ಐಎಸ್ಐಎಸ್ ಉಗ್ರನನ್ನು ಪತ್ತೆಹಚ್ಚಲು ಹೋದವಳು, ಪ್ರೇಮದ ಬಲೆಗೆ ಸಿಲುಕಿದಳು!

ಡಿಜಿಟಲ್ ಕನ್ನಡ ಟೀಮ್:

ಉಗ್ರನನ್ನು ಪತ್ತೆ ಹಚ್ಚಲು ಹೋದವಳು ಆತನ ಪ್ರೇಮದ ಬಲೆಗೆ ಸಿಕ್ಕಿಕೊಂಡಳು… ಇದು ಸಿನಿಮಾ ಕಥೆಯ ಅಲ್ಲ. ಬದಲಿಗೆ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ನ ಡೇನಿಯಲ್ ಗ್ರೀನ್ ಎಂಬ ಮಹಿಳಾ ಅಧಿಕಾರಿ ನೈಜ್ಯ ಕಥೆ!

ಜರ್ಮನಿನ ಮಾಜಿ ರಾಪ್ ಸಂಗೀತಗಾರ ಹಾಗೂ ಇಸ್ಲಾಮಿಕ್ ಸ್ಟೇಟ್ ನ ಹಾಲಿ ಸದಸ್ಯ ಡೆನಿಸ್ ಕಸ್ಪೆರ್ಟ್ ನನ್ನ ಪತ್ತೆಹಚ್ಚಿ ಆತನ ವಿರುದ್ಧ ತನಿಖೆ ನಡೆಸಲು ಸಿರಿಯಾಗೆ ಪ್ರಯಾಣ ಬೆಳೆಸಿದ್ದ ಡೇನಿಯಲ್ ಗ್ರೀನ್, ನಂತರ ಅವರ ಪ್ರೇಮಕ್ಕೆ ಸಿಲುಕಿ, ತನ್ನ ಕರ್ತವ್ಯವನ್ನೇ ಮರೆತಳು. ಆತನ ಜತೆ ಪ್ರೇಮಕ್ಕೆ ಸಿಲುಕಿದ ಕೆಲವೇ ದಿನಗಳಲ್ಲಿ ತನ್ನ ತಪ್ಪಿನ ಅರಿವಾಗಿ ಅಮೆರಿಕಕ್ಕೆ ಮರಳಿದ ಡೇನಿಯಲ್, ತಾನು ತನ್ನ ಕರ್ತವ್ಯ ನಿಭಾಯಿಸುವಲ್ಲಿ ವಿಫಲವಾಗಿದ್ದು ಅಂತಾರಾಷ್ಟ್ರೀಯ ಭಯೋತ್ಪಾದನೆ ವಿಷಯದಲ್ಲಿ ಸುಳ್ಳು ಮಾಹಿತಿ ನೀಡಿದ್ದಾಗಿ ತಪ್ಪೊಪ್ಪಿಕೊಂಡಳು. ನಂತರ ಈಕೆಗೆ 2 ವರ್ಷ ಶಿಕ್ಷೆಯಾಗಿ ಕಳೆದ ವರ್ಷ ಆಗಸ್ಟ್ ನಲ್ಲಿ ಬಿಡುಗಡೆಯಾಗಿದ್ದಾಳೆ ಎಂಬ ಮಾಹಿತಿಯನ್ನು ಸಿಎನ್ಎನ್ ವರದಿ ಈಗ ಬಹಿರಂಗ ಮಾಡಿದೆ.

