ಸಾವಿರ ರು. ತೆತ್ತು ಬಾಹುಬಲಿ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಜೆಟ್ಟಿನಲ್ಲಿ ಘೋಷಿಸಿದ ಗರಿಷ್ಠ ದರ ನಿಗದಿ ಮರೆತುಹೋಗಿದೆಯೇ?

ಡಿಜಿಟಲ್ ಕನ್ನಡ ಟೀಮ್:

ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಬೈನಿಂದ ಹಿಂತಿರುಗುತ್ತಲೇ ಒರಾಯನ್ ಮಾಲಿಗೆ ಹೋಗಿ ಬಾಹುಬಲಿ-2 ಚಿತ್ರ ನೋಡಿದ್ದಾರೆ.

ಖಂಡಿತ ಮುಖ್ಯಮಂತ್ರಿಗಳಿಗೆ ಮನೋಲ್ಲಾಸ ಬೇಡ ಅಂತಿಲ್ಲ. ಸಿನಿಮಾ ನೋಡಿದ್ದರಲ್ಲೂ ತಪ್ಪಿಲ್ಲ. ತಮ್ಮ ಕುಟುಂಬ ಸಮೇತವಾಗಿ ಚಿತ್ರ ವೀಕ್ಷಿಸಿದರು ಮುಖ್ಯಮಂತ್ರಿಗಳು.

ಆದರೆ ಇಲ್ಲೊಂದು ಕ್ರೂರ ವ್ಯಂಗ್ಯವಿದೆ. ಆಯವ್ಯ ಭಾಷಣದಲ್ಲಿ ಮುಖ್ಯಮಂತ್ರಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರವನ್ನು ಗರಿಷ್ಠ 200 ರುಪಾಯಿಗಳಿಗೆ ನಿಗದಿಪಡಿಸುವುದಾಗಿ ಹೇಳಿದಾಗ ಭಾರಿ ಮೆಚ್ಚುಗೆಯೇ ವ್ಯಕ್ತವಾಗಿತ್ತು. ಏಕೆಂದರೆ ಪಕ್ಕದ ರಾಜ್ಯಗಳಲ್ಲಿ ಅದೆಂಥದೇ ಸಿನಿಮಾ ಹವಾ ಇದ್ದರೂ ಮನಬಂದಂತೆ ಟಿಕೆಟ್ ದರ ಏರಿಸುವುದಕ್ಕೆ ಅವಕಾಶವೇ ಇಲ್ಲ.

ಆದರೆ ಇವೆಲ್ಲ ಕೇವಲ ಜನಪ್ರಿಯ ಘೋಷಣೆಗಳಷ್ಟೆ. ಅನುಷ್ಠಾನಕ್ಕೆ ಇರುವಂಥದ್ದಲ್ಲ ಎಂಬುದು ಪಕ್ಕಾ ಆಗಿದೆ. ಇವತ್ತು ಒರಾಯನ್ ಮಾಲ್ ನಲ್ಲಿ ಬಾಹುಬಲಿ-2 ಚಿತ್ರಕ್ಕೆ ಮುಖ್ಯಮಂತ್ರಿ ಪಾವತಿಸಿದ ತಲಾ ಟಿಕೆಟ್ ಬೆಲೆ ₹1050. ಅವರ ಜತೆಗಿದ್ದವರ ನಿಖರ ಲೆಕ್ಕ ತಿಳಿದಿಲ್ಲವಾದರೂ ಮುಖ್ಯಮಂತ್ರಿ ಸುತ್ತಮುತ್ತ ಇರುವ ಧೌಡು ತಿಳಿದಿರುವಂಥದ್ದೆ. ಹೀಗಾಗಿ ಒಂದು ದೊಡ್ಡ ಮೊತ್ತ ಎತ್ತಿಡಬೇಕಾದರೆ ಬಜೆಟ್ ಘೋಷಮೆ ನೆನಪಾಗಲಿಲ್ಲವೇ ಎಂಬುದು ಕೌತುಕದ ಪ್ರಶ್ನೆ.

