ಪ್ರತೀಕಾರವಾಗಿ 7 ಮಂದಿ ಪಾಕ್ ಸೈನಿಕರನ್ನು ಭಾರತ ಕೊಂದಿದೆಯೇ? ಇದು ‘ಬಲ್ಲ ಮೂಲಗಳ’ ದೇಶಸೇವೆ!

ಡಿಜಿಟಲ್ ಕನ್ನಡ ಟೀಮ್:

ಜಮ್ಮು ಗಡಿಯ ಬಳಿ ಪಾಕಿಸ್ತಾನದ ಸೇನೆ ಇಬ್ಬರು ಯೋಧರನ್ನು ಶಿರಚ್ಛೇದಗೊಳಿಸಿರುವುದು ಇಡೀ ದೇಶವನ್ನು ಆಕ್ರೋಶದಲ್ಲಿ ನಿಲ್ಲಿಸಿದೆ. ಟ್ವಿಟ್ಟರಿನಲ್ಲಿ ‘ಬದ್ಲಾ ಲೊ’ ಎಂಬುದು ಟ್ರೆಂಡ್ ಆಯಿತು.

ಇದರ ಬೆನ್ನಲ್ಲೇ ಕೆಲವು ಮಾಧ್ಯಮ ವರದಿಗಳು, ಮುಖ್ಯವಾಗಿ ‘ಇಂಡಿಯಾ ಟುಡೆ’, ಅದಾಗಲೇ ಭಾರತೀಯ ಸೇನೆಯು ಕೃಷ್ಣಾಘಾಟಿ ಎದುರಿನ ಪಾಕ್ ಆಕ್ರಮಿತ ಪ್ರದೇಶದ ಮೇಲೆ ದಾಳಿ ನಡೆಸಿ ಎರಡು ಬಂಕರುಗಳನ್ನು ತೆರವುಗೊಳಿಸಿದೆಯಲ್ಲದೇ ಏಳು ಪಾಕಿಸ್ತಾನಿ ಯೋಧರನ್ನು ಕೊಂದು ಪ್ರತೀಕಾರ ತೀರಿಸಿಕೊಂಡಿದೆ ಎಂದು ಸಾರಿದೆ.

ಕೃಪನ್-1 ಫಿರಂಗಿಗಳ ಮೂಲಕ ತಾನು ಮರುದಾಳಿ ಮಾಡಿದ್ದಾಗಿ ನಿನ್ನೆಯೇ ನಾರ್ದನ್ ಕಮಾಂಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದಾದ ನಂತರ ಮಿಲಿಟರಿ ಕಡೆಯಿಂದ ಯಾವ ಪತ್ರಿಕಾ ಹೇಳಿಕೆಗಳೂ ಬಂದಿಲ್ಲ. ಈ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಸೇನೆಯ ಕಡೆಯಿಂದ ಪತ್ರಿಕಾಗೋಷ್ಟಿ ನಡೆಸಿ ದಾಳಿ ನಡೆದ ಬಗ್ಗೆ ಅಧಿಕೃತವಾಗಿ ಸಾರಲಾಗಿತ್ತು. ಅಂಥ ಯಾವ ಅಧಿಕೃತ ಹೇಳಿಕೆಗಳೂ ಸೇನೆ ಕಡೆಯಿಂದ ಬಂದಿಲ್ಲ.

ಹೀಗಾಗಿ ಏಳು ಯೋಧರನ್ನು ಕೊಂದು ಭಾರತ ಪ್ರತೀಕಾರ ತೀರಿಸಿಕೊಂಡಿದೆ ಎಂಬುದು ‘ಬಲ್ಲ ದೇಶಪ್ರೇಮಿ ಮೂಲಗಳ’ ಮಾಹಿತಿ ಅಷ್ಟೆ.

ನಕ್ಸಲ್ ದಾಳಿಗಳು, ಗಡಿಯಾಚೆಗಿಂದ ಹೆಚ್ಚುತ್ತಲೇ ಇರುವ ಆಕ್ರಮಣ ಇವೆಲ್ಲವೂ ಪ್ರಸ್ತುತ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಯುಪಿಎ ವಿರುದ್ಧ ಅಷ್ಟೆಲ್ಲ ಅಬ್ಬರಿಸಿದ ನೀವು ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆಗಳು ಒಂದೆಡೆ ಚುಚ್ಚುತ್ತಿದ್ದರೆ, ಇನ್ನೊಂದೆಡೆ ದೇಶಕ್ಕೆ ಒಬ್ಬ ಪೂರ್ಣಾವಧಿ ರಕ್ಷಣಾ ಮಂತ್ರಿಯನ್ನು ಹೊಂದುವ ಅವಸರವೂ ನಿಮಗಿಲ್ಲವೇ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತಿವೆ. ಈ ಹಂತದಲ್ಲಿ, ಭಾರತ ಅದಾಗಲೇ ಪ್ರತೀಕಾರ ತೀರಿಸಿಕೊಂಡುಬಿಟ್ಟಿದೆ ಎಂಬ ಮಾಧ್ಯಮ ವರದಿಗಳು ಅಷ್ಟರಮಟ್ಟಿಗೆ ಜನವರ್ಗದ ಒಂದು ಭಾಗವನ್ನು ತೃಪ್ತಗೊಳಿಸುವಲ್ಲಿ ಸಫಲವಾಗಿವೆ.

ಆದರೆ ಸಧ್ಯಕ್ಕೆ ಅಧಿಕೃತವಾಗಿ ಲಭ್ಯವಿರುವ ಮಾಹಿತಿ ಏನೆಂದರೆ ಸೇನಾ ಮುಖ್ಯಸ್ಥರು ದಾಳಿ ನಡೆದ ಸ್ಥಳಕ್ಕೆ ಧಾವಿಸಿದ್ದಾರೆ. ಅತ್ತ ಪಾಕಿಸ್ತಾನವು ತನ್ನ ಎಂದಿನ ಭಂಡತನದಲ್ಲಿ ಈ ದಾಳಿ ನಡೆದೇ ಇಲ್ಲ, ತನಗೇನೂ ಗೊತ್ತೇ ಇಲ್ಲ ಎಂದು ಪ್ರತಿಪಾದಿಸಿರುವುದು ಪಾಕಿಸ್ತಾನದ ಪ್ರಮುಖ ಪತ್ರಿಕೆ ‘ಡಾನ್’ನಲ್ಲಿ ವರದಿಯಾಗಿದೆ.

ಈಗಿನ ಸರ್ಕಾರಕ್ಕಾಗಲೀ, ಭಾರತೀಯ ಸೇನೆಗಾಗಲೀ ಪ್ರತೀಕಾರ ತೀರಿಸಿಕೊಳ್ಳುವ ಶಕ್ತಿ ಇದೆ ಎಂಬುದರ ಬಗ್ಗೆ ಯಾವ ಭಾರತೀಯನಿಗೂ ಶಂಕೆ ಇಲ್ಲ. ಆದರೆ ಈಗ ಪ್ರತೀಕಾರದ ವಿಷಯವಾಗಿ ನೀವು ಹಲವೆಡೆ ಓದುತ್ತಿರುವುದು ಬಲ್ಲ ಮೂಲಗಳ ದೇಶಸೇವೆಯ (ಸರ್ಕಾರ ಸೇವೆ) ಭಾಗವಷ್ಟೆ!

Leave a Reply