ಈ ಪ್ರಕರಣದಲ್ಲಿ ಆಗಿದ್ದೇನು ಎಂದು ನೋಡುವುದಾದರೆ,

ಜರ್ಮನಿಯ ಪ್ರಜೆಯಾಗಿದ್ದ ಡೆನಿಸ್ ಕಸ್ಪೆರ್ಟ್ ವಿರುದ್ಧ ತನಿಖೆ ನಡೆಸಲು ಡೇನಿಯಲ್ 2014ರ ಜನವರಿ 14 ರಂದು ಜರ್ಮನಿಗೆ ಪ್ರಯಾಣ ಬೆಳೆಸಿದಳು. ಡೆಸೊ ಡೊಗ್ ಎಂಬ ಹೆಸರಿನ ಗ್ಯಾಂಗ್ ಸ್ಟರ್ ರಾಪರ್ ಆಗಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ಡೆನಿಸ್, ತಮ್ಮ ಹಾಡುಗಳು ಹಾಗೂ ವಿಡಿಯೋಗಳ ಮೂಲಕ ಐಎಸ್ಐಎಸ್ ಸಂಘಟನೆ ಪರವಾಗಿ ಹೋರಾಡಲು ಯುವಕರಿಗೆ ಉತ್ತೇಜನ ನೀಡುತ್ತಿದ್ದ. ಆ ಮೂಲಕ ಈತ ಉಗ್ರ ಸಂಘಟನೆಗೆ ಜನರನ್ನು ಸೆಳೆಯುವ ಪ್ರಮುಖ ವ್ಯಕ್ತಿಯಾಗಿ ಖ್ಯಾತಿ ಪಡೆದಿದ್ದ. ತನ್ನ ಅನೇಕ ಸಂಗೀತದಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಹೊಗಳಿದ್ದ ಡೆನಿಸ್, ಒಬಾಮಾಗೆ ಎಚ್ಚರಿಕೆ ನೀಡಿದ್ದನು.

ಈತನ ವಿರುದ್ಧ ತನಿಖೆಗಾಗಿ ನೇಮಕವಾದ ಡೇನಿಯಲ್, ಜರ್ಮನಿಯಲ್ಲಿರುವ ತನ್ನ ಕುಟುಂಬವನ್ನು ಕಾಣಲು ತೆರಳುತ್ತಿರುವುದಾಗಿ ಪ್ರಯಾಣ ಮಾಡಿದ್ದಳು. ಆದರೆ ಟರ್ಕಿಗೆ ಪ್ರಯಾಣ ಮಾಡಿದ ಈಕೆ ಅಲ್ಲಿಂದ ಸಿರಿಯಾಗೆ ತೆರಳಿದ್ದಳು. ನಂತರ ಡೆನಿಸ್ ನ ಪ್ರೇಮದ ಬಲೆಗೆ ಸಿಕ್ಕಿ ಆತನನ್ನು ಮದುವೆಯಾಗಿದ್ದಳು. ಕೆಲ ದಿನಗಳ ನಂತರ ತನ್ನ ತಪ್ಪಿನ ಅರಿವಾಗಿ ಅಮೆರಿಕದ ವ್ಯಕ್ತಿಯೊಬ್ಬನಿಗೆ ಇಮೇಲ್ ಮಾಡಿದ್ದ ಡೇನಿಯಲ್, ‘ತಾನು ಈ ಬಾರಿ ಕರ್ತವ್ಯ ನಿಭಾಯಿಸುವಲ್ಲಿ ಎಡವಿದ್ದು, ತಪ್ಪು ಮಾಡಿ ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದೇನೆ’ ಎಂದು ತಿಳಿಸಿದ್ದಳು ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ದಾಖಲೆಗಳಿಂದ ಸ್ಪಷ್ಟವಾಗಿವೆ.

2014ರ ಆಗಸ್ಟ್ ವೇಳೆಗೆ ಡೇನಿಯಲ್ ಕರ್ತವ್ಯ ಲೋಪ ಎಸಗಿರುವ ಮಾಹಿತಿ ಸಿಗುತ್ತಿದ್ದಂತೆ ಆಕೆಯ ವಿರುದ್ಧ ಅಮೆರಿಕ ಅಧಿಕಾರಿಗಳು ವಾರೆಂಟ್ ಜಾರಿಗೊಳಿಸಿದರು. ವಾರೆಂಟ್ ಜಾರಿಯಾದ ಏಳು ದಿನಗಳ ನಂತರ ಅಮೆರಿಕಕ್ಕೆ ಮರಳಿದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಈಕೆ ಎಫ್ ಬಿಐ ಸಂಸ್ಥೆಗೆ ನೀಡಿರುವ ಸೇವೆ ಹಾಗೂ ಆಕೆಯ ತಪ್ಪೊಪ್ಪಿಗೆಯನ್ನು ಪರಿಗಣಿಸಿ ನ್ಯಾಯಾಲಯ ಆಕೆಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Leave a Reply