ಪೋರ್ನ್ ಬ್ಯಾನ್ ಮಾಡಲು ಯೋಚಿಸುತ್ತಿದ್ದ ಪಕ್ಷದ ಎಂಎಲ್ಸಿಯ ಪೋಲಿ ಎಡವಟ್ಟು, ಬೆಳಗಾವಿ ಬಿಜೆಪಿ ಎಂಎಲ್ಸಿ ವಾಟ್ಸಾಪಿನಲ್ಲಿ ಹರಿಯಿತು ನೀಲಿಚಿತ್ರ

ಡಿಜಿಟಲ್ ಕನ್ನಡ ಟೀಮ್:

ಅಶ್ಲೀಲ ಚಿತ್ರ ಹಾಗೂ ವಿಡಿಯೋ ಸಂಬಂಧ ನಮ್ಮ ರಾಜಕೀಯ ನಾಯಕರು ಸುದ್ದಿಯಾಗುತ್ತಾರುವುದು ಮಾಮೂಲಾಗಿ ಬಿಟ್ಟಿದೆ. ವಿಧಾನಸೌಧದಲ್ಲಿ ವೀಕ್ಷಣೆ, ಸಾಮಾಜಿಕ ಸಮಾರಂಭಗಳಲ್ಲಿ ವೀಕ್ಷಣೆ ಪ್ರಕರಣಗಳ ಬೆನ್ನಲ್ಲೇ ಇಂತಹುದೇ ಮತ್ತೊಂದು ಪ್ರಕರಣ ನಡೆದಿದ್ದು, ಈ ಬಾರಿ ಬೆಳಗಾವಿಯ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್ ಈಗ ಈ ವಿಚಾರವಾಗಿ ಸುದ್ದಿಯಾಗಿದ್ದಾರೆ. ಮಂಗಳವಾರ ಸಂಜೆಯ ವೇಳೆಗೆ ನಡೆದಿರುವ ಪ್ರಕರಣವಿದು.

ಮಾಹಂತೇಶ್ ಅವರು ‘ಬೆಳಗಾವಿ ಮಿಡಿಯಾ ಫೋರ್ಸ್’ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಅಶ್ಲೀಲ ಚಿತ್ರವನ್ನು ಹಾಕಿ ವಿವಾದಕ್ಕೆ ಸಿಲುಕಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರಮುಖ ಪತ್ರಕರ್ತರು ಹಾಗೂ ಜಿಲ್ಲಾ ಸರ್ಕಾರಿ ಅಧಿಕಾರಿಗಳು ಇರುವ ಈ ಗ್ರೂಪ್ ನಲ್ಲಿ ಪೊರ್ನ್ ಸ್ಟಾರ್ ಗಳ ನಗ್ನ ಚಿತ್ರಗಳ ಪಿಡಿಎಫ್ ಫೈಲ್ ಒಂದನ್ನು ಮಹಾಂತೇಶ್ ಅವರು ಶೇರ್ ಮಾಡಿದ್ದಾರೆ. ಈ ಬೆಳವಣಿಗೆ ನಂತರ ಗ್ರೂಪ್ ಅಡ್ಮಿನ್ ಆದ ಮಹಬೂಬ್ ಮಕಂದರ್ ಅವರು ಮಹಾಂತೇಶ್ ಅವರನ್ನು ಗ್ರೂಪ್ ನಿಂದ ತೆಗೆದುಹಾಕಿದರು ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಈ ವಾಟ್ಸಪ್ ಗ್ರೂಪ್ ನಲ್ಲಿ ಪೊಲೀಸ್ ಅಧಿಕಾರಿಗಳು ಇದ್ದರೂ, ಮಹಾಂತೇಶ್ ಅವರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮಹಾಂತೇಶ್ ಸಂಪರ್ಕಕ್ಕೆ ಸಿಗುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ರವೀಂದ್ರ ಗದಡಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ದೂರು ನೀಡಿಲ್ಲ. ಹೀಗಾಗಿ ಮಹಾಂತೇಶ್ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಯಾವುದಾದರು ವ್ಯಕ್ತಿ ಮಕ್ಕಳ ಪೊರ್ನೊಗ್ರಫಿನ್ನು ಹಾಕಿದರೆ ಮಾತ್ರ ನಾವು ಸುಮೊಟೊ ಆಧಾರದ ಮೇಲೆ ಸ್ವಯಂ ಪ್ರಕರಣ ದಾಖಲಿಸಬಹುದು. ಹೀಗಾಗಿ ಈ ಪ್ರಕರಣದಲ್ಲಿ ಯಾರಾದರು ಮುಂದೆ ಬಂದು ದೂರು ನೀಡುವವರೆಗೂ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ.

ಖಾಸಗಿ ವೃತ್ತದಲ್ಲಿ ನಡೆದ ಅಚಾನಕ್ ಪ್ರಕರಣ ಇದೆಂದು ಗೌಣ ಮಾಡಬಹುದಾದರೂ ರಾಜಕಾರಣದಲ್ಲಿ ಕಾಮಕಾರಣ ಜೋರಾಗಿಯೇ ಕೆಣಕಿಕೊಂಡಿದೆ ಎಂಬುದು ಆಗಾಗ ಸಾಬೀತಾಗುತ್ತಿದೆ.

ಅಂದಹಾಗೆ ಕೇಂದ್ರದಲ್ಲಿ ಈ ಮೊದಲು ಬಿಜೆಪಿ ಸರ್ಕಾರವು ಅಶ್ಲೀಲ ತಾಣಗಳನ್ನು ನಿಷೇಧಿಸುವ ವಿಚಾರಕ್ಕೆ ಆಸಕ್ತಿ ವಹಿಸಿ, ನಂತರ ಆ ನಡೆಯಿಂದ ಹಿಂದೆ ಸರಿದಿತ್ತು.

Leave a Reply