ಡಿಜಿಟಲ್ ಕನ್ನಡ ವಿಶೇಷ:
ಫೇಸ್ಬುಕ್ ನಲ್ಲಿ ಖುದ್ದು ಮಾರ್ಕ್ ಜುಕರ್ಬರ್ಗ್ ಹಾಕುತ್ತಿರುವ ಅವರ ಚಿತ್ರಗಳು ಸಾರುತ್ತಿರುವಂತೆ ಸಧ್ಯಕ್ಕವರು ಅಮೆರಿಕದ ಉದ್ದಗಲವನ್ನು ಸುತ್ತುತ್ತಿದ್ದಾರೆ. ಈ ಪ್ರಯಾಣದಲ್ಲಿ ಕೇವಲ ಪಟ್ಟಣ- ರೆಸಾರ್ಟುಗಳಿದ್ದಾವೆ ಅಂದುಕೊಳ್ಳಬೇಡಿ. ಅಮೆರಿಕದ ಮೂಲೆ ಮೂಲೆಯನ್ನೆಲ್ಲ ಸಂದರ್ಶಿಸುತ್ತಿರುವ ಮಾರ್ಕ್ ಜನರೊಂದಿಗೆ ಮಾತಿಗಿಳಿಯುತ್ತಿದ್ದಾರೆ.
ಹಾಗೆಂದೇ ಹುಟ್ಟಿಕೊಂಡಿರುವ ಪ್ರಶ್ನೆ- ಮಾರ್ಕ್ ಈಗಿಂದಲೇ ಭವಿಷ್ಯದಲ್ಲಿ ಅಮೆರಿಕದ ಅಧ್ಯಕ್ಷರಾಗುವುದಕ್ಕೆ ಜನರ ಮಧ್ಯೆ ಹೋಗುತ್ತಿದ್ದಾರಾ ಅಂತ. ಇಂಥ ಪ್ರಶ್ನೆಗಳನ್ನೆಲ್ಲ ಮಾರ್ಕ್ ಪಕ್ಕಕ್ಕೆ ತಳ್ಳಿದ್ದಾರೆ. ಮಾರ್ಕ್ ಸಹವರ್ತಿಗಳು ಸಹ ಹೇಳೋದು- ಆತ ತನ್ನ ಹೆಂಡತಿಯ ಸ್ವಯಂಸೇವಾಸಂಸ್ಥೆಗೆ ಸಹಕರಿಸುವ ದೃಷ್ಟಿಯಿಂದ ಹಾಗೂ ಜನರ ಇಂಗಿತ ಅರ್ಥ ಮಾಡಿಕೊಳ್ಳುವುದಕ್ಕೆ ಪ್ರವಾಸ ಮಾಡುತ್ತಿದ್ದಾರೆ. ಆದರೆ ಫೇಸ್ಬುಕ್ ಯಜಮಾನನಿಗೆ ಪ್ರಸ್ತುತವಾಗಬೇಕಾದ ಜನರ ಇಂಗಿತ ಕೇವಲ ಅಮೆರಿಕದ್ದು ಮಾತ್ರ ಅಲ್ಲವಲ್ಲ…
ತಮ್ಮ 2017ರ ಸವಾಲು ಏನೆಂದರೆ ಅಮೆರಿಕದ ಪ್ರತಿ ರಾಜ್ಯವನ್ನೂ ಸಂದರ್ಶಿಸುವುದು ಅಂತ ಈ ವರ್ಷದಾರಂಭದಲ್ಲೇ ಮಾರ್ಕ್ ಬರೆದುಕೊಂಡಿದ್ದರು. ನಂತರದ ಅವರ ಸಂದರ್ಶನ ಮಾದರಿಗಳು ತುಸು ರಾಜಕೀಯದ ಘಾಟನ್ನು ಹೊಂದಿರುವುದು ಸುಳ್ಳಲ್ಲ. ಅವರು ಮಿಚಿಗನ್ ನ ಫೋರ್ಡ್ ಫ್ಯಾಕ್ಟರಿಗೆ ಭೇಟಿ ನೀಡಿದಾಗ ಅವರಿಗೆ ಆತಿಥ್ಯ ನೀಡಿದ್ದು ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದ ಕುಟುಂಬ. ಇಂಡಿಯಾನಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಮೇಯರ್ ಜತೆ ಸುತ್ತಾಡಿದರು. ನಂತರ ವಿಸ್ಕಾನ್ಸಿನ್ ನಲ್ಲಿ ಕರುವಿಗೆ ಹಾಲು ಕುಡಿಸಿ, ಸ್ಥಳೀಯ ಖ್ಯಾತಿಯ ಚೀಸ್ ಖಾದ್ಯವನ್ನು ಚಪ್ಪರಿಸಿದರು. ಈ ಭೇಟಿಯ ಎಲ್ಲ ಮಜಲುಗಳಲ್ಲೂ ಚಿತ್ರ ತೆಗೆದು ಫೇಸ್ಬುಕ್ ನಲ್ಲಿ ಪ್ರಚಾರವಾಗುವಂತೆ ನೋಡಿಕೊಂಡರು.
ಡೊನಾಲ್ಡ್ ಟ್ರಂಪ್ ಎಂಬ ಅಪ್ಪಟ ಬಿಸಿನೆಸ್ ಮನುಷ್ಯ ಅಮೆರಿಕ ಅಧ್ಯಕ್ಷರಾಗಿರುವಾಗ, ಅದಾಗಲೇ ಜಾಗತಿಕ ಖ್ಯಾತಿ ಗಳಿಸಿರುವ ಜುಕರ್ಬರ್ಗ್ ಶ್ವೇತಭವನ ಪ್ರವೇಶಿಸುವ ದೃಶ್ಯ ಊಹಾತೀತವೇನಲ್ಲ. ವಯಸ್ಸು ಬೇರೆ ಅವರ ಪರವಿದೆ.
ಹೀಗಾಗಿ 2020 ಇಲ್ಲವೇ 2024ರಲ್ಲಿ ಇಂಥ ದೃಶ್ಯವೇನಾದರೂ ಗರಿಗೆದರಿಕೊಳ್ಳಬಹುದಾ ಎಂಬುದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಚ್ಚಿಕೊಳ್ಳುತ್ತಿರುವ ಬಿಸಿ ಚರ್ಚೆ.