ಬಿಜೆಪಿಗೀಗ ಭಾದಿಸುತ್ತಿದೆ ತಲೆ ಕಡಿದು ತರುವ ಸೇಡಿನ ವೀರಾವೇಶ, 50 ತಲೆ ತನ್ನಿ- ಹುತಾತ್ಮ ಯೋಧನ ಮಗಳ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

ಈ ಹಿಂದೆ ಗಡಿಯಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದಾಗಲೆಲ್ಲ ಪ್ರತಿಪಕ್ಷ ಪಾಳೆಯದಲ್ಲಿರುವ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು. ಆಗ ವೀರಾವೇಶದ ಮಾತುಗಳನ್ನೂ ವರ್ಣನೆಗೆ ಬಳಸಿಕೊಳ್ಳುತ್ತಿತ್ತು.

‘ನಮ್ಮ ಯೋಧರ ಒಂದು ತಲೆಗೆ ಬದಲಾಗಿ ಹತ್ತು ತಲೆ ತನ್ನಿ ಎಂದು ಆದೇಶಿಸುವುದನ್ನು ಬಿಟ್ಟು ಮೌನಿ ಮನಮೋಹನ ಸಿಂಗ್ ಏನು ಮಾಡುತ್ತಿದ್ದಾರೆ’ ಎಂಬುದು ಬಿಜೆಪಿಗರ ಮಾತುಗಳಾಗಿದ್ದವು. ಇದೀಗ ಕೇಂದ್ರದಲ್ಲಿ ಬಹುಮತದೊಂದಿಗೆ ಅಧಿಕಾರದಲ್ಲಿರುವ ಬಿಜೆಪಿ ಮೇಲೆ ಅದೇ ಒತ್ತಡ ಬರುತ್ತಿದೆ.

ಹುತಾತ್ಮ ಕಾನ್ಸ್ಟೇಬಲ್ ಪ್ರೇಮ್ ಸಾಗರ್ ಮಗಳು ‘ನನ್ನ ತಂದೆಯ ಬಲಿದಾನಕ್ಕೆ ಪ್ರತಿಯಾಗಿ 50 ಪಾಕಿಸ್ತಾನಿ ತಲೆಗಳನ್ನು ತಂದುಕೊಡಿ’ ಎಂದಿದ್ದಾರೆ.

2013ರಲ್ಲಿ ಇಂಥದೇ ಪಾಕಿಸ್ತಾನಿ ಕೃತ್ಯದಲ್ಲಿ ಮಗ ಹೇಮ್ರಾಜ್ ಅವರ ಬಲಿದಾನವನ್ನು ನೋಡಿದ್ದ ಆ ಯೋಧನ ತಾಯಿ ಈಗ ಮಾಧ್ಯಮಗಳ ಮುಂದೆ ಕೇಳಿದ್ದಾರೆ- ‘ಅವತ್ತು ನನ್ನ ಮಗನ ತಲೆ ಕಡಿದಾಗ ಅದಕ್ಕೆ ಪ್ರತಿಯಾಗಿ 10 ತಲೆಗಳನ್ನು ತರುವ ಮಾತಾಗಿತ್ತು. ಈಗಂತೂ ದಿನಂಪ್ರತಿ ಎಂಬಂತೆ ಇಂಥ ಘಟನೆಗಳಾಗುತ್ತಿವೆ. ಏನಾಗುತ್ತಿದೆ’ ಅಂತ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಹ ಈ ಹಿಂದೆ ಖುದ್ದು ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಲವರು ವೀರಾವೇಶದಲ್ಲಿ ಮಾಡಿದ್ದ ಟ್ವೀಟ್ ಗಳನ್ನು ಎದುರಿಗಿಟ್ಟು ಉತ್ತರ ಬಯಸಲಾಗುತ್ತಿದೆ. ಬಿಜೆಪಿಯ ಗಿರಿರಾಜ್ ಸಿಂಗ್ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಇಂಥದೇ ಪ್ರಕರಣ ನಡೆದಿದ್ದಾಗ ‘ಮೋದಿಜೀ ಆಳ್ವಿಕೆ ಇದ್ದಿದ್ದರೆ ನಾವು ಇಷ್ಟೊತ್ತಿಗೆ ಕರಾಚಿಯಲ್ಲಿ ಇದ್ದಿರುತ್ತಿದ್ದೆವು’ ಎಂದೆಲ್ಲ ಟ್ವೀಟ್ ಮಾಡಿದ್ದರು.

ಪಾಕಿಸ್ತಾನದ ಘೋರ ಕೃತ್ಯದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಹ, ‘ಪ್ರಧಾನಿ ಮೋದಿ ಪಾಕಿಸ್ತಾನಿಯರಿಗೆ 56 ಇಂಚಿನ ಎದೆಯನ್ನು ಯಾವಾಗ ತೋರುತ್ತಾರೆ ಎಂದು ದೇಶ ಕಾತರಿಸಿದೆ’ ಎಂದು ಟೀಕಿಸಿದೆ.

Leave a Reply