ಸೇನೆಯ ತರಬೇತಿ ಸಹಾಯದಿಂದ ಐಐಟಿ ಪ್ರವೇಶಿಸುತ್ತಿರುವ 28 ಕಾಶ್ಮೀರಿಗರು, ಕಲ್ಲು ತೂರುವುದನ್ನು ಮಾತ್ರ ಬಿಡದ ದ್ರೋಹಿಗಳು!

ಡಿಜಿಟಲ್ ಕನ್ನಡ ಟೀಮ್:

ಜಮ್ಮುವಿನ ಪೂಂಚ್ ನಲ್ಲಿ ಪಾಕಿಸ್ತಾನವು ಗಡಿಯಾಚೆಯಿಂದ ತೂರಿರುವ ರಾಕೆಟ್ಟಿಗೆ ಭಾರತೀಯ ಗಡಿ ಭದ್ರತಾ ಪಡೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಯೋಧರೊಬ್ಬರಿಗೆ ಗಂಭೀರ ಗಾಯಗಳಾಗಿವೆ.

ಗಡಿಯಾಚೆಗಿನ ಪಾಕಿಸ್ತಾನದ ಈ ಕೃತ್ಯಕ್ಕೆ ಆಂತರಿಕ ಮಟ್ಟದಲ್ಲಿ ಕಾಶ್ಮೀರದ ಕಲ್ಲು ತೂರಾಟಗಾರರು ತಮ್ಮ ಬೆಂಬಲ ನೀಡುತ್ತ, ಭದ್ರತಾ ಪಡೆಗಳ ಮೇಲಿನ ದಾಳಿಯನ್ನು ಮುಂದುವರಿಸಿದ್ದಾರೆ. ಸ್ವಾಯತ್ತೆ ಸ್ವಾತಂತ್ರ್ಯ ಎಲ್ಲವೂ ಮೇಲ್ಮೇಲಿನ ಮಾತುಗಳಾದರೂ ಗಡಿಯಾಚೆಗಿನ ಪಾಕಿಗಳದ್ದು ಹಾಗೂ ಗಡಿಯೊಳಗಿನ ದ್ರೋಹಿಗಳದ್ದು ಉದ್ದೇಶ ಒಂದೇ. ಅದುವೇ ಇಸ್ಲಾಮಿಕ್ ರಾಷ್ಟ್ರ ಸ್ಥಾಪನೆ.

ಆದರೆ ಭಾರತದ ಸೇನೆ ಮಾತ್ರ ಇವೆಲ್ಲದರ ನಡುವೆಯೂ ನಾಗರಿಕ ಸಮಾಜವನ್ನು ಕಟ್ಟುವುದರಲ್ಲಿ ತೊಡಗಿರುವುದು ಸೋಜಿಗ ಮತ್ತು ಆಪ್ತ ಸಂಗತಿ.

ಸೇನೆಯ ತರಬೇತಿ ಕೇಂದ್ರದಲ್ಲಿ ಶಿಕ್ಷಣ ಪಡೆದ ಜಮ್ಮು-ಕಾಶ್ಮೀರದ 26 ಹುಡುಗರು ಹಾಗೂ ಇಬ್ಬರು ಹುಡುಗಿಯರು ಈ ವರ್ಷದ ಐಐಟಿ-ಜೆಇಇ ಮುಖ್ಯ ಪರೀಕ್ಷೆಯನ್ನು ಪಾಸಾಗುವುದರಲ್ಲಿ ಯಶ ಸಾಧಿಸಿದ್ದಾರೆ.

ಸ್ಥಳೀಯ ಯುವ ಸಮೂಹವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಲೆಂದೇ ಸೇನೆಯು ಪ್ರಾರಂಭಿಸಿರುವ ಯೋಜನೆ ‘ಕಾಶ್ಮೀರ ಸೂಪರ್-40’.

ಈ ಬಾರಿ ಶೇ.78ರಷ್ಟು ಫಲಿತಾಂಶ ಸಾಧ್ಯವಾಗಿರುವುದು ಸೇನೆಯ ಈ ಅಭಿಯಾನದಲ್ಲಿ ಹೊಸ ದಾಖಲೆಯಾಗಿದೆ. ಸೆಂಟರ್ ಫಾರ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಆ್ಯಂಡ್ ಲರ್ನಿಂಗ್ ಹಾಗೂ ಪೆಟ್ರೊನೆಟ್ ಎಲ್ಎನ್ಜಿ ಸಹಯೋಗದೊಂದಿಗೆ 2013ರಿಂದಲೂ ಸೇನೆಯು ಈ ತರಬೇತು ಸೇವೆಯನ್ನು ನೀಡುತ್ತ ಬಂದಿದೆ. ಈ ಬಾರಿ ಐಐಟಿಗೆ ಆಯ್ಕೆಯಾಗಿರುವ 28 ವಿದ್ಯಾರ್ಥಿಗಳ ಪೈಕಿ 9 ಮಂದಿ ದಕ್ಷಿಣ ಕಾಶ್ಮೀರದವರು, 10 ಮಂದಿ ಉತ್ತರ ಕಾಶ್ಮೀರದವರು ಹಾಗೂ ಲಢಾಕ್/ಕಾರ್ಗಿಲ್, ಜಮ್ಮು ಪ್ರಾಂತ್ಯಕ್ಕೆ ಸೇರಿದ 7 ಮಂದಿ ಇದ್ದಾರೆ. ಕಾಶ್ಮೀರ ಕಣಿವೆಯ ಐವರು ಹೆಣ್ಣುಮಕ್ಕಳನ್ನು ದೆಹಲಿಗೆ ತಂದು ತರಬೇತಿ ನೀಡಲಾಗಿತ್ತು. ಆ ಪೈಕಿ ಇಬ್ಬರು ಆಯ್ಕೆಯಾಗಿದ್ದಾರೆ.

ರಾಜ್ಯದ ನಾನಾ ಕಾಲೇಜುಗಳಲ್ಲಿ ಸಂದರ್ಶನ ನಡೆಸಿ ಅರ್ಹರನ್ನು ತರಬೇತಿಗೆ ಆಯ್ಕೆ ಮಾಡುವ ಭಾರತೀಯ ಸೇನೆ, ಇವೆಲ್ಲವನ್ನೂ ಶುಲ್ಕರಹಿತವಾಗಿ ನಡೆಸಿಕೊಡುತ್ತದೆ.

ಇಷ್ಟಾಗಿಯೂ ಭಾರತವು ಜಮ್ಮು-ಕಾಶ್ಮೀರಕ್ಕೆ ಮಿಡಿಯುತ್ತಿಲ್ಲ ಎಂದೆಲ್ಲ ಕತೆ ಕಟ್ಟಿ ಯೋಧರ ಮೇಲಿನ ದೌರ್ಜನ್ಯ ಬೆಂಬಲಿಸುವ ಮನಸ್ಥಿತಿಗಳಿಗೆ ಏನು ಹೇಳೋಣ?

Leave a Reply