ಸದ್ಯದಲ್ಲೇ ಬಾನಂಗಳದಲ್ಲಿ ಹಾರಾಡಲಿದ್ದಾಳೆ ಬಸ್ ಕಂಡಕ್ಟರ್ ಮಗಳು!

  ಡಿಜಿಟಲ್ ಕನ್ನಡ ಟೀಮ್:

  ಕನಸು ಹಾಗೂ ಪರಿಶ್ರಮ ಇವೆರಡೂ ಜತೆಗೂಡಿದರೆ ಯಶಸ್ಸು ಸಾಧ್ಯ ಎಂಬುದನ್ನು ಅದೆಷ್ಟೋ ಸಾಧಕರು ನಿಜ ಮಾಡಿರುವುದನ್ನು ನಾವು ನೋಡಿದ್ದೇವೆ. ಈಗ ಈ ಮಾತನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಗುಜರಾತಿನ ಬಸ್ ಕಂಡಕ್ಟರ್ ಮಗಳು ಐಶ್ವರ್ಯ ಪಟೇಲ್.

  ಚಿಕ್ಕ ವಯಸ್ಸಿನಿಂದಲೇ ಪೈಲೆಟ್ ಆಗಿ ವಿಮಾನ ಹಾರಾಟ ನಡೆಸಬೇಕು ಎಂಬ ಕನಸು ಕಟ್ಟಿದ್ದ ಐಶ್ವರ್ಯ, ಕೆಲವೇ ದಿನಗಳಲ್ಲಿ ವಾಣಿಜ್ಯ ವಿಮಾನದ ಪೈಲೆಟ್ ಆಗಿ ಅಧಿಕೃತ ಲೈಸೆನ್ಸ್ ಪಡೆಯಲಿದ್ದಾರೆ. ಸದ್ಯ 200 ಗಂಟೆಗಳ ತರಬೇತಿಯಲ್ಲಿ 184 ಗಂಟೆಗಳನ್ನು ಮುಕ್ತಾಯಗೊಳಿಸಿರುವ ಈಕೆ ಶೀಘ್ರದಲ್ಲೇ ಪೈಲೆಟ್ ಆಗಲಿದ್ದಾರೆ.

  ಐಶ್ವರ್ಯಗೆ ವಿಮಾನ ಹಾರಾಟ ಮಾಡಬೇಕೆಂಬ ಕನಸು ಈಡೇರಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಕಾರಣ, ಕುಟುಂಬದ ಆರ್ಥಿಕ ಸಮಸ್ಯೆ. ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಐಶ್ವರ್ಯ ತಂದೆಗೆ ₹ 25 ಲಕ್ಷ ಹಣ ಕೊಟ್ಟು ಪೈಲೆಟ್ ತರಬೇತಿ ಕೊಡಿಸುವ ಶಕ್ತಿ ಇರಲಿಲ್ಲ. ಈಕೆಗೆ ಆರ್ಥಿಕವಾಗಿ ನೆರವಾಗಲು ಸಾಧ್ಯವಾಗದಿದ್ದರೂ ಪ್ರೋತ್ಸಾಹ ನೀಡಲು ಈಕೆಯ ಮನೆಯವರು ಯಾವತ್ತೂ ಹಿಂದೆ ಬೀಳಲಿಲ್ಲ. ತನ್ನ ಕನಸನ್ನು ನನಸಾಗಿಸಿಕೊಳ್ಳಬೇಕೆಂಬ ಹಠ ಹೊಂದಿದ್ದ ಐಶ್ವರ್ಯ ದ್ವಿತಿಯ ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.70 ಅಂಕ ಪಡೆದರು. ನಂತರ ತಮ್ಮ ಬಳಿ ಹಣವಿಲ್ಲದ ಕಾರಣ ಪೈಲೆಟ್ ತರಬೇತಿಗಾಗಿ ಸಾಲ ಪಡೆದರು. ಕೆಲವೇ ದಿನಗಳಲ್ಲಿ ಈ ತರಬೇತಿ ಪೂರ್ಣಗೊಳಿಸಲಿರುವ ಐಶ್ವರ್ತ ತಮ್ಮ ಸಾಧನೆ ಬಗ್ಗೆ ಹೇಳೋದಿಷ್ಟು…

  ‘ನಮ್ಮಲ್ಲಿ ಗುರಿ ಸಾಧನೆ ಮಾಡಬೇಕೆಂಬ ಛಲ ಇದ್ದರೆ ಯಾವ ಸಾಧನೆ ಬೇಕಾದರೂ ಸಾಧಿಸಬಹುದು. ಪೈಲೆಟ್ ಆಗಬೇಕೆಂಬುದು ನನ್ನ ಚಿಕ್ಕ ವಯಸ್ಸಿನ ಕನಸು. ಆದರೆ ಕುಟುಂಬದ ಆರ್ಥಿಕ ಸಂಕಷ್ಟದಿಂದ ನನ್ನ ಈ ಹಾದಿ ಸುಲಭವಾಗಿರಲಿಲ್ಲ. ತರಬೇತಿಗೆ ದೊಡ್ಡ ಮೊತ್ತದ ಹಣ ಇಲ್ಲದ ಕಾರಣ ನಾವು ಜಿಲ್ಲಾ ನಿಯಮಕ್ ಕಚೇರಿ ಹಾಗೂ ರಾಜ್ಯ ಸರ್ಕಾರಗಳಿಂದ ಶೇ.4ರ ಬಡ್ಡಿದರದಲ್ಲಿ ₹ 25 ಲಕ್ಷ ಸಾಲ ಪಡೆದು ತರಬೇತಿ ಪಡೆಯುತ್ತಿದ್ದೇನೆ. ತರಬೇತಿಯಲ್ಲಿನ ಪ್ರತಿ ಪರೀಕ್ಷೆಯು ನನಗೆ ಬಹಳ ಪ್ರಮುಖವಾದುದು. ಯಾವುದೇ ಒಂದೇ ಒಂದು ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿ ಎರಡನೇ ಅವಕಾಶ ಪಡೆಯುವ ಪರಿಸ್ಥಿತಿಯಲ್ಲಿ ನಾನಿಲ್ಲ. ಪ್ರತಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡುತ್ತಿದ್ದೇನೆ. ನಾನು ಭವಿಷ್ಯದಲ್ಲಿ ವಾಣಿಜ್ಯ ವಿಮಾನದ ಕಮಾಂಡರ್ ಆಗಿ ಕೆಲಸ ಆಗಬೇಕೆಂಬ ಆಸೆ ಇದೆ.’

  Leave a Reply