ದಲೈ ಲಾಮಾರಿಗೆ ಚೀನಿ ಅಧಿಕಾರಿಗಳಿಂದಲೇ ಹಣಕಾಸು: ಈ ವಿದ್ಯಮಾನ ಬೆತ್ತಲಾಗಿಸಿರುವ ಚೀನಾ ದೌರ್ಬಲ್ಯವೇನು?

ಡಿಜಿಟಲ್ ಕನ್ನಡ ವಿಶೇಷ:

ಭಾರತದಲ್ಲಿ ಆಶ್ರಯ ಪಡೆದಿರುವ ಟಿಬೆಟ್ ಬೌದ್ಧಗುರು ದಲೈ ಲಾಮಾ ಅವರಿಗೆ ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಕೆಲವು ಅಧಿಕಾರಿಗಳೇ ಡೊನೇಷನ್ ನೀಡಿರುವುದರ ಬಗ್ಗೆ ಆಡಳಿತಾರೂಢ ಪಕ್ಷ ಗರಂ ಆಗಿದೆ.

ಹೀಗೊಂದು ಸುದ್ದಿ ಚೀನಾ ಸರ್ಕಾರದ ಮುಖವಾಣಿ ಎಂದೇ ಪರಿಗಣಿತವಾಗಿರುವ ‘ಗ್ಲೋಬಲ್ ಟೈಮ್ಸ್’ನಲ್ಲಿ ಬಂದಿರುವುದರಿಂದ ಹೆಚ್ಚು ವಿಶ್ವಾಸಾರ್ಹ.

ಆ ಅಧಿಕಾರಿಗಳ ಹೆಸರುಗಳೇನು? ಅವರೆಲ್ಲ ಯಾವ ಯಾವ ಹುದ್ದೆಗಳಲ್ಲಿ ಇದ್ದಾರೆ ಎಂಬ ಅಂಶಗಳ್ಯಾವವನ್ನೂ ಬಹಿರಂಗಗೊಳಿಸಲಾಗಿಲ್ಲ. ಆದರೆ ದಲೈ ಲಾಮಾರಿಗೆ ಹಣ ಕಾಣಿಕೆ ಅರ್ಪಿಸಿರುವುದು ದೃಢಪಟ್ಟಿರುವುದರಿಂದ ಅಂಥವರನ್ನೆಲ್ಲ ತರಾಟೆಗೆ ತೆಗೆದುಕೊಳ್ಳಲಾಗಿದೆ ಎಂಬುದಾಗಿ ವರದಿಯಾಗಿದೆ. ದಲೈ ಲಾಮಾರಿಗೆ ಕಾಣಿಕೆ ನೀಡುವುದೆಂದರೆ ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸಿದಂತೆ ಅಲ್ಲವೇ ಎಂದು ಅಲ್ಲಿನ ಕಮ್ಯುನಿಸ್ಟ್ ಪಕ್ಷದ ಕೇಂದ್ರ ನಾಯಕತ್ವ ಸಿಟ್ಟಾಗಿರುವುದಂತೂ ಸ್ಪಷ್ಟ. ಅಂಥ ಅಧಿಕಾರಿಗಳ ಕತೆ ಏನಾಗುತ್ತದೆ ಎಂಬುದು ಮಾಧ್ಯಮಗಳಿಗೆ ನಿಯಂತ್ರಣವಿರುವ ಚೀನಾದಿಂದ ನಿಖರವಾಗಿ ವರದಿಯಾಗುವುದಿಲ್ಲವಾದರೂ, ಅವರ ಸ್ಥಿತಿಯನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಈಗ ಏಳುವ ಪ್ರಶ್ನೆ ಇಷ್ಟೆ.

ಕಮ್ಯುನಿಸ್ಟ್ ಪಕ್ಷದ್ದೇ ನಿರಂಕುಶ ಆಡಳಿತವಿರುವ ಚೀನಾದಲ್ಲಿ ಈ ಅಧಿಕಾರಿಗಳೇಕೆ ಇಂಥ ದುಸ್ಸಾಹಸ ಮಾಡಿದ್ದಾರೆ?

