ನೇರಳೆ ಹಣ್ಣು ತಿನ್ನಲು ರುಚಿ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಷಯ ನಿಮಗೆ ಗೊತ್ತಿದೆ. ಆದರೆ ಈ ನೇರಳೆ ಹಣ್ಣಿನಿಂದ ಸೋಲಾರ್ ಸೆಲ್ ತಯಾರಿಸಬಹುದು! ಈ ಮಾತು ಕೇಳಿ ನಿಮಗೆ ಆಶ್ಚರ್ಯವಾದರೂ ಇದು ಸತ್ಯ. ಪ್ರತಿಷ್ಠಿತ ಐಐಟಿ ಕಾಲೇಜಿನ ಸಂಶೋಧಕರು ನೇರಳೆ ಹಣ್ಣಿನ ಮೂಲಕ ಸೌರ ವಿದ್ಯುತ್ ಉತ್ಪಾದನಾ ಯಂತ್ರಗಳಲ್ಲಿ ಬಳಸುವ ಸೋಲಾರ್ ಸೆಲ್ ಗಳನ್ನು ತಯಾರಿಸುವ ವಿಧಾನ ಕಂಡು ಹಿಡಿದಿದ್ದಾರೆ. ಆ ಮೂಲಕ ನಿಸರ್ಗದ ರಹಸ್ಯದಲ್ಲಿ ಎಲ್ಲವೂ ಅಡಗಿದೆ ಎಂಬ ಮಾತು ನಿಜವಾಗಿದೆ.

ಉತ್ತರಾಖಂಡದಲ್ಲಿರುವ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಂಶೋಧಕರ ತಂಡ ತಮ್ಮ ಕಾಲೇಜಿನ ಕ್ಯಾಂಪಸ್ ನಲ್ಲಿರುವ ಮರದಲ್ಲಿ ಬಿಟ್ಟಿದ್ದ ಕಡು ನೇರಳೆ ಹಣ್ಣನ್ನು ನೋಡಿ ಈ ಹಣ್ಣಿನಲ್ಲಿರುವ ವರ್ಣದ್ರವ್ಯಗಳ ಮೂಲಕ ಸೋಲಾರ್ ಸೆಲ್ ಗಳಲ್ಲಿ ಬಳಸಲಾಗುವ ಫೊಟೊಸೆನ್ಸಿಟೈಸರ್ ಅನ್ನು ತಯಾರಿಸುವ ಆಲೋಚನೆ ಹೊಳೆಯಿತು. ನಂತರ ಈ ಪ್ರಯೋಗಕ್ಕೆ ಮುಂದಾದರು.

ಸೋಲಾರ್ ಸೆಲ್ ಗಳಲ್ಲಿ ಬಳಸುವ ಟೈಟೇನಿಯಂ ಡೈಯಾಕ್ಸೈಡ್ ಲೇಪಿತ ಫೊಟೊನೊಡ್ ಗಳ ಮೂಲಕ ಸೂರ್ಯನ ಬೆಳಕನ್ನು ಹೀರಿಕೊಂಡು ನಂತರ ಅವುಗಳನ್ನು ಶಕ್ತಿಯಾಗಿ ಪರಿವರ್ತಿಸಲಾಗುವುದು. ಈ ಸೋಲಾರ್ ಸೆಲ್ ಗಳಲ್ಲಿ ಪ್ರಮುಖವಾಗಿ ಬಳಸಲಾಗುವ ವರ್ಣದ್ರವ್ಯವನ್ನು ಈ ನೇರಳೆ ಹಣ್ಣಿನ ಮೂಲಕ ಪಡೆಯುವುದು ಸಂಶೋಧಕರ ಗುರಿಯಾಯಿತು.

