ಮೊದಲಿಗೆ ಜಯ ಎಸ್ಟೇಟಿನ ಸಿಬ್ಬಂದಿ ಹತ್ಯೆ, ಇದೀಗ ಆರೋಪಿಗಳಲ್ಲೊಬ್ಬ ಅಪಘಾತದಲ್ಲಿ ಸಾವು: ತಮಿಳುನಾಡಿನ ಲೈವ್ ಥ್ರಿಲ್ಲರ್

ಡಿಜಿಟಲ್ ಕನ್ನಡ ಟೀಮ್:

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಕೊಡನಾಡು ಎಸ್ಟೇಟ್ ನ ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರ ಅನುಮಾನಕ್ಕೆ ಕಾರಣವಾಗಿದ್ದ ಜಯಲಲಿತಾ ಅವರ ಮಾಜಿ ಕಾರು ಚಾಲಕ ಕನಕರಾಜ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಆರೋಪಿ ಶಾಮ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶನಿವಾರ ಕೇರಳದ ತ್ರಿಸೂರು ಜಿಲ್ಲೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಇದರಲ್ಲಿ ಶಾಮ್ ಪತ್ನಿ ಹಾಗೂ ಮಗು ಸಾವನ್ನಪಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಯಲಲಿತಾ ಅವರ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಕೊಡನಾಡು ಎಸ್ಟೇಟ್ ಸಹ ಒಂದಾಗಿತ್ತು. ಇತ್ತೀಚೆಗೆ ಏಪ್ರಿಲ್ 24 ರಂದು ಈ ಎಸ್ಟೇಟ್ ನ ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣದಲ್ಲಿ ಕನಕರಾಜ್ ಹಾಗೂ ಶಾಮ್ ಕೈವಾಡವಿರುವುದಲ್ಲದೇ, ಇಬ್ಬರೂ ಅಲ್ಲಿದ್ದ ಕೆಲವು ವಸ್ತುಗಳನ್ನು ಹಾಗೂ ಪ್ರಮುಖ ದಾಖಲೆಗಳನ್ನು ಕದ್ದಿರುವ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ಭದ್ರತಾ ಸಿಬ್ಬಂದಿ ಕೊಲೆಯಾದ ದಿನ 10 ಜನರ ತಂಡವೊಂದು ದ್ವಿಚಕ್ರವಾಹನಗಳಲ್ಲಿ ಬೆಳಗಿನ ಜಾವ ಈ ಎಸ್ಟೇಟಿಗೆ ಆಗಮಿಸಿತ್ತು ಎಂದು ಗ್ರಾಮಸ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜತೆಗೆ ಬಂಗಲೆಯ ಒಂದು ಬಾಗಿಲು ಮುರಿದಿದೆ. ಈ ಎಸ್ಟೇಟಿನ ಭದ್ರತಾ ಸಿಬ್ಬಂದಿ 40 ವರ್ಷದ ಓಂ ಬಹದ್ದೂರ್ ನನ್ನು ಹತ್ಯೆ ಮಾಡಲಾಗಿದ್ದು, ಮತ್ತೊಬ್ಬ ಕಿಶೋರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಈತ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Leave a Reply