ಏರುಗತಿಯಲ್ಲಿದೆ ಭಾರತದ ವಿದೇಶಿ ವಿನಿಮಯ, ಹೌದೇನು ಇದು ಖುಷಿಯ ವಿಷಯ?

ಭಾರತದ ವಿದೇಶಿ ವಿನಿಮಯ ಮೀಸಲು  (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಹಣ ಕಳೆದ ಎರಡು ಮೂರು ತಿಂಗಳಿಂದ ಏರುಗತಿಯಲ್ಲಿದೆ . ಈ ತಿಂಗಳ ನಮ್ಮ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ೩೭೧ ಬಿಲಿಯನ್ ಅಮೆರಿಕನ್ ಡಾಲರ್ . ವಿದೇಶಿ ವಿನಿಮಯ ಹೆಚ್ಚು ಇದ್ದಷ್ಟು ಅಂತರ್ರಾಷ್ಟ್ರೀಯ ವ್ಯವಹಾರ ಸುಲಭ. ಹೆಚ್ಚು ಚೌಕಾಸಿ ಮಾಡಬಹುದು ಮತ್ತು ಜಗತ್ತಿನ ಇತರ ದೇಶಗಳು ಕಣ್ಣಿಗೆ ಹೆಚ್ಚು ವಿದೇಶಿ ವಿನಿಮಯ ಹೊಂದಿದ ದೇಶ ಬಲಿಷ್ಠವಾಗಿಯೂ ,ನಂಬಿಕಾರ್ಹವಾಗಿಯೂ ಕಾಣುತ್ತದ್ದೆ . ಈ ನಿಟ್ಟಿನಿಂದ ನೋಡುವುದಾದರೆ ಭಾರತದ ವಿದೇಶಿ ವಿನಿಮಯ ಮೀಸಲು ಆರೋಗ್ಯಕರ ಸಂಖ್ಯೆಯಲ್ಲಿದೆ .
ಏನಿದು ಫಾರಿನ್ ಎಕ್ಸ್ಚೇಂಜ್ ರಿಸರ್ವ್ ? 
ಯಾವುದೇ ದೇಶದ ಸೆಂಟ್ರಲ್ ಬ್ಯಾಂಕ್ ತನ್ನ ಬಳಿ ಯಾವುದೇ ದೇಶದ ಕರೆನ್ಸಿ ನೋಟು , ಟ್ರೆಷರಿ ಬಿಲ್ ,ಬ್ಯಾಂಕ್ ಡೆಪೋಸಿಟ್ಸ್ , ಬಾಂಡ್ಸ್ ಮತ್ತು ಗವರ್ನಮೆಂಟ್ ಸೆಕ್ಯುರಿಟೀಸ್ ಹೊಂದಿದ್ದು ಇವುಗಳ ಒಟ್ಟು ಮೌಲ್ಯವನ್ನ ತನ್ನ ವಿದೇಶಿ ವಿನಿಮಯ ಎಂದು ಕರೆದು ಕೊಳ್ಳುತ್ತದೆ. ಇಂಟರ್ನ್ಯಾಷನಲ್ ಮೊನಿಟರಿ ಫಂಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಹಣ ಮತ್ತು ಚಿನ್ನದ ರೂಪದಲ್ಲಿ ಇರುವ ಹೂಡಿಕೆಯನ್ನ ಕೂಡ ವಿದೇಶಿ ವಿನಿಮಯ ಮೀಸಲು ಎಂದು ಪರಿಗಣಿಸಲಾಗುತ್ತದೆ . ಇದನ್ನ ಇನ್ನಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳಲು ಒಂದು ಸಣ್ಣ ಉದಾಹರಣೆ ನೋಡೋಣ .
ಭಾರತೀಯ ರಿಸರ್ವ್ ಬ್ಯಾಂಕ್  ಅಮೇರಿಕಾ ಡಾಲರ್ ೧೦೦ ಬಿಲಿಯನ್ ಹೊಂದಿದ್ದು , ೧೦೦ ಯುರೋ ಕರೆನ್ಸಿ , ೫೦ ಕೆನಡಾ ದೇಶದ ಟ್ರಶರಿ ಬಿಲ್ , ೫೦ ಚಿನ್ನದ ರೂಪದಲ್ಲಿ ಮತ್ತು ಉಳಿದ ಮೊತ್ತ ೨೧ ಹಲವಾರು ದೇಶದ ಕರೆನ್ಸಿ ಹೊಂದಿದ್ದರೆ ಇವುಗಳೆಲ್ಲವ ಒಟ್ಟು ಮೊತ್ತವನ್ನ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ಎಂದು ಕರೆಯಲಾಗುತ್ತದೆ.