ಈ ಪ್ರಶ್ನೆ ಹಾಕಿಕೊಂಡರೆ, ಮೇಲಿನಿಂದ ಆರ್ಥಿಕ ಬಲಾಢ್ಯನಾಗಿ ಕಾಣುವ ಚೀನಾದ ಒಳ ದೌರ್ಬಲ್ಯವೊಂದು ಅರ್ಥವಾಗುತ್ತದೆ. ಅಲ್ಲಿನ ಕಮ್ಯುನಿಸ್ಟ್ ಸರ್ಕಾರದ ಸಾರ್ವಜನಿಕ ನೀತಿಯ ಅನುಸಾರ ಧರ್ಮಾಚರಣೆಗೆ ಪ್ರೋತ್ಸಾಹವಿಲ್ಲ. ಆದರೆ ಮಾನವ ಸಹಜ ಗುಣ ಎಲ್ಲಿ ಹೋಗುತ್ತದೆ? ಬಾಳಿಗೊಂದು ನಂಬಿಕೆ ಬೇಕೆ ಬೇಕು. ಹಾಗೆಂದೇ ಚೀನಾದಲ್ಲಿ ಅಂತರ್ಗತವಾಗಿ ಬೌದ್ಧ ಧರ್ಮದ ಆಸಕ್ತಿ ಅತೀವವಾಗಿದೆ ಎನ್ನುತ್ತಾರೆ ಕೆಲ ವಿಶ್ಲೇಷಕರು. ವ್ಯಕ್ತಿ ಸ್ವಾತಂತ್ರ್ಯವನ್ನು ಗೌಣವಾಗಿಸಿರುವ ಹಲವು ದಶಕಗಳ ಕಮ್ಯುನಿಸ್ಟ್ ಆಡಳಿತವು ಸಹ ಜನರಿಗೆ ಆಂತರ್ಯದಲ್ಲಿ ಮಹತ್ತರ ತತ್ತ್ವವೊಂದಕ್ಕಾಗಿ ತುಡಿಯುವಂತೆ ಪ್ರೇರೇಪಿಸುತ್ತಿರಬಹುದು. ಚೀನಾದ ಮಂದಿಯಲ್ಲಿ ಹೀಗೊಂದು ಬೌದ್ಧ ಧರ್ಮ ಪ್ರೀತಿ ಜಾಗೃತವಾಗುವುದು ಕಾರ್ಯತಂತ್ರ ಹಾಗೂ ರಾಜತಾಂತ್ರಿಕತೆ ದೃಷ್ಟಿಯಿಂದ ಭಾರತಕ್ಕೆ ಬಹಳವೇ ಸಹಕಾರಿ. ಏಕೆಂದರೆ ಬುದ್ಧನ ಕುರಿತ ಆಸಕ್ತಿ- ಪ್ರೀತಿ ಎಂದರೆ ಅದು ಭಾರತದ ಕುರಿತ ಪ್ರೀತಿಯೂ ಆಗಿರಬೇಕಾದದ್ದು ಅನಿವಾರ್ಯ.

ಹಾಗಲ್ಲದೇ, ಕಮ್ಯುನಿಸ್ಟ್ ಸರ್ಕಾರದ್ದೇ ಭಾಗವಾಗಿರುವ ಅಧಿಕಾರಿಗಳು ಅದೇಕೆ ಭಾರತದಲ್ಲಿರುವ ದಲೈ ಲಾಮಾರಿಗೆ ಕಾಣಿಕೆ ಕಳುಹಿಸಿ ಸಂಪ್ರೀತರಾಗಲು ಯೋಚಿಸುತ್ತಾರೆ? ಸರ್ಕಾರಕ್ಕೆ ಗೊತ್ತಾದರೆ ತಮ್ಮ ಹುದ್ದೆಗೆ ಅಷ್ಟೇ ಅಲ್ಲ, ಬದುಕಿಗೇ ಕುತ್ತು ಅಂತಲೂ ಇವರಿಗೆ ತಿಳಿದಿತ್ತಲ್ಲ…?

ಈ ಪ್ರಶ್ನೆಗಳನ್ನು ಹಾಕಿಕೊಂಡಾಗ ಇಡೀ ವಿದ್ಯಮಾನದ ಬಗ್ಗೆ ಹೊಸ ಒಳನೋಟವೊಂದು ಸಿಗುತ್ತದೆ.

Leave a Reply