ಶ್ರೀನಿವಾಸ್ ಪ್ರಸಾದರಿಗೆ ಬಿಜೆಪಿಯಲ್ಲಿ ಹುದ್ದೆ: ಅಹಂ ಯುದ್ಧದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಹೋಗುತ್ತಿರೋ ಸಂದೇಶ ಏನು?

ಡಿಜಿಟಲ್ ಕನ್ನಡ ಟೀಮ್:

ಈಶ್ವರಪ್ಪ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಭಾನುಪ್ರಕಾಶ್ ಅವರನ್ನು ಬಿಜೆಪಿ ಕೇಂದ್ರ ನಾಯಕತ್ವ ಜವಾಬ್ದಾರಿ ಮುಕ್ತ ಮಾಡಿತಷ್ಟೆ. ಇದೀಗ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್ ಅವರನ್ನು ನೇಮಿಸುವ ಮೂಲಕ ಪರೋಕ್ಷವಾಗಿ ಖಾಲಿಯಾಗಿರುವ ಜಾಗ ತುಂಬಿರುವ ಸಂದೇಶ ಕೊಟ್ಟಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ.

ಯಥಾಪ್ರಕಾರ ಇದು ಈಶ್ವರಪ್ಪ ಅವರಿಗೆ ನೀಡಿದ ಟಾಂಗ್ ಎಂದು ವಿಶ್ಲೇಷಣೆಗಳಾಗುತ್ತಿವೆ.

ಆದರೆ ಈ ತಿಕ್ಕಾಟವು ಕಾರ್ಯಕರ್ತರ ಮೇಲೆ ಉಂಟುಮಾಡುವ ಪರಿಣಾಮ ಎಂಥಾದ್ದು ಎಂಬುದರ ಬಗ್ಗೆ ಮಾತ್ರ ಯಾರೂ ತಲೆಕೆಡಿಸಿಕೊಂಡಂತಿಲ್ಲ.

ಸೈದ್ಧಾಂತಿಕವಾಗಿ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಹಿಡಿಸುವವರೇನೂ ಅಲ್ಲ. ಅಷ್ಟಾಗಿಯೂ ಬಿಜೆಪಿಗೆ ಬಂದ ನಂತರ ತಮ್ಮ ದಲಿತ ವರ್ಚಸ್ಸಿನ ಜತೆಯಲ್ಲೇ ಪಕ್ಷದೊಳಗೆ ಮಿಳಿತವಾಗುವ ಗುಣ ತೋರಿಸಬಹುದು ಎಂಬುದನ್ನೂ ಹುಸಿಯಾಗಿಸಿದವರು. ಏಕೆಂದರೆ ಅವರ ಇಡೀ ಚುನಾವಣಾ ಪ್ರಚಾರದಲ್ಲಿ ತನಗೆ ಅನ್ಯಾಯವಾಯಿತು, ಸಿದ್ದರಾಮಯ್ಯ ವಿರುದ್ಧ ಮುಯ್ಯಿ ತೀರಿಸಿಕೊಳ್ಳಬೇಕಿದೆ ಅಂತ ಬುಸುಗುಟ್ಟಿದ್ದು ಬಿಟ್ಟರೆ ಮತ್ಯಾವ ಮಾತುಗಲನ್ನೂ ಅವರು ಆಡಿಲ್ಲ. ಆ ಮೂಲಕ ಬಿಜೆಪಿಯನ್ನು ಸೇರಿದ್ದು ಅಷ್ಟರಮಟ್ಟಿಗೆ ಮಾತ್ರ ಹಾಗೂ ನಂತರದ ಬಿಜೆಪಿ ಬೆಳವಣಿಗೆ ಬಗ್ಗೆ ತನಗೇನೂ ಆಸಕ್ತಿಯಿಲ್ಲ ಅಂತ ಅದಾಗಲೇ ತಮ್ಮ ವರ್ತನೆಗಳಲ್ಲಿ ತೋರ್ಪಡಿಸಿದವರು ಅವರು.

ಅಲ್ಲದೇ, ಉಪಚುನಾವಣೆ ಪ್ರಚಾರಕಾರ್ಯದಲ್ಲಿ ಸಹ ಯಡಿಯೂರಪ್ಪ ಮತ್ತು ಕಾರ್ಯಕರ್ತರು ಓಡಾಡಿದಷ್ಟೂ ಅವರು ಶ್ರಮ ಹಾಕಲಿಲ್ಲ ಎಂಬುದು ಜಗಜ್ಜಾಹೀರು. ಹೀಗೆಲ್ಲ ಇರುವಾಗ, ತಾನು ಎಂಬುದನ್ನು ಹೊರತುಪಡಿಸಿ ಲವಲೇಶದ ಇನ್ಯಾವ ಕಾಳಜಿಯೂ ಇರದ ವ್ಯಕ್ತಿಗೆ ಸೋತ ನಂತರವೂ ಹುದ್ದೆ ಕೊಟ್ಟರೆ ಈಶ್ವರಪ್ಪಗೆ ಸಿಗುವ ಟಾಂಗ್ ಹಾಗಿರಲಿ, ಕಾರ್ಯಕರ್ತರಿಗೇನನಿಸುತ್ತದೆ?

ಮೈಸೂರು ಭಾಗದಲ್ಲಿ ತಮ್ಮನ್ನೆಲ್ಲ ಕೋಮುವಾದಿಗಳೆಂದು ಜರಿದಾಡಿಕೊಂಡಿದ್ದ ವ್ಯಕ್ತಿ ಬಿಜೆಪಿ ಸೇರಿದ್ದೇ ಒಂದು ಇರಿಸುಮುರಿಸಾದರೆ, ಅದರ ಮೇಲೆ ಹುದ್ದೆ ಬೇರೆ.

ಅತೃಪ್ತರಾಗುವ ಕಾರ್ಯಕರ್ತರಿಗೆ ಪ್ರತಿಯಾಗಿ ತಮ್ಮದೇ ಬೆಂಬಲಿಗ ಪಡೆ ಇಟ್ಟುಕೊಂಡರಾಯಿತೆಂಬ ಯೋಚನೆ ಬಿಎಸ್ವೈ ಅವರದ್ದಾಗಿರಬಹುದು. ಅದು ಕಷ್ಟವೂ ಆಗಲಾರದು. ಆದರೆ ಆರೆಸ್ಸೆಸ್ ಮೇಲಿನ ಅಭಿಮಾನದಿಂದ ಕೈಜೋಡಿಸುವ ದೊಡ್ಡ ಸಮೂಹವೊಂದನ್ನು ಇಂಥ ನಡೆಗಳು ಪಕ್ಷದಿಂದ ದೂರ ಮಾಡುತ್ತವಷ್ಟೆ.

Leave a Reply