ದಲಿತ ಕಾರ್ಡ್ ಒಗಾಯಿಸಿ ವಿತಂಡವಾದಕ್ಕಿಳಿದ ಜಡ್ಜ್ ಮಾನಸಿಕ ಆರೋಗ್ಯ ತಪಾಸಣೆಗೆ ಸುಪ್ರೀಂ ಸೂಚನೆ, ಜಾತಿನಿಂದನೆಯಲ್ಲಿ ಸಾಮಾನ್ಯರ ಬವಣೆಗ್ಯಾರು ಹೊಣೆ?

ಡಿಜಿಟಲ್ ಕನ್ನಡ ಟೀಮ್:

ಸುಪ್ರೀಂ ಕೋರ್ಟಿನಲ್ಲಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸಿ. ಎಸ್ ಕಣ್ಣನ್ ಅವರ ಮಾನಸಿಕ ಆರೋಗ್ಯದ ಪರೀಕ್ಷೆ ಆಗಬೇಕೆಂದು ಸೋಮವಾರ ಸುಪ್ರೀಂಕೋರ್ಟ್ ಹೇಳಿದೆ.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಖೇಹರ್ ಅವರನ್ನೊಳಗೊಂಡ ಏಳು ಸದಸ್ಯರ ನ್ಯಾಯಪೀಠ ಹೊರಡಿಸಿರುವ ಆದೇಶವಿದು. ಹೀಗೆ ಆದೇಶ ಮಾಡಿರುವುದರ ಹಿಂದೊಂದು ಕತೆಯಿದೆ.

ಕಳೆದ ಫೆಬ್ರವರಿಯಲ್ಲಿ ಇದೇ ಏಳು ಸದಸ್ಯರ ನ್ಯಾಯಪೀಠವು ಜಡ್ಜ್ ಕಣ್ಣನ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಮುಗಿಯುವವರೆಗೆ ಅವರಿಗೆ ನ್ಯಾಯದಾನ ಹಾಗೂ ಆಡಳಿತಾತ್ಮಕ ಕರ್ತವ್ಯ ನಿರ್ಬಂಧಿಸಿ ಆದೇಶ ಹೊರಡಿಸಿತು.

ಆಗ ಸುಪ್ರೀಂಗೆ ಬಿಸಿ ಬಿತ್ತು ನೋಡಿ ರಾಜಕೀಯ ವರಸೆ. ‘ನಾನು ದಲಿತನಾಗಿರುವುದಕ್ಕೇ ಈ ಆದೇಶ. ನನ್ನನ್ನು ತುಳಿಯಲೆಂದೇ ಹೀಗೆ ಮಾಡಲಾಗಿದೆ’ ಅಂತ ಬೊಬ್ಬಿರಿದರು ಜಡ್ಜ್ ಕಣ್ಣನ್. ಅಷ್ಟೇ ಅಲ್ಲ, ತನ್ನ ವಿರುದ್ಧ ಆದೇಶಿಸಿರುವ ಏಳೂ ನ್ಯಾಯಮೂರ್ತಿಗಳೂ ಮೇ 1ರಂದು ತನ್ನ ನಿವಾಸದಲ್ಲಿ ಹಾಜರಾಗಿ ಜಾತಿ ನಿಂದನೆಗೆ ಉತ್ತರ ಕೊಡಬೇಕೆಂದು ಆದೇಶ ಒಗಾಯಿಸಿದರು!

ಇವತ್ತು ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಬಂದಾಗ, ಕಣ್ಣನ್ ಮಾನಸಿಕ ಸಂತುಲನದ ಪರೀಕ್ಷೆ ಆಗಲಿ ಎಂಬ ನಿರ್ದೇಶನ ಹೊರಬಿದ್ದಿದೆ. ಹೇಗೂ ಜೂನ್ ನಲ್ಲಿ ಕಣ್ಣನ್ ನಿವೃತ್ತಿಯಾಗುವುದರಿಂದ ಅಲ್ಲಿಯವರೆಗೆ ತಾಳಿಕೊಳ್ಳೋಣ ಎಂಬಂಥ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ ಅಟಾರ್ನಿ ಜನರಲ್ ರೋಹ್ತಗಿ ಇದಕ್ಕೆ ಆಕ್ಷೇಪಿಸುತ್ತ, ‘ನೀವಿದನ್ನು ಸುಮ್ಮನೇ ಬಿಟ್ಟರೆ ನ್ಯಾಯಂಗವನ್ನು ಗಂಭೀರವಾಗಿ ತೆಗೆದುಕೊಳ್ಳುವ ಮನಸ್ಥಿತಿಯನ್ನೇ ತಗ್ಗಿಸಿದಂತಾಗುವುದಿಲ್ಲವೇ’ ಅಂತ ಪ್ರಶ್ನಿಸಿದ್ದಾರೆ.

ಈ ವಿದ್ಯಮಾನದ ಕೊನೆಯುಲ್ಲಿ ಸಾಮಾನ್ಯರ ಮನಸಲ್ಲಿ ಉಳಿಯಬಹುದಾದ ಟಿಪ್ಪಣಿ ಇಷ್ಟೆ… ಸುಪ್ರೀಂಕೋರ್ಟ್ ಏನೋ ತನ್ನ ಶಕ್ತಿ ಬಳಸಿ ಕಣ್ಣನ್ ಮಾನಸಿಕ ಆರೋಗ್ಯ ಪರೀಕ್ಷೆಯಾಗಲಿ ಎಂದುಬಿಟ್ಟಿತು. ಆದರೆ ಸಾಮಾನ್ಯ ಜೀವನದಲ್ಲಿ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳುವುದಕ್ಕೆ ‘ನಾನು ದಲಿತನಾಗಿದ್ದರಿಂದಲೇ ಹೀಗೆ ಮಾಡುತ್ತಿದ್ದಾರೆ, ಇದು ಜಾತಿ ನಿಂದನೆ’ ಎನ್ನುವವರ ಸಂಖ್ಯೆ ಎಷ್ಟಿಲ್ಲ? ಇದನ್ನೆದುರಿಸುವಲ್ಲಿ ಎಲ್ಲರೂ ಸುಪ್ರೀಂಕೋರ್ಟಿನಷ್ಟು ಶಕ್ತರಾಗಿರುವುದಿಲ್ಲ. ಈ ಸಮಸ್ಯೆಗಂತೂ ಉತ್ತರವಿದ್ದಂತಿಲ್ಲ.

ಅಪ್ಡೇಟೆಡ್ ಮಾಹಿತಿ- ತನ್ನ ಇಚ್ಛೆಗೆ ವಿರುದ್ಧವಾಗಿ ವೈದ್ಯಕೀಯ ಪರೀಕ್ಷೆ ಮಾಡಿದರೆ ಆ ವೈದ್ಯರಗಳ ಮೇಲೂ ಜಾತಿ ನಿಂದನೆ ಕೇಸ್ ಹಾಕುತ್ತೇನೆ ಎಂದಿದ್ದಾರೆ ಈ ಜಡ್ಜ್!

Leave a Reply