ಜಗತ್ತಿನ ಅರ್ಧಕ್ಕೂ ಹೆಚ್ಚು ಫಾರಿನ್ ಎಕ್ಸ್ಚೇಂಜ್ ಇರುವುದು ಅಮೆರಿಕನ್ ಡಾಲರ್ ನಲ್ಲಿ. ಉಳಿದ ಅರ್ಧ ಯುರೋ , ಬ್ರಿಟಿಷ್ ಪೌಂಡ್ , ಚೈನೀಸ್ ಹಣ , ಜಪಾನೀಸ್ ಯೆನ್ ಗಳಲ್ಲಿ ವಿಭಜನೆಯಾಗಿದೆ .
ಫಾರಿನ್ ಎಕ್ಸ್ಚೇಂಜ್ ರಿಸರ್ವ್ ನ ಅವಶ್ಯಕತೆ ಏನು ? ಇದು ಏಕೆ ಬೇಕು ? 
ಜಗತ್ತಿನ ವಹಿವಾಟು ನಡೆಯುತ್ತಿರುವುದು ನಂಬಿಕೆಯ  ಆಧಾರದ ಮೇಲೆ  ಆ ನಂಬಿಕೆಯನ್ನ ಹೆಚ್ಚಿಸಲು ಇದು ಬೇಕು. ಫಾರಿನ್ ಎಕ್ಸ್ಚೇಂಜ್ ಹೊಂದಲು ಬಹು ಮುಖ್ಯ ಕಾರಣ ಆಕಸ್ಮಾತ್ ಯಾವುದೇ ದೇಶದ ಕರೆನ್ಸಿ ಅಪಮೌಲ್ಯ ಗೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಆ ಹಣ  ಬೇಡಿಕೆ ಕಳೆದುಕೊಂಡೋ ಅಥವಾ ಚಾಲನೆಯನ್ನ ಕಳೆದುಕೊಂಡರೆ , ಇಲ್ಲಿ ನೋಡಿ ಹೆದರುವುದು ಬೇಡ ನನ್ನ ಬಳಿ ಬೇರೆ ಹಣವೂ ಉಂಟು ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಹೇಳಲು ಇದು ಬೇಕು . ಜಗತ್ತಿನ ಇತರ ದೇಶಗಳ ಜೊತೆಗೆ ನಾವು ಮಾಡುವ ಎಲ್ಲಾ ವ್ಯವಹಾರಗಳು ನಡೆಯುವುದು ಮುಕ್ಕಾಲು ಪಾಲು ಅಮೇರಿಕನ್ ಡಾಲರ್ ನಲ್ಲಿ. ಬೇರೆ ದೇಶಗಳು ನಮ್ಮ ಬಳಿ ಅಮೇರಿಕನ್ ಡಾಲರ್ ರಿಸರ್ವ್ ನಲ್ಲಿದೆ ಎಂದರೆ ವ್ಯಾಪಾರ ಸುಲಭವಾಗುತ್ತದೆ. ಭಾರತೀಯ ರೂಪಾಯಿ ಅದೆಷ್ಟೇ ಸಾವಿರ ಕೋಟಿ ಇದೆ ಎಂದರೂ ಬಾರದ ನಂಬಿಕೆ ಈ ಫಾರಿನ್ ಎಕ್ಸ್ಚೇಂಜ್ ನೀಡುತ್ತದೆ .
ಉದಾಹರಣೆ ನೋಡಿ ನಾವು ಸೌದಿಯಿಂದ ಪೆಟ್ರೋಲ್ ಕೊಂಡರೆ ಅವರಿಗೆ ಹಣ ನೀಡುವುದು ಡಾಲರ್ ನಲ್ಲಿ . ಹೀಗೆ ಜಗತ್ತಿನ ಯಾವುದೋ ಒಂದು ದೇಶದಿಂದ ಇನ್ನೇನೋ ಕೊಂಡರೆ ಅವರಿಗೆ ಬದಲಿಗೆ ಹಣ ಸಂದಾಯವಾಗುವುದು ಡಾಲರ್ ನಲ್ಲಿ. ಹೀಗಾಗಿ ವಿದೇಶಿ ವಿನಿಮಯ ಹಣ ಹೊಂದಿರುವುದು ಅತ್ಯವಶ್ಯಕ .
ಜಗತ್ತಿನ ಎಲ್ಲಾ ದೇಶಗಳು ಇಂದು ಫಾರಿನ್ ಎಕ್ಸ್ಚೇಂಜ್ ಹೊಂದಿರಲೇಬೇಕು . ಇದು ಅಲಿಖಿತ ನಿಯಮ . ಅದು ಸರಿ, ಆದರೆ ಎಷ್ಟು ಹಣವನ್ನ ಫಾರಿನ್ ಎಕ್ಸ್ಚೇಂಜ್ ನಲ್ಲಿ ಹೊಂದಿರಬೇಕು? ಎನ್ನುವ ಪ್ರಶ್ನೆಗೆ ಈ ವಿಷಯ ದಲ್ಲಿ ತಜ್ಞರು ಎನಿಸಿಕೊಂಡವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ನಿಖರವಾಗಿ ಫಾರ್ಮುಲಾ ಹಾಕಿ ಇಷ್ಟು ಹಣ ಫಾರಿನ್ ಎಕ್ಸ್ಚೇಂಜ್ ನಲ್ಲಿರಲಿ ಎಂದು ಯಾರೂ ಹೇಳಲು ಬರುವುದಿಲ್ಲ. ಆಯಾ ದೇಶದ ಅವಶ್ಯಕತೆಗೆ ಅನುಗುಣವಾಗಿ ಇದನ್ನ ನಿರ್ಧರಿಸಬೇಕು.