ಬಜೆಟ್ ದಿನ ಟಿವಿಯಲ್ಲಿ ಚರ್ಚೆ ಮಾಡಿ ಪುಳಕಿತರಾದ ಚಿತ್ರೋದ್ಯಮದ ಮಂದಿ ಸಹ ಕನಿಷ್ಠ ದರ ನಿಗದಿ ಯಾವಾಗಿನಿಂದ ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ. ‘ಆದೇಶ ಯಾವತ್ತು  ಜಾರಿಗೆ ಬರುತ್ತೆ ಸ್ವಾಮಿ ಹೊರಡಿಸಿದ ಮಾರನೇ ದಿನವೇ ಕೈ ಸೇರುತ್ತೆ ಅಂದಿದ್ರಲ್ಲ’ ಅಂತ ಸನ್ಮಾನ್ಯ ಸಾ ರಾ ಗೋವಿಂದು ಅವರನ್ನ ಕೇಳಿದ್ರೆ ಅಯ್ಯೋ ನಾವೇನ್ ಮಾಡಣಾ ಅಧಿಕಾರಿಗಳು ಸರಿ ಇಲ್ಲ . ಅವರು ಕೊಟ್ಟಾಗ ಬರುತ್ತೆ ಬಿಡಿ . ನಾಲ್ಕೈದು ದಿನ ಆಗುತ್ತೆ ಅನ್ನೋ ಉಡಾಫೆ ಉತ್ತರ ಕೊಟ್ಟಿದ್ರು.

ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಹುಬಲಿ ಸಿನಿಮಾಗೆ ತಮ್ಮ ಬೆವರು ಬಸಿದು ಬಸಿದು ಇಳಿಸಿದ ಹಣ ತೆತ್ತು ಬಂದ ಮೇಲೆ ಸಿನಿಮಾ ಪ್ರೇಮಿಗಳ ದುಬಾರಿ ಹಣ ತೆರಲಾರದ ಕಷ್ಟ ಗೊತ್ತಾಗಿರುತ್ತಾ? ಅಥವಾ ಇದಕ್ಕೂ ಉಡಾಫೆ ಉತ್ತರವೇ ಕಾದಿದೆಯಾ?

1 COMMENT

  1. ಮುಖ್ಯಮಂತ್ರಿಗಳಂತೂ ಖಂಡಿತ ತಮ್ಮ ಕಯ್ಯಿಂದ ಟಿಕೆಟ್ ಹಣವನ್ನು ಕೊಟ್ಟಿರುವುದಿಲ್ಲವಾದ್ದರಿಂದ ಅವ್ರಿಗ್ಗೆ ಈ ವಿಷಯದ ಬಗ್ಗೆ ತಿಳಿದಿರುವುದೇ ಅನುಮಾನ… ತಾನು ಮುಖ್ಯಮಂತ್ರಿ ಆಗಿ ಜಾರಿಗೊಳಿಸಿದ ಕಾನೂನನ್ನು ಜಾರಿಗೆ ತರಲಾಗದ ಅಸಮರ್ಥ ಮುಖ್ಯಮಂತ್ರಿ ಪಡೆದಿರುವುದು ನಮ್ಮ ದೌರ್’ಭಾಗ್ಯ’. ಪರಭಾಷಾ ಮಾಲೀಕತ್ವದ, ಕನ್ನಡದ ವಿರೋಧಿ ಧೋರಣೆ ಹೊಂದಿರುವ ಮಲ್ಟಿಪ್ಲೆಕ್ಸ್ ಗಳ ಮಾಲೀಕರ ಮುಂದೆ ಮಂಡಿಯೂರಿ ಶರಣಾಗಿದ್ದೇವೆ ನಾವು.. ಕರ್ನಾಟಕದಲ್ಲಿ ಕನ್ನಡಿಗರು ದ್ವಿತೀಯ ದರ್ಜೆ ಪ್ರಜೆಗಳಾಗಿ ಬಾಳುತ್ತಿರುವುದು ವಿಷಾದನೀಯ

Leave a Reply