ಈ ನಿಟ್ಟಿನಲ್ಲಿ ಪ್ರಯೋಗ ಆರಂಭಿಸಿದ ಸಂಶೋಧಕರು ಎಥೆನಾಲ್ ಬಳಕೆ ಮಾಡಿಕೊಂಡು ನೇರಳೆ ಹಣ್ಣಿನಲ್ಲಿರುವ ವರ್ಣದ್ರವ್ಯವನ್ನು ಬೇರ್ಪಡಿಸಿದರು. ಈ ಪ್ರಯೋಗದಲ್ಲಿ ನೇರಳೆ ಹಣ್ಣಿನ ಜತೆಗೆ ಜತೆಗೆ ವರ್ಣದ್ರವ್ಯವನ್ನು ಹೊಂದಿರುವ ಕಪ್ಪು ದ್ರಾಕ್ಷಿ ಹಾಗೂ ಅಂಜುರ ಹಣ್ಣನ್ನು ಬಳಸಾಗಿತ್ತು. ಈ ಹಣ್ಣುಗಳನ್ನು ವಿವಿಧ ಹಂತಗಳ ಪ್ರಕ್ರಿಯೆಗೆ ಒಳಪಡಿಸಿ ನಂತರ ಅವುಗಳಲ್ಲಿನ ವರ್ಣದ್ರವ್ಯಗಳನ್ನು ತೆಗೆದುಕೊಂಡರು. ಈ ವರ್ಣದ್ರವ್ಯಗಳನ್ನು ಸೆನ್ಸಿಟೈಸರ್ ಗಳನ್ನಾಗಿ ಬಳಕೆ ಮಾಡಲು ಮುಂದಾದರು. ಹೀಗೆ ಸೋಲಾರ್ ಸೆಲ್ ಗಳಲ್ಲಿ ಬಳಕೆಯಾದ ನೇರಳೆ ಹಣ್ಣಿನ ವರ್ಣದ್ರವ್ಯದ ಸೆನ್ಸಿಟೈಸರ್ ಗಳು ಸೌರ ಶಕ್ತಿಯನ್ನು ಗ್ರಹಿಸುವ ಪ್ರಯೋಗ ಯಶಸ್ವಿಯಾಗಿದೆ. ಆ ಮೂಲಕ ನೇರಳೆ ಹಣ್ಣಿನ ಮೂಲಕ ಸೋಲಾರ್ ಸೆಲ್ ಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವ ಮಾರ್ಗ ಕಂಡುಹಿಡಿದ್ದಾರೆ.

ಈ ಸಂಶೋಧನೆಯ ಬಗ್ಗೆ ಐಐಟಿಯ ಸಹಾಯಕ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಿತ್ರಾ ಸತಾಪತಿ ಹೇಳಿರುವುದಿಷ್ಟು…

‘ನಮ್ಮ ಕಾಲೇಜಿನ ಆವರಣದಲ್ಲಿರುವ ಮರದಲ್ಲಿ ಬಿಟ್ಟಿದ್ದ ನೇರಳೆ ಹಣ್ಣನ್ನು ನೋಡಿ ಈ ಒಂದು ಆಲೋಚನೆ ಹೊಳೆಯಿತು. ಈ ಹಣ್ಣನ್ನು ಬಳಸಿಕೊಂಡು ಡೈ ಸೆನ್ಸಿಟೈಸ್ಡ್ ಸೋಲಾರ್ ಸೆಲ್ ತಯಾರಿಸಬಹುದು ಎಂಬ ಪ್ರಯೋಗಕ್ಕೆ ಮುಂದಾದೆವು. ಸೋಲಾರ್ ಸೆಲ್ ಗಳಲ್ಲಿ ಬಳಸುವ ರುಥೇನಿಯಂ ಮೂಲಕ ತಯಾರಿಸುವ ಕೃತಕ ವರ್ಣದ್ರವ್ಯಕ್ಕಿಂತ ನೈಸರ್ಗಿಕವಾಗಿ ನೇರಳೆ ಹಣ್ಣಿನಿಂದ ಸಿಗುವ ವರ್ಣದ್ರವ್ಯ ಸಾಕಷ್ಟು ಕಡಿಮೆ ಖರ್ಚಿನದ್ದಾಗಿದ್ದು, ಇದರ ಉಪಯೋಗ ಸಹ ದೀರ್ಘಾವಧಿಯಾಗಿದೆ. ಪ್ರಪಂಚದಲ್ಲಿ ಜಾಗತಿಕ ತಾಪಮಾನ ಹೆಚ್ಚಳ ಹಾಗೂ ಜೈವಿಕ ಇಂಧನ ಬಳಕೆ ಕುರಿತಾಗಿ ಹೆಚ್ಚುತ್ತಿರುವ ಒತ್ತಡ ಈ ರೀತಿಯಾದ ಬದಲಿ ಇಂಧನ ಅನ್ವೇಷಣೆಗೆ ಸ್ಫೂರ್ತಿಯಾಗಿದೆ.’

Leave a Reply