ಆದರೆ ವಿದೇಶಿ ವಿನಿಮಯ ಹಣ ಹೆಚ್ಚಿದಷ್ಟು ಮಾರುಕಟ್ಟೆಯ ಮೇಲೆ ಹಿಡಿತ ಹೆಚ್ಚಾಗುತ್ತೆ. ಯಾವ ದೇಶದ ಹಣವನ್ನ ನೀವು ರಿಸರ್ವ್ ಎಂದು ಕೊಂಡಿರುತ್ತೀರೋ ಆ ದೇಶದ ಹಣವನ್ನ ನೀವೇ ಕಂಟ್ರೋಲ್ ಮಾಡುವ ಸ್ಥಿತಿಗೆ ತಲುಪಬಹುದು. ಉದಾಹರಣೆ ನೋಡಿ- ಚೀನಾ ದೇಶ ಜಗತ್ತಿನಲ್ಲಿ ಅತ್ಯಂತ ಹೆಚ್ಚು ವಿದೇಶಿ ವಿನಿಮಯ ಹೊಂದಿದ ದೇಶಗಳಲ್ಲಿ ಅಭಾದಿತವಾಗಿ ಮೊದಲ ಸ್ಥಾನದಲ್ಲಿದೆ . ಒಟ್ಟು ಅಮೇರಿಕನ್ ಡಾಲರ್ ಚಲಾವಣೆಯಲ್ಲಿರುವುದು ನೂರು ಎಂದುಕೊಳ್ಳಿ ಚೀನಾ ಇಪ್ಪತ್ತೋ ಅಥವಾ ಮೂವತ್ತೋ ತನ್ನ ಕೈಯಲ್ಲಿ ವಿನಿಮಯದ ಹೆಸರಲ್ಲಿ ಕೊಂಡರೆ ಅಷ್ಟರ ಮಟ್ಟಿಗೆ ಅಮೇರಿಕಾದ ಹಣಕಾಸು ನಿರ್ಧಾರವನ್ನೂ ಕಂಟ್ರೋಲ್ ಮಾಡಬಹುದು. ಹಾಗೆಂದು ಚೀನಾ ಬೀಗುವ ಹಾಗೂ ಇಲ್ಲ. ಏಕೆಂದರೆ ಅಮೇರಿಕಾ ತನ್ನ ಹಣವನ್ನ ಅಪಮೌಲ್ಯ ಗೊಳಿಸಿದರೆ ಚೀನಾ ಅಷ್ಟು ಹಣವನ್ನ ಸುಮ್ಮನೆ ಕಳೆದು ಕೊಳ್ಳುತ್ತದೆ . ಅದಕ್ಕೆ ತಜ್ಞರು ಹೇಳುವುದು ಅವಶ್ಯಕತೆ ಮೀರಿ ಸಂಗ್ರಹಿಸಿದ ರಿಸರ್ವ್ ಹಣ ಕೂಡ ಒಳ್ಳೆಯದಲ್ಲ ಎಂದು. ಚೀನಾ – ಅಮೇರಿಕಾ ಎರಡೂ ಬೇಕೆಂದರೂ ಒಬ್ಬರನ್ನ ಒಬ್ಬರು ಬಿಟ್ಟಿರಲಾರದ , ಒಬ್ಬರು ಬಿದ್ದರೆ ಇನ್ನೊಬ್ಬರು ಬೀಳುವ ಸನ್ನಿವೇಶ ಸೃಷ್ಟಿಸಿಕೊಂಡಿದ್ದಾರೆ.
ಭಾರತದ ವಿದೇಶಿ ವಿನಿಮಯ ಏರುಗತಿಯಲ್ಲಿದೆ , ಅದು ಆರೋಗ್ಯಕರ ಸಂಖ್ಯೆಯಲ್ಲಿದೆ ಎಂದು ಲೇಖನ ಮೊದಲ ಸಾಲುಗಲ್ಲಿ ಹೇಳಿದ್ದು ಅದೆಷ್ಟು ಪ್ರಸ್ತುತ ಅದೆಂತ ಸಿಹಿ ಸುದ್ದಿ ಎನ್ನುವ ತಿಳಿವಳಿಕೆ ನಿಮ್ಮದಾಯಿತು ಎಂದುಕೊಳ್ಳುವೆ.

Leave a Reply